
ಹಾಸನ, ನವೆಂಬರ್ 07, 2023:
ಹಾಸನ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಿದ ಸೂಚನೆಗಳು....
- ಅಧಿಕಾರಿಗಳು ಮತ್ತು ನಾವು ಜನರ ಸೇವಕರು. ಜನರೇ ನಮ್ಮ ಮಾಲೀಕರು.
- ಜನರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರಿಸಿದರೆ ಸಹಿಸಲ್ಲ.
- ಅರ್ಜಿ ಸ್ವೀಕರಿಸಿದರೆ ಸ್ವೀಕೃತಿ ಪತ್ರ ಕಡ್ಡಾಯವಾಗಿ ನೀಡಿ.
- ಸಣ್ಣ ಪುಟ್ಟ ಸಮಸ್ಯೆಗಳಿಗಾಗಿ ನಮ್ಮ ಜನರು ಬೆಂಗಳೂರಿನವರೆಗೂ ನನ್ನನ್ನು ಹುಡುಕಿಕೊಂಡು ಬರಬೇಕಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
- ರೈತರು ಮತ್ತು ಶ್ರಮಿಕರ ಸಮಸ್ಯೆಗಳು ಬಹುತೇಕ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲೇ ಬಗೆಹರಿಸಿ. ಜನರು ಬೆಂಗಳೂರಿನವರೆಗೂ ಅಲೆಯಬಾರದು: ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
- ಅನಗತ್ಯ ಸತಾಯಿಸುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಯಾವುದೇ ಪ್ರಭಾವಕ್ಕೂ ಮಣಿಯುವುದಿಲ್ಲ. ಕಠಿಣ ಕ್ರಮ ಖಚಿತ: ಸಿಎಂ ಎಚ್ಚರಿಕೆ.
- ಜನರ ಮನೆ ಬಾಗಿಲಿಗೆ ಸರ್ಕಾರವನ್ನು ತಲುಪಿಸಬೇಕು.
- ಜನರನ್ನು ಸರ್ಕಾರಿ ಕಚೇರಿಗೆ ಅಲೆದಾಡಿಸುವುದು ಭ್ರಷ್ಟಾಚಾರ. ಇದನ್ನು ಯಾವ ಅಧಿಕಾರಿ ಮಾಡಿದರೂ ಸಹಿಸಲ್ಲ.
- ಜನರಿಗೆ ನಿಮ್ಮ ಅನುಕಂಪ ಬೇಕಾಗಿಲ್ಲ. ನಿಮ್ಮ ಜವಾಬ್ದಾರಿಯನ್ನು ನೀವು ಸಮರ್ಪಕವಾಗಿ ನಿರ್ವಹಿಸಿ.
- ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಿ. ನಮ್ಮ ಸರ್ಕಾರ ಎಲ್ಲಾ ವರ್ಗ, ಎಲ್ಲಾ ಜಾತಿ, ಎಲ್ಲಾ ಧರ್ಮಗಳಿಗೂ ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ.
- ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಯ ಸಾಧನೆ ಶೇ100 ರಷ್ಟು ಸಾಧಿಸಬೇಕು. ಆದರೆ ಹಾಸನ ಜಿಲ್ಲೆಯಲ್ಲಿ ಇನ್ನೂ ಶೇ90 ರಷ್ಟಕ್ಕೆ ನಿಂತಿದೆ. ಇದನ್ನು ಶೇ 100 ರಷ್ಟು ಪೂರೈಸಿ. ನೋಂದಣಿ ಮಾಡಿಸಿರುವ ಪ್ರತಿಯೊಬ್ಬರಿಗೂ ಗ್ಯಾರಂಟಿ ಸ್ಕೀಂಗಳು ತಲುಪಬೇಕು ಎನ್ನುವ ಸೂಚನೆ ನೀಡಿದರು.
- ಹಾಸನ, ಅರಸೀಕರೆ, ಅರಕಲಗೂಡು ತಾಲ್ಲೂಕುಗಳಲ್ಲಿ ಗ್ಯಾರಂಟಿ ಯೋಜನೆಗಳು ಶೇ 90 ರಷ್ಟನ್ನೂ ತಲುಪಿಲ್ಲ ಏಕೆ ಎಂದು ಗರಂ ಆಗಿ ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
- ಮೂರೂ ತಾಲ್ಲೂಕುಗಳ ಅಂಕಿ ಅಂಶಗಳನ್ನು ಕೈಯಲ್ಲಿಟ್ಟುಕೊಂಡು ಅಧಿಕಾರಿಗಳನ್ನು ಪ್ರಶ್ನಿಸಿದ ಮುಖ್ಯಮಂತ್ರಿಗಳು.

- ಹಾಸನ, ಅರಸೀಕೆರೆ, ಅರಕಲಗೋಡು ತಾಲ್ಲೂಕಿನ ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಯನ್ನು ಶೇ100 ರಷ್ಟು ಏಕೆ ತಲುಪಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಇಂಧನ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದ ಮುಖ್ಯಮಂತ್ರಿಗಳು.
- ಅಧಿಕಾರಿಗಳಿಂದ ಸಮರ್ಪಕ ಉತ್ತರ ಬರದಿದ್ದಾಗ ಸಿಟ್ಟಾದ ಮುಖ್ಯಮಂತ್ರಿಗಳು ಅಭಿಯಾನ ನಡೆಸಿ ಶೇ100 ರಷ್ಟು ಸಾಧನೆ ಮಾಡಿ ಎಂದು ಸೂಚಿಸಿದ್ದಲ್ಲದೆ, ಈ ಬಗ್ಗೆ ನಿಗಾ ವಹಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
- ನೀವು ಶೇ90 ರಷ್ಟು ಸಾಧನೆ ಮಾಡಿದ್ದರೂ ಬಾಕಿ ಉಳಿದ ಶೇ 10 ರಷ್ಟು ಫಲಾನುಭವಿಗಳ ಧ್ವನಿ ಜೋರಾಗುತ್ತದೆ. ಇವರ ಧ್ವನಿಯನ್ನು ನೀವು ಆಲಿಸಬೇಕು. ಕಾಳ ಮಿತಿಯಲ್ಲಿ ಶೇ100 ಸಾಧನೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ವರದಿ ನೀಡಿ ಎಂದು ಸಿಎಂ ಸೂಚಿಸಿದರು.
- ಜಿಲ್ಲಾ ಕಾರ್ಯದರ್ಶಿಗಳು ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಕೆಳ ಹಂತದ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಪರಿಶೀಲಿಸಿ. ಚುರುಕು ಮುಟ್ಟಿಸಬೇಕು ಎಂದು ಸೂಚಿಸಿದರು.
- ಜಿಲ್ಲಾ ರಕ್ಷಣಾಧಿಕಾರಿ ಮಹಮದ್ ಸುಜಿತ ಅವರನ್ನು ಪ್ರಶ್ನಿಸಿ, ಖಡಕ್ ಸೂಚನೆ ನೀಡಿದ ಸಿಎಂ: ಹಾಸನ ಜಿಲ್ಲೆಯಲ್ಲಿ ಮಟ್ಕಾ, ಡ್ರಗ್ಸ್ ಮತ್ತು ಆನ್ಲೈನ್ ಬೆಟ್ಟಿಂಗ್ ಹಾವಳಿಯನ್ನು ನೂರಕ್ಕೆ ನೂರು ತಡೆಯಬೇಕು. ಇದುವರೆಗೂ ನೀವು ತೆಗೆದುಕೊಂಡಿರುವ ಕ್ರಮಗಳು ಸಾಲದು. ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿವೆ. ಆದರೆ ಕೆಳ ಹಂತದ ಅಧಿಕಾರಿ, ಸಿಬ್ಬಂದಿಯಿಂದ ಕೆಲಸ ಮಾಡಿಸಬೇಕು. ಮಟ್ಕಾ, ಡ್ರಗ್ಸ್ ಮತ್ತು ಆನ್್ಲೈನ್ ಬೆಟ್ಟಿಂಗ್ ನಿಂದ ಬಹಳ ಯುವಕರ, ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಆದ್ದರಿಂದ ಈ ಪಿಡುಗುಗಳನ್ನು ಬಂದ್ ಮಾಡಿ ಎಂದು ಸೂಚಿಸಿದರು.
- ಪ್ರತಿ ತಹಶೀಲ್ದಾರರ ಬಳಿ ಅವರ ಬಳಿ ಇರುವ ಸರ್ಕಾರಿ ಜಾಗಗಳ ಮಾಹಿತಿ ಇರಬೇಕು ಎಂದು ಸೂಚಿಸಿದ ಮುಖ್ಯಮಂತ್ರಿಗಳು ಅರಕಲಗೋಡು ತಹಶೀಲ್ದಾರ್ ಅವರನ್ನು “ನಿಮ್ಮ ತಾಲ್ಲೂಕಿನಲ್ಲಿ ಇರುವ ಸರ್ಕಾರಿ ಜಾಗ ಎಷ್ಟಿದೆ ? ಎಷ್ಟು ಕೆರೆಗಳು ಇವೆ ? ಎಂದು ಪ್ರಶ್ನಿಸಿದರು. ಇದಕ್ಕೆ ತಹಶೀಲ್ದಾರರ ಬಳಿ ಉತ್ತರವೇ ಇರಲಿಲ್ಲ. ಇದಕ್ಕೆ ಗರಂ ಆದ ಮುಖ್ಯಮಂತ್ರಿಗಳು ತಹಶೀಲ್ದಾರರ ಬಳಿ ಪ್ರಾಥಮಿಕ ಮಾಹಿತಿಯೇ ಇಲ್ಲ ಎಂದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಬಳಿ ಎಲ್ಲಾ ಮಾಹಿತಿ ಇಟ್ಟುಕೊಂಡಿರಬೇಕು. ಮಾಹಿತಿಯೇ ಇಲ್ಲದೆ ಅಭಿವೃದ್ಧಿ, ಜನರ ಕೆಲಸ ಹೇಗೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.
- ತೆಂಗಿನ ಬೆಳೆಗೆ ರೋಗ ಬಂದಿರುವುದರ ಬಗ್ಗೆ ಶಾಸಕ ರೇವಣ್ಣ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ಈ ಬಗ್ಗೆ ಸುದೀರ್ಘ ಚರ್ಚೆ ನಡೆದು ಹಣದ ಅಗತ್ಯವಿದ್ದರೆ ಸರ್ಕಾರಕ್ಕೆ ಇದುವರೆಗೂ ಏಕೆ ಪತ್ರ ಬರೆದಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗೆ ಪ್ರಶ್ನಿಸಿದ ಸಿಎಂ ತಕ್ಷಣ ಸರ್ಕಾರಕ್ಕೆ ಪತ್ರ ಬರೆದು ಅಗತ್ಯವಿರುವ ಹಣದ ಕೋರಿಕೆ ಸಲ್ಲಿಸುವಂತೆ ಸೂಚಿಸಿದರು.
- ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ. ಎಷ್ಟು ಬೇಕಾದರೂ ಹಣ ಕೇಳಿ ಎಂದ ಸಿಎಂ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೂ ಹಣ ಹೋಗಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳಿಗೂ ತಲಾ 50 ಲಕ್ಷ ನೀಡಲಾಗಿದೆ. ಆ ಹಣ ಖರ್ಚಾದ ಬಳಿದ ಮತ್ತೆರ ಹಣ ಕೇಳುವಂತೆ ಸೂಚಿಸಲಾಗಿದೆ ಎಂದರು. ಇದಕ್ಕೆ ಶಾಸಕರುಗಳು ತಕರಾರು ವ್ಯಕ್ತಪಡಿಸಿ ಹಣ ಬಂದೇ ಇಲ್ಲ ಎಂದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಹಾಸನಾಂಬೆ ಉತ್ಸವದಲ್ಲಿ ತೊಡಗಿಸಿಕೊಂಡಿದ್ದರಿಂದ ಮಾಹಿತಿ ನೀಡುವಲ್ಲಿ ಲೋಪ ಆಗಿದೆ ಎಂದರು. ಬಳಿಕ ಮುಖ್ಯಮಂತ್ರಿಗಳು, “ಹಾಸನಾಂಬೆ ಉತ್ಸವ ಮುಗಿಯುತ್ತಿದ್ದಂತೆ ಟಾಸ್ಕ್ ಫೋರ್ಸ್ ಸಭೆ ಕರೆದು ಮಾಹಿತಿ ರವಾನಿಸಿ ಎಂದು ಸೂಚಿಸಿದರು.
- ಆನೆಗಳ ಹಾವಳಿ ತಪ್ಪಿಸಲು ಆನೆಗಳಿಗೆ ಕಾಡಿನ ಒಳಗೇ ಅಗತ್ಯ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಲು ಮುಖ್ಯಮಂತ್ರಿಗಳು ಸೂಚಿಸಿ, ಕಾಡುಪ್ರಾಣಿಗಳು ನಾಡಿಗೆ ಬರದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಹಾಸನ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಕೆಲವು ಮುಖ್ಯಾಂಶಗಳು...
- ಬರಗಾಲದ ಬಗ್ಗೆ ಎರಡನೇ ಹಂತದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.
- ಜಾನುವಾರುಗಳಿಗೆ 24 ತಿಂಗಳಿಗೆ ಆಗುವಷ್ಟು ಮೇವಿನ ಸಂಗ್ರಹ ಇದೆ. ಜನ ಜಾನವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
- ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಗೋವುಗಳ ಮೇವು ಬೆಳೆಯುವುದಕ್ಕೂ ಹಣ ನೀಡಿದ್ದೇವೆ. ಜನ-ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಆಗಬಾರದು ಎಂದು ಪುನರುಚ್ಚರಿಸಿದರು.
- ನಮ್ಮಲ್ಲಿ ಸಾಕಷ್ಟು ಹಣ ಇದೆ. ಈಗಾಗಲೇ ಎಲ್ಲಾ ತಾಲ್ಲೂಕುಗಳಿಗೆ ತಲಾ 50 ಲಕ್ಷ ರೂ ಕುಡಿಯುವ ನೀರಿನ ವ್ಯವಸ್ಥೆಗೆ ನೀಡಿದ್ದೇವೆ. ಈ ಹಣ ಖರ್ಚಾದ ಬಳಿಕ ಹೆಚ್ಚುವರಿ ಹಣದ ಅಗತ್ಯಬಿದ್ದರೆ ನೀಡಲಾಗುವುದು ಎಂದರು.
- ತೆಂಗಿನ ಬೆಳೆಗೆ ರೋಗ ಬಂದು ಬೆಳೆ ನಾಶ ಆಗಿದೆ. ರೈತರಿಗೆ ಪರಿಹಾರ ನೀಡಬೇಕು ಎನ್ನುವ ಬೇಡಿಕೆ ಶಾಸಕರುಗಳಿಂದ ವ್ಯಕ್ತವಾಯಿತು. ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು " NDRF ನಿಂದ ಇನ್ನೂ ಪರಿಹಾರ ಹಣ ಬಂದಿಲ್ಲ. ಆದರೂ ನಾವೇ ಹಣ ಬಿಡುಗಡೆ ಮಾಡಿದ್ದೇವೆ . ತೆಂಗು ಬೆಳೆ ನಾಶ ಪರಿಹಾರ ಪರಿಹಾರಕ್ಕಾಗಿ ಅಗತ್ಯ ಹಣಕ್ಕೆ ಬೇಡಿಕೆ ಸಲ್ಲಿಸಿ ಸರ್ಕಾರಕ್ಕೆ ಪತ್ರ ಬರೆಯುವಂತೆ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
- ಫಸಲ್ ವಿಮಾ ಯೋಜನೆಯ ಅಸಮರ್ಪಕತೆ ಕುರಿತಂತೆ ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಬೆಳೆ ವಿಮೆ ಕಂತು ಕಟ್ಟಿದವರಿಗೂ ಹಣ ಬಂದಿಲ್ಲ ಏಕೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಸ್ಕೀಂನಲ್ಲೇ ಹಲವು ಅವೈಜ್ಞಾನಿಕ ತೊಡಕುಗಳಿವೆ. ಆದರೂ ಕಂತು ಕಟ್ಟಿದವರಿಗೆ ವಿಮೆ ಹಣ ಬೇಗವಾಗಿ ಬರುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
- ಆಹಾರ ನಿಗಮದ ಗೋದಾಮುಗಳಿಂದ ಪಡಿತರ ಸಮರ್ಪವಾಗಿ ಬಿಡುಗಡೆ ಆಗುತ್ತಿಲ್ಲ ಎನ್ನುವ ಶಾಸಕರ ದೂರಿಗೆ ಗರಂ ಆದ ಸಿಎಂ, ತಕ್ಷಣ ಸ್ಥಳ ಪರಿಶೀಲನೆ ಮಾಡಿ, ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎನ್ನುವ ಸೂಚನೆಯನ್ನು ಆಹಾರ ಇಲಾಖೆಯ ಅಧಿಕಾರಿಗಳಿಗೆ ನೀಡಿ ತಕ್ಷಣ ಸರಿಪಡಿಸದಿದ್ದರೆ ನಿಮ್ಮನ್ನು ಸಸ್ಪೆಂಡ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
- ಕೊಬ್ಬರಿ ಬೆಲೆಗೆ ಬೆಂಬಲ ಬೆಲೆ ಘೋಷಿಸಿದ್ದಾಯ್ತು. ಆದರೆ ಕೇಂದ್ರ ಖರೀದಿ ಕೇಂದ್ರವನ್ನೇ ತೆರೆದಿಲ್ಲ. ಬರಗಾಲದ ಈ ಸ್ಥಿತಿಯಲ್ಲಿ ತೆಂಗು ಬೆಳೆಗಾರರು ಕಡಿಮೆ ಬೆಲೆಗೆ ಕೊಬ್ಬರಿ ಮಾರುವಂಥಾ ಶೋಚನೀಯ ಸ್ಥಿತಿ ಬಂದಿದೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
- ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನಾನು ಕೂಡಲೇ ಖರೀದಿ ಕೇಂದ್ರ ತೆರೆಯುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು.
- ಕಾಫಿ ಬೆಳೆಗಾರರು ತೋಟದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರೆ ಅವರ ಮನೆಯ ವಿದ್ಯುತ್ ಸಂಪರ್ಕವನ್ನೂ ತಪ್ಪಿಸಲಾಗುತ್ತಿದೆ. ಆದ್ದರಿಂದ ಬಾಕಿ ಬಿಲ್ ಗಳ ಮೇಲಿನ ಬಡ್ಡಿ ಮನ್ನಾ ಮಾಡಿ ಎನ್ನುವ ಬೇಡಿಕೆ ಶಾಸಕರಿಂದ ವ್ಯಕ್ತವಾಯಿತು. ಅಸಲು ಕಟ್ಟಿದವರ ಬಡ್ಡಿ ಮನ್ನಾ ಮಾಡಿ ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದರು. ಮನೆಗಳ ವಿದ್ಯುತ್ ಸಂಪರ್ಕ ತಪ್ಪಿಸಬಾರದು ಎನ್ನುವ ಸೂಚನೆ ನೀಡಿದರು.

**********