×
ಬರಗಾಲದ ಸಂದರ್ಭವನ್ನು ಸರಿಯಾಗಿ ನಿರ್ವಹಿಸಿ. ಅಧಿಕಾರಿಗಳ ಬೇಜವಾಬ್ದಾರಿಯನ್ನು ಸರ್ಕಾರ ಸುತಾರಾಂ ಸಹಿಸಲ್ಲ: ಮುಖ್ಯಮಂತ್ರಿ ಎಚ್ಚರಿಕೆ

 

ಮಂಡ್ಯ, ಅಕ್ಟೋಬರ್ 31, 2023:

ಬರಗಾಲದ ಸಂದರ್ಭವನ್ನು ಸರಿಯಾಗಿ ನಿರ್ವಹಿಸಿ. ಅಧಿಕಾರಿಗಳ ಬೇಜವಾಬ್ದಾರಿಯನ್ನು ಸರ್ಕಾರ ಸುತಾರಾಂ ಸಹಿಸಲ್ಲ‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು. 

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಜನ ಜಾನವಾರುಗಳಿಗೆ ಕುಡಿಯುವ ನೀರು, ಆಹಾರ, ಮೇವಿನ ಕೊರತೆ ಆಗಬಾರದು. ಹಣಕ್ಕೆ ತೊಂದರೆ ಇಲ್ಲ. ಅಗತ್ಯವಿದ್ದಷ್ಟು ಕೇಳಿ ಎಂದು ಸೂಚನೆ ನೀಡಿದರು. 

ಮುಖ್ಯಮಂತ್ರಿಗಳು ನೀಡಿದ ಸೂಚನೆಗಳ ಹೈಲೈಟ್ಸ್ಗಳು ಹೀಗಿವೆ:

 

- ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ಪಶು ಸಂಗೋಪನೆ, ಕೃಷಿ ಇಲಾಖೆಗಳ ಪ್ರಗತಿಗೆ ಪ್ರಥಮ ಆಧ್ಯತೆ ನೀಡಬೇಕು. 

 

- DC, CEO, ಕಾರ್ಯದರ್ಶಿಗಳ ಸಭೆಯಲ್ಲಿ ನಾನು ಕೊಟ್ಟ ಸೂಚನೆಗಳು, ನಿರ್ದೇಶನಗಳು ಚಾಚೂ ತಪ್ಪದೆ ಜಾರಿ ಆಗಿದೆಯಾ ? ಎಷ್ಟು ಜಾರಿ ಆಗಿದೆ ಎನ್ನುವ ಕುರಿತು ಸಭೆಗೆ ಸ್ಪಷ್ಟ ಮಾಹಿತಿ ನೀಡಿ. ತಪ್ಪು ಮಾಹಿತಿ ನೀಡಿದರೆ ಕಠಿ ಕ್ರಮ. ನಮ್ಮನ್ನು ಒಪ್ಪಿಸುವುದಕ್ಕಾಗಿ ಸಭೆಗೆ ತ್ಪಪ್ಪು ಮಾಹಿತಿ ನೀಡಬೇಡಿ. 

 

- ಬರಗಾಲ ನಿರ್ವಹಣೆಗೆ ಎಷ್ಟೇ ಹಣ ಅಗತ್ಯವಿದ್ದರೂ, ಎಷ್ಟೇ ಕಷ್ಟ ಆದರೂ ಸರ್ಕಾರ ಹಣ ಒದಗಿಸುತ್ತದೆ. ನೀವು ಜನ ಜಾನವಾರುಗಳಿಗೆ ಯಾವುದಕ್ಕೂ ತೊಂದರೆ ಆಗದಂತೆ ಕೆಲಸ ಮಾಡಬೇಕು. 

 

- ಮಾರ್ಚ್, ಏಪ್ರಿಲ್, ಮೇ ತಿಂಗಳಿಗಿಂತ ಹೆಚ್ಚು ವಿದ್ಯುತ್ ಬೇಡಿಕೆ ಇದೆ. ಆಗ 11 ಸಾವಿರ ಮೆಗಾವ್ಯಾಟ್ ಬಳಕೆ ಆಗುತ್ತಿತ್ತು. ಈಗ 15-16 ಸಾವಿರ ಮೆಘಾವ್ಯಾಟ್ ವಿದ್ಯುತ್ ಗೆ ಬೇಡಿಕೆ ಇದೆ. 

 

- ರೈತರ ಪಂಪ್ ಸೆಟ್ ಮತ್ತು ಜನರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ನಕಾಶೆ, ಯೋಜನೆ ಸಿದ್ದಪಡಿಸಿ ಅದಕ್ಕೆ ತಕ್ಕಂತೆ ಕ್ರಮ ವಹಿಸಿ. 

 

- ಸದ್ಯ ಕಟಾವಿಗೆ ಬರುವ ಬೆಳೆಗಳನ್ನು ಉಳಿಸಿಕೊಳ್ಳಲು ತೀವ್ರ ನಿಗಾವಹಿಸಿ ಕ್ರಮ ಕೈಗೊಳ್ಳಿ. 

 

ಮಾಹಿತಿ ಕೊರತೆ- ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸಿಎಂ ಕ್ಲಾಸ್: 

 

ನಿಮಗೇ ಸರಿಯಾದ ಮಾಹಿತಿ ಇಲ್ಲದಿದ್ದರೆ, ರೈತರಿಗೆ ಏನು ಸಲಹೆ ನೀಡ್ತೀರಿ ? ಸ್ಥಳ ಸಮೀಕ್ಷೆ ಮಾಡುವುದನ್ನು ಏಕೆ ನಿಲ್ಲಿಸಿದ್ದೀರಿ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಲಾಸ್ ತೆಗೆದುಕೊಂಡರು. 

ಮಂಡ್ಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿಗಳು ಕೇಳಿದ ಮಾಹಿತಿ ಒದಗಿಸುವಲ್ಲಿ ವಿಫಲರಾಗಿದ್ದಕ್ಕೆ ಜಂಟಿ ನಿರ್ದೇಶಕರಿಗೆ ತರಾಟೆಗೆ ತೆಗೆದುಕೊಂಡರು. 

ರಾಜ್ಯ ಸರ್ಕಾರದ ಆರ್ಥಿಕ ಸಮೀಕ್ಷೆ ಓದಿದ್ದೀರಾ ಎಂದು ಸಿಎಂ ಕೇಳಿದರು. ಇಲ್ಲ ಎಂದು ಉತ್ತರ ಬಂದಿದ್ದರಿಂದ ಗರಂ ಆದರು. 

ಬೆಳೆ ಇಳುವರಿ ಮತ್ತು ಬಿತ್ತನೆ ಪ್ರಮಾಣದಲ್ಲಿ ಮಂಡ್ಯ ಜಿಲ್ಲೆ ರಾಜ್ಯದ ಸರಾಸರಿಗಿಂತ ಕಡಿಮೆ ಇದೆ. ಏಕೆ ಹೀಗಾಗಿದೆ‌ ಎಂದು ಮುಖ್ಯಮಂತ್ರಿಗಳು ಖಾರವಾಗಿ ಪ್ರಶ್ನಿಸಿದರು. 

ಭೂಮಿಯ ಫಲವತ್ತತೆ ಕಡಿಮೆ ಆಗಿದೆ ಎಂದು ಜಂಟಿ ನಿರ್ದೇಶಕರು ಉತ್ತರಿಸಿದರು. ಹಾಗಿದ್ದರೆ ಫಲವತ್ತತೆ ಹೆಚ್ಚಿಸಲು ಸರ್ಕಾರದ ಕಾರ್ಯಕ್ರಮಗಳಿವೆ. ಅದನ್ನು ಎಷ್ಟು ಜಾರಿ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಕೃಷಿ ಭೂಮಿಗಳಿಗೆ ತಪ್ಪದೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು. ರೈತರ ಜತೆ ಮಾತನಾಡಿ ಅವರ ಸಮಸ್ಯೆಗಳನ್ನು ಕೇಳಿಸಿಕೊಳ್ಳಿ. ರೋಗ ರಹಿತ ಬೀಜ, ಅಗತ್ಯ ರಸಗೊಬ್ಬರ, ಫಲವತ್ತತೆ ಹೆಚ್ಚಿಸಲು ಕ್ರಮ ಕೈಗೊಳ್ಳಿ. ಮುಂದಿನ ಸಭೆ ವೇಳೆಗೆ ಪರಿಸ್ಥಿತಿ ಸುಧಾರಿಸಿರಬೇಕು ಎನ್ನುವ ಎಚ್ಚರಿಕೆ ಮಾದರಿಯ ಸಲಹೆಗಳನ್ನು ಮುಖ್ಯಮಂತ್ರಿಗಳು ನೀಡಿದರು. 

 

ಮಂಡ್ಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಇತರೆ ಪ್ರಮುಖ ಹೈಲೈಟ್ಸ್ ಗಳು:

 

- ಮಂಡ್ಯ ಜಿಲ್ಲೆಯ ಹಲವು ಭಾಗಗಳಲ್ಲಿ ಆನೆ, ಚಿರತೆ, ಹಾವಿನ ಕಾಟ ಇದ್ದು ಕೃಷಿಗೆ ರಾತ್ರಿ ವೇಳೆಗಿಂತ ಹಗಲಿನಲ್ಲೇ ನಿರಂತರ ಐದು ಗಂಟೆ ವಿದ್ಯುತ್ ಕೊಡಬೇಕು ಎನ್ನುವ ಬೇಡಿಕೆ ಇದೆ. ಬೇಡಿಕೆಗೆ ತಕ್ಕಂತೆ ಕ್ರಮ ವಹಿಸಲು ಸಾಧ್ಯವೇ ಪರೀಕ್ಷಿಸಿ. 

 

- ದಿನ ಬಿಟ್ಟು ದಿನ ಬೇರೆ ಬೇರೆ ಬ್ಯಾಚ್ ಗಳಲ್ಲಿ ನಿರಂತರ ಐದು ಗಂಟೆ 3 ಫೇಸ್ ವಿದ್ಯುತ್ ಸರಬರಾಜು ಕಡ್ಡಾಯವಾಗಿ ಆಗಲೇಬೇಕು. ಯಾವ ವೇಳೆಯಲ್ಲಿ ವಿದ್ಯುತ್ ಸರಬರಾಜು ಆಗುತ್ತದೆ ಎನ್ನುವ ಮಾಹಿತಿ ಆಯಾ ಭಾಗದ ರೈತರಿಗೆ ಕೊಡಬೇಕು. ಈ ಸಭೆಯಲ್ಲಿ ತೆಗೆದುಕೊಂಡ ಎಲ್ಲಾ ತೀರ್ಮಾನಗಳನ್ನು ಚಾಚೂ ತಪ್ಪದೆ ಜಾರಿ ಮಾಡಬೇಕು. ರೈತರಿಗೆ ದ್ರೋಹ ಮಾಡದೆ ಅವರಿಗೆ ನಡರವಾಗಿ.  ತಪ್ಪಿದರೆ ಕ್ರಮ ಖಚಿತ ಎಂದು ಎಚ್ಚರಿಸಿದರು. 

 

- ಮಂಡ್ಯ ಜಿಲ್ಲೆಯ ಯಾವುದೇ ಭಾಗದಲ್ಲೂ ಕುಡಿಯುವ ನೀರಿಗೆ ತೊಂದರೆ ಆಗಬಾರದು. ಬೇಕಿದ್ದರೆ ಎಷ್ಟಾದರೂ ಹಣ ಕೇಳಿ. ಕುಡಿಯುವ ನೀತಿನ ಬಗ್ಗೆ ದೂರು ಬಂದರೆ ನೇರವಾಗಿ ನಿಮ್ಮನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯ್ತಿ CEO ಗೆ ತಿಳಿಸಿದರು. 

 

- ಮಳವಳ್ಳಿಯಲ್ಲಿ ಕುಡಿಯುವ ನೀರು ಪೈಪ್ ಲೈನ್ ಕಾಮಗಾರಿಯನ್ನು ಅರ್ಧಕ್ಕೇ ನಿಲ್ಲಿಸಿ, ಕಳಪೆ ಕಾಮಗಾರಿ ಮಾಡಿರುವ  ಕುರಿತು ತನಿಖೆ ನಡೆಸಿ ಎಲ್ಲಿ ತಪ್ಪಾಗಿದೆ ಎಂದು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ನಗರಾಭಿವೃದ್ಧಿ ಕಾರ್ಯದರ್ಶಿ ಅಜಯ್ ನಾಗಭೂಷಣ್ ಅವರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು. 

 

- ಜಲ ಜೀವನ್ ಮಿಷನ್ ಹಗರಣದ ತನಿಖೆಗೆ ಆದೇಶಿಸಿ ಮೂರು ತಿಂಗಳಾದರೂ ಮಳವಳ್ಳಿಯಲ್ಲಿ ಇನ್ನೂ ತನಿಖೆಯೇ ಆರಂಭವಾಗದ ಬಗ್ಗೆ ಶಾಸಕ ನರೇಂದ್ರಸ್ವಾಮಿ ದೂರಿದರು. ದೂರಿಗೆ ತಕ್ಷಣ ಸ್ಪಂದಿಸಿ ತನಿಖೆ ನಡೆಸಿ ವರದಿ ನೀಡುವಂತೆ ಸಿಎಂ ಸೂಚನೆ ನೀಡಿದರು. 

 

- ಬರಗಾಲದ ಸಂದರ್ಭದಲ್ಲಿ ನರೇಗಾ ಕೆಲಸ 100 ದಿನ, 120 ದಿನ ಅಂತೆಲ್ಲಾ ಮಿತಿ ಹಾಕಿಕೊಳ್ಳಬೇಡಿ. ಕೆಲಸ ಕೇಳಿದವರಿಗೆಲ್ಲಾ ಕೆಲಸ ಕೊಡಿ. ಹಣ ಬೇಕಿದ್ದರೆ ಸರ್ಕಾರಕ್ಕೆ ಬರೆಯಿರಿ ಎಂದು CEO ಅವರಿಗೆ ಸೂಚನೆ ನೀಡಲಾಯಿತು. 

 

- ಕ್ಯಾನ್ಸರ್ ಆಸ್ಪತ್ರೆಯ ಸಿವಿಲ್ ಕೆಲಸ ಮತ್ತು ಲೈಬ್ರೆರಿ ಕಟ್ಟಡದ ಕೆಲಸ ಸೇರಿದಂತೆ ಎಲ್ಲವನ್ನೂ ತ್ವರಿತವಾಗಿ ಮುಗಿಸಲು ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರು ಸೂಚಿಸಿದರು. ಕ್ಯಾನ್ಸರ್ ರೋಗಿಗಳು ಮೈಸೂರು, ಬೆಂಗಳೂರಿಗೆ ಹೋಗುತ್ತಿದ್ದಾರೆ. ಆದ್ದರಿಂದ ಇಲ್ಲಿ ಕ್ಯಾನ್ಸರ್ ಆಸ್ಪತ್ರೆ ತ್ವರಿತವಾಗಿ ಕೆಲಸ ಆರಂಭಿಸಬೇಕು ಎನ್ನುವ ಸೂಚನೆ ನೀಡಿದರು. 

 

- 100 ಬೆಡ್ ಗಳ ಹೆರಿಗೆ ಆಸ್ಪತ್ರೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಬಾಕಿ ಕೆಲಸ ಮುಗಿಸಲು ಕೇವಲ 8 ಕೋಟಿ ರೂಪಾಯಿ ಅಗತ್ಯವಿದೆ ಎಂದು ಶಾಸಕ ರವಿ ಗಣಿಗ ಅವರು ಮುಖ್ಯಮಂತ್ರಿಗಳ ಗಮನ ಸೆಳೆದರು. ರವಿಯವರ ಮನವಿಗೆ ಸ್ಪಂದಿಸಿದ ಸಿಎಂ ಹಣ ಬಿಡುಗಡೆಗೊಳಿಸುವುದಾಗಿ ಸೂಚಿಸಿದರು. 

 

- ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತಗಳನ್ನು ಕಡಿಮೆ ಮಾಡುವ ದೃಷ್ಟಿಯಿಂದ ಅಗತ್ಯ ಅಂಡರ್ ಪಾಸ್, ಡ್ರೈನೇಜ್ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ನಡೆಸಬೇಕಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಅಸಮಾಧಾನಗೊಂಡ ಮುಖ್ಯಮಂತ್ರಿಗಳು, ನಾನು ಈ ಬಗ್ಗೆ ಕೇಂದ್ರ ಸಚಿವರನ್ನು ಭೇಟಿಯಾದಾಗ ಅಗತ್ಯ ಕಾಮಗಾರಿಗಳಿಗೆಲ್ಲಾ ಅನುಮತಿ ನೀಡುವ ಭರವಸೆ ನೀಡಿದ್ದರು. ಈ ಬಗ್ಗೆ ಬೇಗ ಸಂಬಂಧಪಟ್ಟವರನ್ನು ಸಂಪರ್ಕಿಸಿ ಪ್ರಕ್ರಿಯೆ ಪೂರ್ಣಗೊಳಿಸಿ ಎನ್ನುವ ಸಲಹೆ ನೀಡಿದರು. 

 

- ಲೋಕೋಪಯೋಗಿ ಇಲಾಖೆ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರ ಕುರಿತು ಸಚಿವ ಚಲುವರಾಯಸ್ವಾಮಿ ಮತ್ತು ಶಾಸಕ ರವಿ ಗಣಿಗ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿ, ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಸ್ಪಷ್ಟ ಸೂಚನೆ ನೀಡಿದರು.

**********

 

 

×
ABOUT DULT ORGANISATIONAL STRUCTURE PROJECTS