ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಮಳೆಹಾನಿ ಪ್ರದೇಶಗಳಿಗೆ ಮುಖ್ಯಮಂತ್ರಿ ಭೇಟಿ

know_the_cm

(ಚಿಕ್ಕಬಳ್ಳಾಪುರ), ನವೆಂಬರ್ 21, 2021

-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ವ್ಯಾಪಕ‌ ಮಳೆಯಿಂದಾಗಿ ಒಟ್ಟು 24 ಮನೆಗಳು ಸಂಪೂರ್ಣ ಕುಸಿದು ಬಿದ್ದಿದ್ದು, 1, 078 ಮನೆಗಳು ಭಾಗಶಃ ಕುಸಿದಿವೆ. ಪೂರ್ತಿ ಕುಸಿದು ಬಿದ್ದ ಮನೆಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

-ಅವರು ಚಿಕ್ಕಬಳ್ಳಾಪುರ ನಗರ ಮತ್ತು ಜಿಲ್ಲೆಯ ವಿವಿಧ ಮಳೆಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

-ರಾಜ್ಯದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇತ್ತೀಚಿಗೆ ಸುರಿದ ವ್ಯಾಪಕ ಮಳೆಯಿಂದಾಗಿ ಹಲವು ಬೆಳೆಗಳು, ಮನೆಗಳಿಗೆ ಹಾನಿಗೊಳಗಾಗಿ ಆರ್ಥಿಕ ನಷ್ಟವಾಗಿದೆ. ನಷ್ಟವಾಗಿರುವ ಅಂದಾಜನ್ನು ಸಮೀಕ್ಷೆ ನಡೆಸಿ ಸಂಪೂರ್ಣ ಮತ್ತು ಸಮಗ್ರ ವರದಿ ನೀಡುವಂತೆ ಆಯಾ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಈಗಾಗಲೇ ಪ್ರಾಥಮಿಕ ವರದಿ ಲಭ್ಯವಾಗಿದ್ದು, ಒಟ್ಟಾರೆಯಾಗಿ ಆಗಿರುವ ನಷ್ಟದ ಸಮಗ್ರ ಮಾಹಿತಿ ಸಂಗ್ರಹ, ವಿಶ್ಲೇಷಣೆ ಕಾರ್ಯ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ಸಂಪೂರ್ಣ ಸ್ಪಷ್ಟತೆ ದೊರೆಯಲಿದೆ. ನಿಖರವಾದ ಮತ್ತು ಸ್ಪಷ್ಟವಾದ ವರದಿ ಬಂದ ನಂತರ ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಪರಿಹಾರ ನೀಡಬೇಕೆಂದು ನಿರ್ಧರಿಸಿ, ಆದ್ಯತೆ ಮೇಲೆ ಹಣ ಬಿಡುಗಡೆ ಮಾಡಿ ಮಳೆಬಾಧಿತ ಪ್ರದೇಶಗಳ ಜನರಿಗೆ ಸ್ಪಂದಿಸಲಾಗುವುದು. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಅಂತಹ ಮನೆಗಳಿಗೆ ಕೂಡಲೇ 10 ಸಾವಿರ ರೂಪಾಯಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಪೂರ್ತಿಯಾಗಿ ಕುಸಿದ ಮನೆಗಳಿಗೆ ತಲಾ 5 ಲಕ್ಷ ಮತ್ತು ಭಾಗಶಃ ಕುಸಿದು ಬಿದ್ದ ಮನೆಗಳಿಗೆ ಹಾನಿಗನುಸಾರವಾಗಿ ಪರಿಹಾರ ನೀಡಲಾಗುವುದು. ಸ್ವಲ್ಪ ಹಾನಿ ಅಥವಾ ಧಕ್ಕೆಯಾದ ಮನೆಗಳಿಗೆ ಐವತ್ತು ಸಾವಿರ ನೀಡಲು ಅವಕಾಶವಿದೆ ಎಂದರು.

-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 24 ಮನೆಗಳು ಸಂಪೂರ್ಣ ಕುಸಿದಿವೆ. 1078 ಮನೆಗಳು ಭಾಗಶಃ ಕುಸಿದಿವೆ. ಕಂದವಾರ ಕೆರೆಯಿಂದ ಅಮಾನಿ ಗೋಪಾಲಕೃಷ್ಣ ಕೆರೆಯವರೆಗೂ ರಾಜಕಾಲುವೆ ನಿರ್ಮಾಣ ಮಾಡಬೇಕಾಗಿದ್ದು, ಕೂಡಲೇ ಸಮಗ್ರ ಯೋಜನಾ ವರದಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ.ವರದಿ ಬಂದ ಕೂಡಲೇ ಅಗತ್ಯ ಅನುಧಾನ ಬಿಡುಗಡೆ ಮಾಡಲಾಗುವುದು.ಆದ್ಯತೆಯ ಮೇಲೆ ಈ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

-ರಾಜ್ಯದಲ್ಲಿ ಚುನಾವಣಾ ನೀತಿ ಜಾರಿಯಲ್ಲಿರುವುದರಿಂದ ಅತಿವೃಷ್ಠಿ ಪರಿಹಾರ ಕಾರ್ಯಗಳನ್ನು ವೇಗವಾಗಿ ಮಾಡಲು ತೊಡಕಾಗುತ್ತಿದೆ. ನೀತಿ ಸಂಹಿತೆ ಕಾರಣದಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಿಗೆ ಕೆಲಸ ಮಾಡಲು ಸಮಸ್ಯೆಯಾಗುತ್ತಿದ್ದು, ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿರುವ ಕಾರಣ ನೀತಿ ಸಂಹಿತೆಗೆ ಕೊಂಚ ರಿಯಾಯಿತಿ ನೀಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸರ್ಕಾರ ಈಗಾಗಲೇ ಪತ್ರವನ್ನೂ ಬರೆಯಲಾಗಿದೆ. ಈ ಬಗ್ಗೆ ಆಯೋಗ ಸೂಕ್ತ ತೀರ್ಮಾನವನ್ನು ಆದಷ್ಟು ಬೇಗ ತೆಗೆದುಕೊಳ್ಳುವ ವಿಶ್ವಾಸವಿದೆ. ಈ ಮಧ್ಯೆ ರಾಜ್ಯ ಸಚಿವ ಸಂಪುಟದ ಸದಸ್ಯರು ಮಳೆಬಾಧಿತ ಪ್ರದೇಶಗಳಲ್ಲಿ ಕೆಲಸ ಮಾಡಿ ಜನರ ಕಷ್ಟಗಳನ್ನು ಆಲಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರುಗಳೂ ತಮ್ಮ ತಮ್ಮ‌ ಜಿಲ್ಲೆಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅತಿವೃಷ್ಠಿಯ ಸಂಕಷ್ಟದ ಸಂದರ್ಭದಲ್ಲಿ ಜನರ ಜೊತೆ ಸರ್ಕಾರವಿದೆ ಎಂದು ತಿಳಿಸಿದರು.

-ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗಿದ್ದು, ಮಳೆಯಿಂದಾಗಿ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯು ತುಂಬಿ ಹರಿಯುವ ನೀರು ನಗರದ ಮೂಲಕ ಹಾದು ಹೋಗುವ ರಾಜಕಾಲುವೆ ಹಿಡಿಸದೆ ಬಿ.ಬಿ ರಸ್ತೆಯ ಮೇಲೆ ಹರಿಯುತ್ತಿರುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀಕ್ಷಿಸಿದರು. ನಂತರ ಶಿಡ್ಲಘಟ್ಟ ತಾಲ್ಲೂಕಿನ ಆನೆಮಡುಗು ಅಗ್ರಹಾರ ಕೆರೆ ಏರಿ ಹೊಡೆದಿರುವುದನ್ನು ವೀಕ್ಷಿಸಿದರು.

ಮಳೆಯಿಂದ ಹಾನಿಗೊಳಗಾದ ಬಾಧಿತ ಕುಟುಂಬಗಳಿಗೆ ಶೀಘ್ರ ಪರಿಹಾರ:

-ಮಳೆಯಿಂದ ಹಾನಿಗೊಳಗಾದ ಬಾಧಿತ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಂಗವಾರ ಕೆರೆಯಿಂದ ಗೋಪಾಲಕೃ ಷ್ಣ ಕೆರೆವರೆಗೂ ರಾಜಕಾಲುವೆ ನಿರ್ಮಾಣ:

-ಚಿಕ್ಕಬಳ್ಳಾಪುರ ನಗರದಲ್ಲಿ ಕೆರಗೆಗಳು ತುಂಬಿ ಕೋಡಿ ಹರಿದು ರಸ್ತೆಹಾಗೂ ಮನೆಗಳಿಗೆ ನೀರು ಬಂದಿದೆ. ಕಂಗವಾರ ಕೆರೆಯಿಂದ ಗೋಪಾಲಕೃ ಷ್ಣ ಕೆರೆವರೆಗೂ ರಾಜಕಾಲುವೆ ನಿರ್ಮಾಣಕ್ಕಾಗಿ ಡಿಪಿಆರ್ ಸಿದ್ಧಗೊಳಿಸಲು ಸೂಚನೆ ನೀಡಲಾಗಿದ್ದು,ಪೂರಕ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.ರಾಷ್ಟ್ರೀಯ ಹೆದ್ದಾರಿಯಲ್ಲಿ ಆರ್ ಸಿಸಿ ಚರಂಡಿ ನಿರ್ಮಿಸಲಾಗುವುದು ಎಂದು ತಿಳಿಸಿದರು.

-ಮಳೆ ಹಾವಳಿಯಿಂದ ಮನೆ ಹಾನಿಯಾದ ಬಾಧಿತ ಕುಟುಂಬಗಳಿಗೆ 10,000 ರೂ., ಪೂರ್ಣ ಬಿದ್ದಿರುವ ಮನೆಗಳಿಗೆ 95,000 ರೂ. ಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಂತ್ರಸ್ತರ ಪೂರ್ಣ ಹಾನಿಯಾದ ಮನೆಗಳಿಗೆ ರೂ. 5.00 ಲಕ್ಷ,ತೀವ್ರ ಹಾನಿಯಾದ ಮನೆಗಳಿಗೆ ತಲಾ ರೂ.3.00 ಲಕ್ಷ ಹಾಗೂ ಭಾಗಶ: ಹಾನಿಯಾದ ಮನೆಗಳಿಗೆ ತಲಾ ರೂ. 50,000 ಗಳ ಆರ್ಥಿಕ ನೆರವನ್ನು ನೀಡಲಾಗುವುದು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 24 ಪೂರ್ಣ ಹಾನಿಯಾದ ಮನೆಗಳು, 1078 ಭಾಗಶ: ಹಾನಿಯಾದ ಮನೆಗಳು , 5 ದೊಡ್ಡ ದನಗಳ ಹಾಗೂ 46 ಸಣ್ಣ ದನಗಳ ಸಾವುಂಟಾಗಿದ್ದು , ಕೂಡಲೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

-ಚಿಕ್ಕಬಳ್ಳಾಪುರ ನಗರ ಪ್ರದೇಶದಲ್ಲಿ ಒಟ್ಟು 55 ಮನೆಗಳಿಗೆ ಧಕ್ಕೆಯಾಗಿದ್ದು , ಪೂರ್ಣ ಪ್ರಮಾಣದಲ್ಲಿ 13 ಮನೆ, 42 ಬಿ ವರ್ಗ ಮನೆಗಳುಹಾನಿಯಾಗಿದ್ದು, ಕೂಡಲೇ ಪರಿಹಾರ ನೀಡಲು ಸೂಚನೆ ನೀಡುರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಬೆಳೆ ಪರಿಹಾರ:

-ರಾಜ್ಯಾದ್ಯಂತ ಬೆಳೆಹಾನಿ ಸಮೀಕ್ಷೆ ವರದಿ ತರಿಸಿಕೊಂಡು ಕಂದಾಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬೆಳೆ ಪರಿಹಾರ ನೀಡುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

-ಜಿಲ್ಲೆಗಳಲ್ಲಿನ ಪ್ರವಾಹ ಪ್ರದೇಶಗಳಿಗೆ ಸಚಿವರು ಈಗಾಗಲೇ ಭೇಟಿ ನೀಡಿ ಅಗತ್ಯ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

know_the_cm

-ಈ ಸಂದರ್ಭದಲ್ಲಿ ಕಂದಾಯ ಸಚಿವರಾದ ಆರ್.ಅಶೋಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್, ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ, ಜಿಲ್ಲಾಧಿಕಾರಿ ಆರ್. ಲತಾ, ಪೊಲೀಸ್ ವರಿಷ್ಠಾಧಿಕಾರಿ ಜಿ. ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು.

*************