×
ಬರಗಾಲವಿದ್ದರೂ ನಮ್ಮ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದಂತೆ ಅರ್ಥಪೂರ್ಣ ದಸರಾ ಆಚರಿಸಲಾಗುವುದು: ಮುಖ್ಯಮಂತ್ರಿ

 

ಮೈಸೂರು, ಅಕ್ಟೋಬರ್ 15, 2023:

ಬರಗಾಲವಿದ್ದರೂ ನಮ್ಮ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದಂತೆ ಅರ್ಥಪೂರ್ಣ ದಸರಾ ಆಚರಿಸಲಾಗುವುದು. ನಮ್ಮ ಪರಂಪರೆ ಮತ್ತು ಹಿರಿಮೆಯನ್ನು ಜಗತ್ತಿಗೆ ಸಾರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. 

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕವಾಗಿ ಚಾಲನೆ ನೀಡಿ, ಮಾತನಾಡಿದರು.

ಕನ್ನಡ ನಾಡಿನ ಸಮೃದ್ಧಿ, ಪ್ರಗತಿ, ಸಂಸ್ಕೃತಿ ಮತ್ತು ವೈಭವವನ್ನು ದಸರಾ ಮೂಲಕ ಜಗತ್ತಿಗೆ ಸಾರುವ ಕೆಲಸವನ್ನು ನಾವು ಮಾಡುತ್ತೇವೆ.  ಸಾಂಸ್ಕೃತಿಕವಾಗಿ ಬಹಳ ಶ್ರೀಮಂತ ನಾಡು ನಮ್ಮದು. ನಮ್ಮ ಜನ ಬಹಳ ಸುಸಂಸ್ಕೃತರು. ಪ್ರೀತಿ ಹಂಚುವವರು. ಎಲ್ಲಾ ಜಾತಿ ಧರ್ಮದವರನ್ನು ಅತ್ಯಂತ ಪ್ರೀತಿಯಿಂದ, ಘನತೆಯಿಂದ ನಡೆಸಿಕೊಳ್ಳುವುದು ನಮ್ಮ ಧರ್ಮ ಮತ್ತು ಕರ್ತವ್ಯ ಎಂದರು.

ರಾಜ್ಯದ 116 ತಾಲ್ಲೂಕುಗಳಲ್ಲಿ ಮಳೆ ಇಲ್ಲದೆ ತೀವ್ರ ಬರಗಾಲದ ಸ್ಥಿತಿ ಇದೆ. ಮಳೆ ಇಲ್ಲದೆ ನಾಡಿನ ರೈತ ಕುಲ , ನಾಡಿನ ಜನತೆ ಕಷ್ಟದಲ್ಲಿದ್ದಾರೆ. ಆದ್ದರಿಂದ ಅದ್ದೂರಿ ಇಲ್ಲದ ವೈಭವಕ್ಕೆ ಕೊರತೆ ಇಲ್ಲದ ಅರ್ಥಪೂರ್ಣ ದಸರಾ ಆಚರಿಸಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.

ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಸಾಂಪ್ರದಾಯಕವಾಗಿ, ಅರ್ಥಪೂರ್ಣವಾಗಿ  ಉದ್ಘಾಟಿಸಿದರು.

ಪಲ್ಲಕ್ಕಿಯಲ್ಲಿ ಅಲಂಕೃತ ಗೊಂಡಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಮೈಸೂರು ಮೇಯರ್ ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾಜ್೯, ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಆಹಾರ ನಾಗರೀಕ ಫೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ತನ್ವೀರ್ ಸೇಠ್, ಎ.ಆರ್.ಕೃಷ್ಣಮೂರ್ತಿ, ಟಿ.ಎಸ್.ಶ್ರೀವತ್ಸ,ವ ಸದಸ್ಯ ಮರಿತಿಬ್ಬೇಗೌಡ, ಉಪ ಮೇಯರ್ ಡಾ.ಜಿ.ರೂಪ, ಜಿಲ್ಲಾಧಿಕಾರಿ ದಸರಾ ವಿಶೇಷಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿ.ಪಂ. ಸಿಇಓ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.

 

ಭಾಷಣದ ಇತರೆ ಹೈಲೈಟ್ಸ್:

 

- ಮೈಸೂರು ಅರಸರ ಕಾಲದಿಂದಲೂ ಅತ್ಯಂತ ವೈಭವದಿಂದ ಆಚರಿಸಲ್ಪಡುತ್ತಿರುವ ದಸರಾವನ್ನು ನಾನು ತಂದೆಯ ಹೆಗಲ ಮೇಲೆ ಕುಳಿತು ನೋಡುತ್ತಿದ್ದೆ.

 

- ರಾಜರ ಕಾಲ ಮುಗಿದು ಪ್ರಜಾರಾಜ್ಯ ಬಂದ ಬಳಿಕ ರಾಜ್ಯ ಸರ್ಕಾರ ನಾಡಹಬ್ಬವಾಗಿ ದಸರಾವನ್ನು ಆಚರಿಸುತ್ತಿದೆ.

 

- ಸರ್ವರಿಗೂ ಸಮಾನ ಅವಕಾಶ ಕಲ್ಪಿಸುವುದೇ ಸಾಮಾಜಿಕ ನ್ಯಾಯ. ಇದು ನಮ್ಮ ಸಂವಿಧಾನದ ಮತ್ತು ನಮ್ಮ ಸರ್ಕಾರದ ಆಶಯ.

 

- ಕೇವಲ ರಾಜಕೀಯ ಸ್ವಾತಂತ್ರ್ಯ ಸಾಲದು. ನಮ್ಮ ಜನರಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಒರಬೇಕು ಎಂದು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದರು.

 

- ಸರ್ವ ಜನರ ಆರ್ಥಿಕ ಸ್ವಾತಂತ್ರ್ಯಕ್ಕಾಗಿಯೇ ನಾನು ಐದು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆವು.

 

ನಮ್ಮ ಸರ್ಕಾರ ಕಲೆ ಸಾಹಿತ್ಯಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡಲಿದೆ:

ನಮ್ಮ ಸರ್ಕಾರ ಕಲೆ ಸಾಹಿತ್ಯಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡಲಿದೆ. ಕನ್ನಡ ಸಾಂಸ್ಕೃತಿಕ ಹಿರಿಮೆ ವಿಶ್ವ ಖ್ಯಾತಿಯಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. 

ವಿಶ್ವ ವಿಖ್ಯಾತ ದಸರಾ ಪ್ರಯುಕ್ತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಡಾ.ಪದ್ಮಾಮೂರ್ತಿ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಸನ್ಮಾನಿಸಿದ ಬಳಿಕ ಮಾತನಾಡಿದರು. 

ಸಂಗೀತ, ಸಾಹಿತ್ಯಕ್ಕೆ ಕನ್ನಡ ನಾಡು ನಿರಂತರವಾಗಿ ಪ್ರೋತ್ಸಾಹದಾಯಕ ವಾಗಿದೆ. ನಾವೂ ಈ ಪರಂಪರೆಯನ್ನು ಮುಂದುವರೆಸುತ್ತಿದ್ದೇವೆ ಎಂದರು. 

ರಾಜ್ಯದಲ್ಲಿ ಮಳೆ ಕೈ ಕೊಟ್ಟಿದೆ. ಬೆಳೆ ನಷ್ಟವಾಗಿದೆ. ಬರಗಾಲದ ಸ್ಥಿತಿ ಇಡಿ ರಾಜ್ಯವನ್ನು ಆವರಿಸಿದೆ. ಆದರೂ ಸರ್ಕಾರ ರೈತರ, ನಾಡಿನ ಜನತೆಯ ಕೈ ಹಿಡಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. 

ಡಾ.ಪದ್ಮಾಮೂರ್ತಿ ಕಲಾ ಸೇವೆ ಅಪೂರ್ವ:

ಡಾ.ಪದ್ಮಾಮೂರ್ತಿ ಅವರ ಕಲಾ ಸೇವೆ ಅಪೂರ್ವವಾದದ್ದು. ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾದ ಇವರು ದೀರ್ಘಕಾಲ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರನ್ನು ಸರ್ಕಾರ ಗುರುತಿಸಿ ದಸರಾ ಸಂದರ್ಭದಲ್ಲಿ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿರುವುದು ಶ್ಲಾಘನೀಯ. 91ರ ವಯಸ್ಸಲ್ಲೂ ಅತ್ಯಂತ ಸ್ಪಷ್ಟ ಧ್ವನಿ ಹೊಂದಿದ್ದಾರೆ  ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀವತ್ಸ ಅವರು ಅಧ್ಯಕ್ಷತೆ ವಹಿಸಿದ್ದರು. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ದೀಪಾಲಂಕಾರವನ್ನು ಉದ್ಘಾಟಿಸಿದರು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಮಹಾಪೌರರಾದ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತು ತನ್ವೀರ್ ಸೇಠ್ ಸೇರಿ ಹಲವು ಶಾಸಕರು ಉಪಸ್ಥಿತರಿದ್ದರು.

ಮೌಲ್ಯಯುತ ಸಿನಿಮಾಗಳಿಗೆ ಸರ್ಕಾರದ ನೆರವು:

ಬದುಕಿಗೆ ಮೌಲ್ಯಗಳನ್ನು ನೀಡುವ ಸಿನಿಮಾಗಳು ಹೆಚ್ಚೆಚ್ಚು ಬರಬೇಕು. ಅವು ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. 

ಮೈಸೂರು ದಸರಾ ಸಿನಿಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. 

ಗುಣಮಟ್ಟದ ಸಿನಿಮಾಗಳಿಗೆ ಸರ್ಕಾರ ಸದಾ ನೆರವು ನೀಡುತ್ತದೆ. ಜನಪರ ಸಿನಿಮಾ ಮಾಡುವವರಿಗೆ ಸರ್ಕಾರದ ಸಹಾಯಹಸ್ತ ಸದಾ ಇರುತ್ತದೆ ಎಂದರು. 

ಹಾಸ್ಯ ನಟ ನರಸಿಂಹರಾಜುಗೆ ನರಸಿಂಹರಾಜುನೇ ಸರಿಸಾಟಿ. ಕನ್ನಡ ಚಿತ್ರರಂಗ ಕಂಡ ಅಪರೂಪದ ಹಾಸ್ಯ ನಟ ನರಸಿಂಹರಾಜು. ಇವರು ಇಲ್ಲದ ಸಿನಿಮ, ಸಿನಿಮಾವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಅವರ ಪ್ರತಿಭೆ ಬೆಳ್ಳಿ ತೆರೆಯಲ್ಲಿ ಬೆಳಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

**********

 

 

 

×
ABOUT DULT ORGANISATIONAL STRUCTURE PROJECTS