
ಹಾಸನ, ನವೆಂಬರ್ 07, 2023:
ಪ್ರಧಾನಮಂತ್ರಿಗಳೆಂದರೆ ಅವರೇನು ಸರ್ವಾಧಿಕಾರಿಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರಧಾನಮಂತ್ರಿಗಳ ವಿರುದ್ಧ ಸಿದ್ದರಾಮಯ್ಯ ದುರಹಂಕಾರದಿಂದ ಮಾತನಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿ ಮಧ್ಯಪ್ರದೇಶದ ಚುನಾವಣೆಯಲ್ಲಿ ನನ್ನ ಬಗ್ಗೆ ಮಾತನಾಡಬಹುದೇ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿಯವರು ಯಾವಾಗ ಸತ್ಯವನ್ನು ಹೇಳಿದ್ದಾರೆ:
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸರ್ಕಾರ ಕೇವಲ ಶಾಸಕರನ್ನು ಸೆಳೆಯುವ ಕೆಲಸದಲ್ಲಿ ಮಗ್ನವಾಗಿದೆ ಎಂದಿರುವ ಬಗ್ಗೆ ಮಾತನಾಡಿ ಕುಮಾರಸ್ವಾಮಿಯವರು ಯಾವಾಗ ಸತ್ಯವನ್ನು ಹೇಳಿದ್ದಾರೆ ಎಂದರು. ಸುಳ್ಳು ಆರೋಪಗಳನ್ನು ಮಾಡುವುದು, ಸುಳ್ಳು ಹೇಳುವುದನ್ನು ಬಿಟ್ಟರೆ ಬೆರೆ ಏನೂ ಮಾಡುತ್ತಿಲ್ಲ. ವಿರೋಧ ಪಕ್ಷ ಎಂದ ಮೇಲೆ ಸಲಹೆಗಳನ್ನು ನೀಡಬೇಕು ಎಂದರು.
ಪರಿಶೀಲನೆ ನಂತರ ಲೋಕಸಭಾ ಅಭ್ಯರ್ಥಿ ತೀರ್ಮಾನ:
ಹಾಸನದ ಲೋಕಸಭಾ ಚುನಾವಣಾ ಅಭ್ಯರ್ಥಿ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಹಾಸನ ಜಿಲ್ಲೆಗೆ ಸಚಿವರನ್ನು ವೀಕ್ಷಕರಾಗಿ ನೇಮಿಸಲಾಗಿದೆ. ಜಿಲ್ಲೆಯಲ್ಲಿನ ಜನನಾಯಕರ ಅಭಿಪ್ರಾಯಗಳ ವರದಿಯನ್ನು ಪಡೆದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಯತ್ನಾಳ್ ಶೇಮ್ ಲೆಸ್ ವ್ಯಕ್ತಿ:
ಶಾಸಕ ಬಸವರಾಜ ಯತ್ನಾಳ್ ಅವರು ಕಾಂಗ್ರೆಸ್ ಶೇಮ್‍ಲೆಸ್ ಸರ್ಕಾರ ಎಂದು ಹೇಳಿರುವ ಬಗ್ಗೆ ಮಾತನಾಡಿ ಯತ್ನಾಳ್ ಅವರೇ ಶೇಮ್‍ಲೆಸ್ ವ್ಯಕ್ತಿ. ಅವರ ನಡವಳಿಕೆ ಸರಿಯಿಲ್ಲದ ಕಾರಣ ಬಿಜೆಪಿ ಅವರಿಗೆ ನೋಟೀಸು ಜಾರಿ ಮಾಡಿತ್ತು ಎಂದರು.
ಬರ- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು:
ಬರ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಎಲ್ಲದ್ದಕ್ಕೂ ಕೇಂದ್ರ ಸರ್ಕಾರದೆಡೆಗೆ ಬೊಟ್ಟು ಮಾಡುತ್ತಿಲ್ಲ ಬದಲಿಗೆ ಪರಿಹಾರ ನೀಡಿ ಎಂದು ಕೇಳುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕು. ಕರ್ನಾಟಕ ರಾಜ್ಯದಲ್ಲಿ ಬರ ಬಂದರೆ ಕೇಂದ್ರ ಸರ್ಕಾರದ್ದು ಜವಾಬ್ದಾರಿ ಇರುತ್ತದೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ತೆರಿಗೆ ನೀಡುತ್ತದೆ. ಎನ್.ಡಿ.ಆರ್.ಎಫ್/ ಎಸ್.ಡಿ.ಆರ್.ಎಫ್ ಅನುದಾನವಿರುತ್ತದೆ. ಬೆಳೆ ನಷ್ಟವಾದಾಗ ಕೇಂದ್ರ ಸರ್ಕಾರದ ಜವಾಬ್ದಾರಿಯೂ ಇರುತ್ತದೆ. 33700 ಕೋಟಿ ರೂ.ಗಳ ಬೆಳೆ ನಷ್ಟವಾಗಿದ್ದು, 17900 ಕೋಟಿ ರೂ.ಗಳನ್ನು ಪರಿಹಾರವಾಗಿ ಕೇಳಿದ್ದೇವೆ. ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವೂ ಇಲ್ಲಿಗೆ ಭೇಟಿ ನೀಡಿ ಹೋಗಿದ್ದರೂ, ಇನ್ನೂ ವರದಿ ನೀಡಿಲ್ಲ. ಅನುದಾನ ಶೀಘ್ರ್ರವಾಗಿ ನೀಡಲು ಕೋರಿದ್ದೇವೆ ಎಂದರು. ನಾವು ಬರೆದಿರುವು ಪತ್ರಕ್ಕೆ ಇನ್ನೂ ಉತ್ತರ ಬಂದಿಲ್ಲ ಎಂದೂ ತಿಳಿಸಿದರು.
ಕಿಯಾನಿಕ್ಸ್ ಎಂ.ಡಿ ಲಂಚ- ವಿಚಾರಣೆ:
ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರ ಸಂಗಪ್ಪ 300 ಕೋಟಿ ಹಣ ಬಿಡುಗಡೆ ಮಾಡಲು 38 ಲಕ್ಷ ಲಂಚ ಕೇಳುತ್ತಿರುವ ಕುರಿತು ಮಾತನಾಡಿ ಈ ಬಗ್ಗೆ ವಿಚಾರಣೆ ಮಾಡಲಾಗುವುದು. ತನಿಖೆ ನಡೆಸಿ, ಆರೋಪ ಸಾಬೀತಾದರೆ ಅವರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ದೇಗುಲದ ಆಚರಣೆಗಳನ್ನು ಜನ ನಂಬುತ್ತಾರೆ:
ಹಾಸನಾಂಬ ದೇಗುಲದಲ್ಲಿ ಕೆಲವು ಮೌಢ್ಯಾಚರಣೆಗಳು ಇದ್ದು, ಸಿಎಂ ಭೇಟಿ ಇದಕ್ಕೆ ಪುಷ್ಟಿ ನೀಡಿದಂತಾಗುವುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಕೆಲವು ಮೌಢ್ಯಗಳನ್ನು ಹಿಂದಿನಿಂದ ಆಚರಿಸಿಕೊಂಡು ಬರಲಾಗಿದೆ. ಸರ್ಕಾರ ಮೌಢ್ಯ ವಿರೋಧಿ ಕಾಯ್ದೆಯನ್ನೂ ಜಾರಿ ಮಾಡಿದೆ. ನಾನು ಪ್ರಜ್ಞಾಪೂರ್ವಕವಾಗಿ ಯಾವುದೇ ಮೌಢ್ಯಗಳನ್ನು ಪಾಲಿಸುವುದಿಲ್ಲ. ಆದರೆ ದೇವರಲ್ಲಿ ನಂಬಿಕೆ ಇರಿಸಿದ್ದೇನೆ. ದೇಗುಲದ ಕೆಲವು ಆಚರಣೆಗಳನ್ನು ಹೆಚ್ಚಿನ ಜನರು ನಂಬುವುದನ್ನು ನಾವು ನೋಡುತ್ತಿದ್ದೇವೆ. ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಹಿಂಗಾರು ಮಳೆಯಾದರೂ ಬರಲಿ ಎಂದು ಹಾಸನಂಬೆಯಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಜೋಳ, ರಾಗಿ, ಭತ್ತ ಪ್ರಮುಖ ಬೆಳೆಗಳು, ಮುಂಗಾರು ಮಳೆ ಬರದೇ ಬೆಳೆಗಳೂ ಕೈಗೆಟುಕುವುದಿಲ್ಲ. ಹಿಂಗಾರು ಬಂದರೆ, ದನಕರುಗಳಿಗೆ ಮೇವು ದೊರೆಯುತ್ತದೆ . ಇಂದು ಹಾಸನ ಜಿಲ್ಲೆಯ ಹಾಸನಾಂಬ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ, ಜಿಲ್ಲೆಯ ಬರಗಾಲದ ಪರಿಸ್ಥಿತಿ ನಿರ್ವಹಣೆಯ ಬಗ್ಗೆಯೂ ಪರಿಶೀಲನಾ ಸಭೆ ನಡೆಸಲಾಗುವುದು ಎಂದರು.
ಸತತ 7 ಗಂಟೆ ವಿದ್ಯುತ್ ಪೂರೈಕೆಗೆ ತೀರ್ಮಾನ:
ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆ ನಿವಾರಣೆ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಾ, 800 ಮೆಗಾ ವ್ಯಾಟ್ ನಷ್ಟು ಥರ್ಮಲ್ ವಿದ್ಯುತ್ ನ್ನು ಉತ್ಪಾದಿಸಲಾಗುತ್ತಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್ ನಲ್ಲಿ ರಾಜ್ಯದ ಬಳಕೆಗೆ ಲಭ್ಯವಾಗಬೇಕು ಎಂಬ ಆದೇಶ ಹೊರಡಿಸಲಾಗಿದೆ. ಸಕ್ಕರೆ ಕಾರ್ಖಾನೆಗಳ ಪ್ರಾರಂಭದಿಂದಾಗಿ ವಿದ್ಯುತ್ ಕೋಜನರೇಷನ್ ಸಾಧ್ಯವಾಗುತ್ತಿದ್ದು, ಸುಮಾರು 450 ಮೆ.ವ್ಯಾ ವಿದ್ಯುತ್ ಉತ್ಪಾದನೆಯಾಗುತ್ತದೆ. ಈ ಎಲ್ಲ ಕ್ರಮಗಳಿಂದ ಮೂರು ಫೇಸ್ ಗಳಲ್ಲಿ ಸತತ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲು ತೀರ್ಮಾನಿಸಲಾಗಿದೆ.
ವೈದ್ಯಕೀಯ ಕಾಲೇಜು ನಿರ್ದೇಶಕರ ನೇಮಕಕ್ಕೆ ಕ್ರಮ:
ಹಾಸನ ವೈದ್ಯಕೀಯ ಕಾಲೇಜಿನ ನಿರ್ದೇಶಕರ ರಾಜಿನಾಮೆಯಿಂದ ಖಾಲಿ ಹುದ್ದೆಗೆ ನೇಮಕಾತಿ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿರುವುದಿಲ್ಲ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಪರಿಶೀಲಿಸಿ ಕೂಡಲೇ ಬೇರೆಯವರನ್ನು ಹುದ್ದೆಗೆ ನೇಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು ಮಳೆ:
ಬೆಂಗಳೂರಿನಲ್ಲಿ ಸಾಕಷ್ಟು ಮಳೆಯಾಗಿ ತೊಂದರೆಯಾಗಿರುವ ಬಗ್ಗೆ ಮಾತನಾಡಿ, ಸಾರ್ವಜನಿಕ ಆಸ್ತಿಪಾಸ್ತಿಗೆ ತೊಂದರೆಯಾಗಿಲ್ಲ ಎಂದರು.
**********