ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮಾತೃಭಾಷೆಯ ಮಹತ್ವವನ್ನು ಅರಿತ ಸಮುದಾಯ ಬಹಳ ಶ್ರೀಮಂತವಾಗಿ ಬೆಳೆಯುತ್ತದೆ - ಮುಖ್ಯಮಂತ್ರಿ

know_the_cm

(ಬೆಂಗಳೂರು), ಆಗಸ್ಟ್ 18, 2021

-ಮಾತೃಭಾಷೆಯ ಮಹತ್ವವನ್ನು ಅರಿತ ಸಮುದಾಯ ಬಹಳ ಶ್ರೀಮಂತವಾಗಿ ಬೆಳೆಯುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯ ಪಟ್ಟರು.

-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ 2019- 20 ನೇ ಸಾಲಿನ ವಿವಿಧ ರಾಜ್ಯ ಪ್ರಶಸ್ತಿ ಹಾಗೂ ಬಸವ ರಾಷ್ಟ್ರೀಯ ಪ್ರಶಸ್ತಿ ಯನ್ನು ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.

-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾನವೀಯ ಮತ್ತು ಮಾತೃ ಮೌಲ್ಯಗಳ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕು ಎಂದ ಮುಖ್ಯಮಂತ್ರಿಗಳು, ಪ್ರಶಸ್ತಿ ಪಡೆದವರೆಲ್ಲಾ ಸಾಧಕರು. ದಾರ್ಶನಿಕರು ಸತ್ಯವನ್ನು ನೋಡುವ ಶಕ್ತಿಯನ್ನು ಪಡೆದಿರುತ್ತಾರೆ. ಬದುಕನ್ನು ಹುಟ್ಟು ಸಾವಿನ ಮಧ್ಯದ ಬದುಕಿಗೆ ಸಾಧಕರು ಸೀಮಿತಗೊಳಿಸುವುದಿಲ್ಲ. ಸಾವಿನ ನಂತರವೂ ಅವರ ಬದುಕು, ವಿಚಾರಗಳು, ಮಾರ್ಗದರ್ಶನಗಳು ನಮ್ಮ ಮಧ್ಯೆ ಇರುತ್ತವೆ. ಬುದ್ಧ, ಬಸವ, ಅಲ್ಲಮ, ಶಂಕರರು, ಮೊಹಮ್ಮದ್ ಪೈಗಂಬರ್ ಕಾಲಾತೀತವಾಗಿ ಬದುಕಿ, ಅವರ ಸಾಧನೆಯೂ ಕಾಲಾತೀತವಾಗಿದೆ . ಕಲೆ, ಸಂಸ್ಕೃತಿಗೂ ಬೆಲೆ ಕಟ್ಟುವ ಕಲಿಯುಗದಲ್ಲಿ ಬೆಲೆಯನ್ನು ಬದಿಗಿಟ್ಟು ಅರ್ಥ ಕೊಡುವ ಕೆಲಸವನ್ನು ಪ್ರಶಸ್ತಿ ಪಡೆದವರೆಲ್ಲರೂ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

-ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿ ಬಗ್ಗೆ ನಿಜವಾದ ಚಿಂತನೆ ಮಾಡಿ ಅನುಷ್ಠಾನ ಮಾಡುತ್ತಿರುವವರು ವೀರೇಂದ್ರ ಹೆಗ್ಗಡೆಯವರು. ಭಾಲ್ಕಿಯ ಬಸಲಿಂಗ ಪಟ್ಟದೇವರು ಅಪಾರ ಸಾಧನೆ ಮಾಡಿಯೂ ಮಾಡದಂತೆ ಇರುತ್ತಾರೆ.ಬಸವ ತತ್ವಗಳನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾಗುವಂತೆ ಬದುಕುತ್ತಿದ್ದಾರೆ. ಬೀದರ್ ಜಿಲ್ಲೆಯಿಂದ ಕೊಳ್ಳೇಗಾಲದವರೆಗೂ ಅವರ ವಿಚಾರಗಳು ವ್ಯಾಪಿಸಿದೆ. ಜಾನಪದ, ಕಲೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕರಿದ್ದಾರೆ.

-ನಾಗರಿಕತೆ ಮತ್ತು ಸಂಸ್ಕೃತಿಯನ್ನು ನಾವು ತಪ್ಪಾಗಿ ಅರ್ಥೈಸಿಕೊಳ್ಳುತ್ತೇವೆ. ನಮ್ಮ ಬಳಿಯಿರುವ ವಸ್ತುಗಳು ನಾಗರೀಕತೆ. ನಾವೇನಾಗಿದ್ದೇವೆ ಎನ್ನುವುದು ಸಂಸ್ಕೃತಿ. ನಮ್ಮಲ್ಲಿ ಮೌಲ್ಯಗಳು ಎಷ್ಟರಮಟ್ಟಿಗೆ ಇವೆ. ಸಾಮಾಜಿಕ ಪ್ರಜ್ಞೆ, ಮಾನವೀಯ ಮೌಲ್ಯಗಳು ನಾಗರಿಕ ಕರ್ತವ್ಯ ಪ್ರಜ್ಞೆ ಇವೆಲ್ಲಾ ಸಂಸ್ಕೃತಿ ಎನಿಸಿಕೊಳ್ಳುತ್ತವೆ.

-ಕನ್ನಡ ಭಾಷೆ ನಮ್ಮ ಸಂಸ್ಕೃತಿ. ಭಾವಗಳ ಜೋಡಿಸುವ ಸಂಕೋಲೆ. ಭಾವನೆಗಳನ್ನು ಉಕ್ಕಿಸುವ ಭಾಷೆ ಕನ್ನಡ. ಹುಟ್ಟುವ ಮುನ್ನವೇ ಬೆಳೆಸುವ ಸಂಬಂಧ ತಾಯಿಯ ಸಂಬಂಧ. ಆದ್ದರಿಂದ ಮಾತೃಭಾಷೆಯನ್ನು ಕಡೆಗಣಿಸಬಾರದು ಇತರೆ ಭಾಷೆಗೆ ಹೋಲಿಸಬಾರದು ಎಂದರು.

-ಕಾರ್ಯಕ್ರಮ ದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ , ಇಲಾಖೆ ನಿರ್ದೇಶಕ ರಂಗಪ್ಪ ಮೊದಲಾದವರು ಉಪಸ್ಥಿತರಿದ್ದರು.

*************