ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ರೇವಣಸಿದ್ದೇಶ್ವರ ಏತ ನೀರಾವರಿಯ ಮೊದಲನೇ ಹಂತಕ್ಕೆ ಇದೇ ವರ್ಷ ಅನುಮೋದನೆ: ಮುಖ್ಯಮಂತ್ರಿ

know_the_cm

(ವಿಜಯಪುರ), ಏಪ್ರಿಲ್ 26, 2022

-ರೇವಣಸಿದ್ದೇಶ್ವರ ಏತ ನೀರಾವರಿಯ ಮೊದಲನೇ ಹಂತಕ್ಕೆ ಇದೇ ವರ್ಷ ಅನುಮೋದನೆ ನೀಡಿ ಬರುವ ದಿನಗಳಲ್ಲಿ ನೀರಾವರಿಗೆ ಇನ್ನಷ್ಟು ಕೆಲಸಗಳಿಗೆ ಹೆಚ್ಚಿನ ಇಂಬು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

-ಅವರು ವಿಜಯಪುರದ ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಯ ಹಂತ-1ರ ಪೈಪ್ ವಿತರಣಾ ಜಾಲದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.

-ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಬಹಳ ಜನ ಉದ್ಧಾರವಾಗಿದ್ದಾರೆ. ದೊಡ್ಡ ದೊಡ್ಡ ಮನೆ ಕಟ್ಟಿದ್ದಾರೆ ಎಂದು ಶಾಸಕ ಯತ್ನಾಳ್ ಅವರು ಹೇಳಿದರು. ಆದರೆ ಅದೆಲ್ಲಾ ಹಿಂದಿನ ಕಾಲದಲ್ಲಿ. ನಮ್ಮ ಸರ್ಕಾರ ಬಂದ ನಂತರ 10 -20 % ಕಮಿಷನ್ ಕೊಡುವುದನ್ನು ನಿಲ್ಲಿಸಲಾಗಿದೆ. ತಾಂತ್ರಿಕ ಸಮಿತಿ ಬೇರೆ, ಟೆಂಡರ್ ಪರಿಶೀಲನಾ ಸಮಿತಿ ಬೇರೆ ಅಂದಾಜು ಪಟ್ಟಿ ತಯಾರಿಸುವವರು ಬೇರೆ ಇದ್ದಾರೆ. ಒಂದು ವ್ಯವಸ್ಥೆಯನ್ನು ತರಲಾಗಿದೆ. ಮತ್ತು ಜ್ಯೇಷ್ಠತಾ ಪಟ್ಟಿ ಆಧಾರದ ಮೇಲೆ ಬಿಲ್‍ಗಳನ್ನು ಪಾಸು ಮಾಡಲು ಸೂಚಿಸಲಾಗಿದೆ. ಎಲ್ಲಾ ಇಲಾಖೆಯಲ್ಲಿ ಇದನ್ನು ಪ್ರಾರಂಭಿಸಲಾಗಿದ್ದು ಪಾರದರ್ಶಕತೆಯನ್ನು ಪಾಲಿಸಲಾಗುತ್ತಿದೆ ಎಂದರು.

ರೈತರ ತ್ಯಾಗ ದೊಡ್ಡದು:

-ದೇಶಕ್ಕಾಗಿ ಊರು, ಜಮೀನುಗಳನ್ನು ಕಳೆದುಕೊಂಡು ತ್ಯಾಗ ಮಾಡಿರುವ ರೈತರಿಗೆ ನಮನಗಳನ್ನು ಸಲ್ಲಿಸಿದ ಮುಖ್ಯಮಂತ್ರಿಗಳು, ರೈತರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಿರಿಯರ ಕಾಲದಿಂದ ಇದ್ದ ಸ್ವಂತ ಮನೆ, ಬದುಕನ್ನು ಬಿಡುವಂಥ ಪರಿಸ್ಥಿತಿ ಮಾನವೀಯತೆಯ ದೃಷ್ಟಿ ಇದ್ದವರು ಮಾತ್ರ ಇಂಥ ತ್ಯಾಗವನ್ನು ಮಾಡುತ್ತಾರೆ. ನಾವು ಸಂಕಲ್ಪ ತೊಟ್ಟು ತ್ಯಾಗದ ಉದ್ದೇಶ ಈಡೇರಿಸಲು ಕೆಲಸ ಮಾಡಬೇಕಾಗುತ್ತದೆ. ನಾನು ನೀರಾವರಿ ಸಚಿವನಾದ ಮೇಲೆ ಕೈಗಳು ಕಟ್ಟಿಹಾಕಿದ್ದ ಪರಿಸ್ಥಿತಿಯಲ್ಲಿಯೂ ನ್ಯಾಯಾಧಿಕರಣದ ಆದೇಶ ಬರುವ ನಿರೀಕ್ಷೆಯಲ್ಲಿ ಮುಳವಾಡಿ, ಚಿಮ್ಮಲಗಿ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಿ ಟೆಂಡರ್ ಕರೆದು ಅಡಿಗಲ್ಲು ಹಾಕಲಾಯಿತು. ಅಂದು ಆ ಕೆಲಸವನ್ನು ಮಾಡಿದ್ದರಿಂದ ನಾಳೆ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524 ಅಡಿಗೆ ಏರಿಸಿದಾಗ ನೀರು ಹರಿಸಲು ಸಾಧ್ಯವಾಗುತ್ತದೆ. ಇದರ ಪ್ರಯೋಜನ ವಿಜಯಪುರ ಜಿಲ್ಲೆಗೆ ಆಗುತ್ತದೆ ಎಂದರು.

ರೈತರು ನೀರಿಗಾಗಿ ಬೇಡಬಾರದು:

-ನನಗೆ ಭಗೀರಥ ಆಗುವ ಕನಸೂ, ಇಲ್ಲ, ಮನಸೂ ಇಲ್ಲ. ಆ ಶಕ್ತಿಯೂ ಇಲ್ಲ. ಆದರೆ ನನ್ನ ರೈತರು ಎಂದೂ ಕೂಡ ನೀರಿಗಾಗಿ ಎಲ್ಲಿಯೂ ಬೇಡಿಕೆಯನ್ನು ಇಡಬಾರದು. ಸಮಗ್ರವಾಗಿ ನೀರು ಹರಿಸಿ ಭೂಮಿ ತಾಯಿಗೆ ಹಸಿರು ಸೀರೆಯನ್ನು ಉಡಿಸಬೇಕೆನ್ನುವ ಕಲ್ಪನೆ ಮಾತ್ರ ನನ್ನದು'. ಈ ಭಾಗಕ್ಕೆ ನ್ಯಾಯವನ್ನು ಕೊಡುತ್ತೇನೆ ಎಂದು ಹೇಳಿ ನಾಯಕರಾದವರು ನಾವು. ಇದು ನಮ್ಮ ಕರ್ತವ್ಯ. ನಿಮಗೆ ನ್ಯಾಯ ಕೊಡುವುದು ನಮ್ಮ ಕಾಯಕ. ಬೂದಿಹಾಳ- ಪೀರಾಪುರ ಯೋಜನೆಯಡಿ 50 ಸಾವಿರ ಎಕರೆಗೆ ನೀರು ಹರಿಸಲಾಗುವುದು ಎಂದರು.

21 ಗ್ರಾಮಗಳ ಪುನಶ್ಚೇತನಕ್ಕೆ ಅನುದಾನ ಬಿಡುಗಡೆ:

-ವಿಜಯಪುರ ಭಾಗಕ್ಕೆ ಹೆಚ್ಚಿನ ನೀರಾವರಿ ಒದಗಿಸುವ 3.48 ಟಿಎಂಸಿ ನೀರಿನ ಯೋಜನೆಗೆ ಅನುಮೋದನೆ ನೀಡಿ, ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸಬೇಕು. ರಾಜ್ಯದಲ್ಲಿ ಪ್ರಥಮವಾಗಿ ವಿಜಯಪುರದಲ್ಲಿ ಕೆರೆ ತುಂಬಿಸುವ ಯೋಜನೆಯನ್ನು ಪ್ರಾರಂಭಿಸಲಾಯಿತು. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3 ಅನುಷ್ಠಾನಕ್ಕೆ ಕಾನೂನಾತ್ಮಕ ಹೋರಾಟ ನಡೆಸಲಾಗುತ್ತಿದ್ದು, 55-60 ಸಾವಿರ ಕೋಟಿ ಅನುದಾನದ ಬೇಕಾಗುತ್ತದೆ. ವಿಜಯಪುರದ ನೀರಾವರಿ ಯೋಜನೆಗಳಿಗೆ ಹಣದ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಎಲ್ಲಾ 21 ಗ್ರಾಮಗಳ ಪುನಶ್ಚೇತನಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ, ಪುನರ್ವಸತಿ ಮತ್ತು ಪುನನಿರ್ಮಾಣ ವ್ಯವಸ್ಥೆಗೆ ಬೇಕಾದ ಅನುದಾನವನ್ನು ಮುಂಬರುವ ದಿನಗಳಲ್ಲಿ ನೀಡಲಾಗುವುದು ಎಂದರು.

ಕ್ಷೇತ್ರ ನೀರಾವರಿ ಕಾಲುವೆ(ಎಫ್‍ಐಸಿ) ನಿರ್ಮಾಣ:

-ರೈತರ ಭೂಮಿಗೆ ನೀರುಣಿಸಲು ಇಲ್ಲಿನ ನೀರಾವರಿ ಯೋಜನಗೆಗಳು ಸಂಪೂರ್ಣವಾಗುವುದರೊಳಗೆ ಕ್ಷೇತ್ರ ನೀರಾವರಿ ಕಾಲುವೆ(ಎಫ್‍ಐಸಿ) ನಿರ್ಮಾಣಕ್ಕೆ ಯೋಜನೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದರು.

ಕೋವಿಡ್ ನಡುವೆಯೂ ಆರ್ಥಿಕ ಸಬಲತೆ:

-ಕೋವಿಡ್ ಆರ್ಥಿಕ ಹಿಂಜರಿಕೆಯ ನಡುವೆಯೂ 16 ಸಾವಿರ ಕೋಟಿ ಗುರಿಗೂ ಮೀರಿ ಆದಾಯ ಬಂದಿದ್ದು, ರಾಜ್ಯದ ಆರ್ಥಿಕ ಸಬಲತೆಯನ್ನು ಸಾಧಿಸಿದಂತಾಗಿದೆ. ಕೇಂದ್ರ ಸರ್ಕಾರದ 9600 ಕೋಟಿ ರೂ.ನೆರವು ಬಂದಿತು. ರಾಜ್ಯ 67 ಸಾವಿರ ಕೋಟಿ ಸಾಲ ಪಡೆಯಬಹುದಾಗಿತ್ತು. ಆದರೆ ರಾಜ್ಯದ ಆದಾಯ ಹೆಚ್ಚಳದಿಂದ ಕೇವಲ 63000 ಕೋಟಿ ರೂ. ಸಾಲ ಮಾತ್ರ ಪಡೆಯಲಾಯಿತು. 4000 ಕೋಟಿ ಸಾಲ ಪಡೆಯುವುದನ್ನು ತಡೆಯಲಾಗಿದೆ. ಇದು ನಮ್ಮ ಪ್ರಾಮಾಣಿಕ ಕೆಲಸಯನ್ನು ತೋರಿಸುತ್ತದೆ. ಹಣ ಸೋರಿಕೆಯನ್ನು ನಿಲ್ಲಿಸಿ ಆದಾಯವನ್ನು ಹೆಚ್ಚಿಸಿ ಅನಾವಶ್ಯಕ ವೆಚ್ಚವನ್ನು ಕಡಿತಗೊಳಿಸಿ ಇಂತಹ ನೀರಾವರಿಯ ಉಪಯುಕ್ತ ಯೋಜನೆಗಳಿಗೆ ಹಣ ವಿನಿಯೋಗಿಸಲಾಗುತ್ತಿದೆ ಎಂದರು.

ಬರದ ನಾಡನ್ನು ಜಲದ ನಾಡನ್ನು ಮಾಡುವ ಕನಸು:

-ರೈತ ಆರ್ಥಿಕವಾಗಿ ಸಬಲರಾಗಬೇಕು. ಬರದ ನಾಡನ್ನು ಜಲದ ನಾಡನ್ನು ಮಾಡುವ ಕನಸನ್ನು ಈಡೇರಿಸಲಾಗುವುದು. ಈ ನಿಟ್ಟಿನಲ್ಲಿ ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.

know_the_cm

*************