ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಕನ್ನಡ ನೆಲ-ಜಲ ರಕ್ಷಣೆಗೆ ಬದ್ಧ: ಮುಖ್ಯಮಂತ್ರಿ

know_the_cm

(ಸಂಕೇಶ್ವರ, ಬೆಳಗಾವಿ), ಸೆಪ್ಟೆಂಬರ್ 25, 2021

-ರಾಜ್ಯದ ನೆಲ-ಜಲ‌‌ ಹಾಗೂ‌ ಜನರ ರಕ್ಷಣೆಗೆ ಸರಕಾರ ಕಟಿಬದ್ಧವಾಗಿದೆ. ಇದಲ್ಲದೇ ಉತ್ತರ ಕರ್ನಾಟಕ ಅಭಿವೃದ್ಧಿ ಸೇರಿದಂತೆ ಕೃಷ್ಣಾ ಯೋಜನೆಯಡಿ ರಾಜ್ಯದ ಪಾಲಿನ ನೀರಿನ ಸಂಪೂರ್ಣ ಬಳಕೆಗೆ ಸರಕಾರ ಬದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

-ಸಂಕೇಶ್ವರ ಪಟ್ಟಣದಲ್ಲಿ 4 ಕೋಟಿ ರೂಪಾಯಿ ವೆಚ್ಚದ ನೂತನ ಬಸ್ ನಿಲ್ದಾಣ ಹಾಗೂ ಎಸ್.ಎಫ್.ಸಿ. 3.50 ಕೋಟಿ ಅನುದಾನದಲ್ಲಿ ನಿರ್ಮಿಸಲಾದ ಪುರಸಭೆ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ನೇಸರಿ ಗಾರ್ಡನ್ ನಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರಕಾರಿ ಸೇವೆಗಳ ವಿಕೇಂದ್ರೀಕರಣ:

-ಜನವರಿ 26 ರಿಂದ ಐದು‌ ಜಿಲ್ಲೆಗಳಲ್ಲಿ ಸರಕಾರದ ಪ್ರತಿಯೊಂದು ಸೇವೆಗಳನ್ನು ಗ್ರಾಮ‌ ಪಂಚಾಯಿತಿ ಮೂಲಕ ನೀಡುವ ವ್ಯವಸ್ಥೆ ಮಾಡಲಾಗುವುದು.ಸರಕಾರಿ ಸೇವೆಗಳ ವಿಕೇಂದ್ರೀಕರಣ ಮಾಡುವ ಮೂಲಕ ಜನರ ಮನೆಬಾಗಿಲಿಗೆ ಸೇವೆ ಒದಗಿಸಲಾಗುವುದು. ಇದಕ್ಕೆ ಸರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.ರೈತರ ಮಕ್ಕಳಿಗೆ ಶಿಷ್ಯವೇತನ ಒದಗಿಸುವ ಮೂಲಕ ಅವರ ಬದುಕಿಗೆ ಸರಕಾರ ಆಸರೆ‌ಯಾಗಲಿದೆ. ರೈತರ ಮಕ್ಕಳು ಬೇರೆ‌ಬೇರೆ‌ ರೀತಿಯ ವೃತ್ತಿಶಿಕ್ಷಣ ಪಡೆಯಲು ಈ ಯೋಜನೆ ಸಹಕಾರಿಯಾಗಲಿದೆ.ಅಮೃತ‌ ಯೋಜನೆಗಳ ಜಾರಿ ಮೂಲಕ ಹಳ್ಳಿಗಳ ಪ್ರಗತಿಗೆ ಸರಕಾರ ಮುಂದಾಗಿದೆ ಎಂದರು.

ಏತ ನೀರಾವರಿ ಯೋಜನೆಗಳಿಗೆ ಶೀಘ್ರ ಚಾಲನೆ:

-ಶಂಕರಲಿಂಗ ಏತ ನೀರಾವರಿ ಹಾಗೂ ಅಡವಿ ಸಿದ್ಧೇಶ್ವರ ಏತ ನೀರಾವರಿ ಯೋಜನೆಗಳನ್ನು ಶೀಘ್ರ ಆರಂಭಿಸಲಾಗುವುದು. ಅದೇ ರೀತಿ ಆರು ಬ್ಯಾರೇಜ್ ತುಂಬಿಸಲು ಆದಷ್ಟು ಬೇಗನೇ ಮಂಜೂರಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.ಪ್ರಧಾನಮಂತ್ರಿಗಳ ದೂರದೃಷ್ಟಿಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಒಟ್ಟಾರೆ ಅಭಿವೃದ್ಧಿ ನಿಟ್ಟಿನಲ್ಲಿ ‌ಸರಕಾರ ಕೆಲಸ ಮಾಡಲಿದೆ ಎಂದು ಹೇಳಿದರು.

ಸಂಕೇಶ್ವರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ:

-ಸಂಕೇಶ್ವರ ಪಟ್ಟಣಕ್ಕೆ‌ ಸಂಪೂರ್ಣ ಒಳಚರಂಡಿ ವ್ಯವಸ್ಥೆ ಯೋಜನೆಗೆ ವರ್ಷಾಂತ್ಯದ ಲ್ಲಿ ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ವಿಶ್ವನಾಥ್ ಕತ್ತಿ ಹಾಗೂ ತಮ್ಮ ತಂದೆಯವರಾದ ದಿ.ಎಸ್.ಆರ್.ಬೊಮ್ಮಾಯಿ ಅವರ ಆತ್ಮೀಯ ಒಡನಾಟವನ್ನು ಸ್ಮರಿಸಿದರು. ಅಧಿಕಾರ ಶಾಶ್ವತವಲ್ಲ; ಪ್ರತಿದಿನ ಇದನ್ನು ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ. ಜನರ ಮನಸ್ಸಿನಲ್ಲಿ ನಮ್ಮ ಬಗ್ಗೆ ಪ್ರೀತಿ-ವಿಶ್ವಾಸ ಇರುವವರೆಗೆ ನಾವು ಅಧಿಕಾರದಲ್ಲಿರುತ್ತೇವೆ ಎಂದರು. ಜನರ‌ ಸುತ್ತ ಅಭಿವೃದ್ಧಿ ಕೆಲಸಗಳಾಗಬೇಕು; ಸುಸಜ್ಜಿತ ಬಸ್ ನಿಲ್ದಾಣ, ಪುರಸಭೆ ಕಟ್ಟಡಗಳಿಂದ ಇಡೀ ತಾಲ್ಲೂಕಿನ ಹಾಗೂ ‌ಪಟ್ಟಣದ ಜನರಿಗೆ ಅನುಕೂಲವಾಗಲಿದೆ ಎಂದರು.

ವಸತಿ ಕಲ್ಪಿಸಲು 50 ಎಕರೆ ಜಮೀನು ಹಸ್ತಾಂತರ:

-ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಸಂಕೇಶ್ವರ ಹೋಬಳಿಯ ಹರಗಾಪುರ ಗ್ರಾಮದ ಸರಕಾರಿ ಗಾಯರಾಣದ 50 ಎಕರೆ‌ ಜಮೀನನ್ನು ವಸತಿರಹಿತರಿಗೆ ವಸತಿ ಕಲ್ಪಿಸಲು ಸಂಕೇಶ್ವರ ಪುರಸಭೆಗೆ ಹಸ್ತಾಂತರಿಸಿದರು.

*************