×
ಚಾಮರಾಜನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಹೈಲೈಟ್ಸ್

 

ಚಾಮರಾಜನಗರ, ಸೆಪ್ಟಂಬರ್ 27, 2023:

ಚಾಮರಾಜನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಚಾಮರಾಜನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಹೈಲೈಟ್ಸ್‌:

⦁ ಜೂನ್‌ನಿಂದ ಆಗಸ್ಟ್‌ವರೆಗೂ ಅಗತ್ಯವಾದಷ್ಟು ಮಳೆ ಆಗದ ಕಾರಣದಿಂದ ಬರದ ಮತ್ತು ಸಂಕಷ್ಟದ ಪರಿಸ್ಥಿತಿ ಇದೆ.

⦁ 161 ತೀವ್ರ ಬರಗಾಲ, 34 ತಾಲ್ಲೂಕುಗಳು ಸಾಧಾರಣ ಬರಗಾಲದ ಸ್ಥಿತಿ ಇದೆ. ಇದಕ್ಕೆ ಇನ್ನಷ್ಟು ತಾಲ್ಲೂಕುಗಳು ಸೇರಬಹುದು.

⦁ ಡಿಸಿ ಮತ್ತು ಸಿಇಒ ಗಳ ಸಭೆಯಲ್ಲಿ ಕೆಲವು ನಿರ್ದೇಶನಗಳನ್ನು ನೀಡಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಸ್ಪಷ್ಟ ನಿರ್ದೇಶನ ನೀಡಿದ್ದೇನೆ. ಹಣಕ್ಕೆ ಯಾವುದೇ ಕೊರತೆ ಇಲ್ಲ.

⦁ ಯಾವುದೇ ಮೂಲದಿಂದಾದರೂ ಸರಿ. ಕುಡಿಯುವ ನೀರಿಗೆ ಕೊರತೆ ಆಗಬಾರದು. ಸಾವಜನಿಕರಿಂದ ದೂರುಗಳು ಬರಬಾರದು.

⦁ ಡಿಸಿ, ಸಿಇಒ ಮತ್ತು ಉಸ್ತುವಾರಿ ಕಾಯದರ್ಶಿಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು.

⦁ ಬರಗಾಲದ ಕಾರಣದಿಂದ ವಿದ್ಯುತ್‌ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ವಿದ್ಯುತ್‌ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಕೊರತೆ ಆಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ.

⦁ ಕೆಲಸ ಹುಡುಕಿಕೊಂಡು ವಲಸೆ ಹೋಗುವ, ಗುಳೆ ತೆರಳುವ ಸ್ಥಿತಿ ಬಾರದಂತೆ, ನರೇಗಾ ಯೋಜನೆಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ೧೫೦ ದಿನ ಕೆಲಸ ಕೊಡಬೇಕು. ಉದ್ಯೋಗ ಸೃಷ್ಟಿಯ ಇತರೆ ಸಾಧ್ಯತೆಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು.

⦁ ಮುಂದಿನ ದಿನಗಳಲ್ಲಿ ಜಾನವಾರುಗಳಿಗೆ ನೀರು, ಮೇವು ಕೊರತೆ ಆಗಬಾರದು. ಹೀಗಾಗಿ ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಹೊರ ರಾಜ್ಯಗಳಿಗೆ ಮೇವು ಹೋಗದಂತೆ ತಡೆಯಬೇಕು. ರಾಸುಗಳಿಗೆ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅಗತ್ಯ ಎಲ್ಲಾ ಲಸಿಕೆ ಮತ್ತು ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು.

⦁ ಖಾಸಗಿಯಾಗಿ ಸಾಲ ಕೊಟ್ಟವರು ರೈತರಿಗೆ ಬಲವಂತದ ವಸೂಲಿ ಮಾಡದಂತೆ ಕ್ರಮ ಕೈಗೊಳ್ಳಬೇಕು. ಬರದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಶೋಷಣೆ ಮಾಡದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

⦁ ಕೃಷಿ ಇಲಾಖೆ ರೈತರಿಗೆ ಮತ್ತೆ ಮತ್ತೆ ಬೀಗ, ಗೊಬ್ಬರ, ಔಷಧಿ ಸರಬರಾಜು ಮಾಡಬೇಕು. ಒಮ್ಮೆ ಕೊಟ್ಟ ಬಳಿಕ ಕೈಕಟ್ಟಿ ಕೂರಬಾರದು. ಯಾವುದೇ ಕಾರಣಕ್ಕೆ ಬೆಳೆಹಾನಿ ಸಂಭವಿಸಿದರೆ ಮತ್ತಎ ಹೊಸದಾಗಿ ರೈತರಿಗೆ ಇವೆಲ್ಲವನ್ನೂ ವಿತರಿಸಬೇಕು. ಪರ್ಯಾಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು.

⦁ ಇದುವರೆಗೂ ನಾನು ಹೇಳಿದ ಎಲ್ಲವನ್ನೂ ಕಟ್ಟು ನಿಟ್ಟಾಗಿ ಪಾಲಿಸಬೇಕು. ಇವುಗಳ ಬಗ್ಗೆ ಸಾರ್ವಜನಿಕರಿಂದ ಯಾವುದೇ ರೀತಿಯ ದೂರುಗಳು ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಖಚಿತ.

⦁ ಜಿಲ್ಲಾಧಿಕಾರಿಗಳು ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು.

⦁ ಚುನಾವಣೆಗೆ ಮೊದಲು ನಾವು ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ನಾಲ್ಕನ್ನು ಈಗಾಗಲೇ ಜಾರಿ ಮಾಡಿಯಾಗಿದೆ. ಈ ನಾಲ್ಕೂ ಗ್ಯಾರಂಟಿಗಳನ್ನು ಪರಿಣಾಮಕಾರಿಯಾಗಿ ಜನರಿಗೆ, ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇದರಲ್ಲಿ ಯಾವುದೇ ಲೋಪ ಆಗಬಾರದು.

 

⦁ ಎರಡು ಲಕ್ಷ ತೊಂಬತ್ತು ಸಾವಿರ ಪಡಿತರ ಚೀಟಿಗಳಿದ್ದೂ ಇನ್ನೂ ಒಂದು ಲಕ್ಷ ೨೪ ಸಾವಿರ ಪಡಿತರ ಚೀಟಿದಾರರಿಗೆ ೫ ಕೆಜಿ ಅಕ್ಕಿಯ ಹಣ ಇನ್ನೂ ತಲುಪಿಲ್ಲ ಏಕೆ ? ಲೋಪಗಳನ್ನು ಸರಿಪಡಿಸಲು ೩ ತಿಂಗಳಾದರೂ ಏಕೆ ಆಗಿಲ್ಲ ಎಂದು ಮುಖ್ಯಮಂತ್ರಿಗಳು ಆಹಾರ ಇಲಾಖೆಯ ಅಧಿಕಾರಿಯನ್ನು ಖಾರವಾಗಿ ಪ್ರಶ್ನಿಸಿ, ಸರ್ಕಾರದ ಸವಲತ್ತು ಪ್ರತಿಯೊಬ್ಬರಿಗೂ ತಲುಪಇಸುವ ಜವಾಬ್ದಾರಿ ನಿಮ್ಮ ಮೇಲಿದೆ. ತಕ್ಷಣ ಏನೇ ಲೋಪಗಳಿದ್ದರೂ ಬಗೆಹರಿಸಿ ಜನರಿಗೆ ಸವಲತ್ತು ತಲುಪಿಸಿ, ಇಲ್ಲದಿದ್ದರೆ ಕ್ರಮ ಎದುರಿಸಲು ಸಿದ್ದರಾಗಿ ಎಂದು ಎಚ್ಚರಿಸಿದರು.

⦁ ಜೂನ್‌ ೧೧ ರಿಂದ ಇಲ್ಲಿಯವರೆಗೆ ಒಂದು ಕೋಟಿ ೨೬ ಲಕ್ಷ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಜೂನ್‌ ೧೧ ಕ್ಕೂ ಮೊದಲು ಪ್ರಯಾಣಿಕರ ಸಂಖ್ಯೆ ತಿಂಗಳಿಗೆ ೭೦ ಸಾವಿರದಷ್ಟು ಇತ್ತು. ಈಗ ಇದು ಒಂದು ಲಕ್ಷ ೪೦ ಸಾವಿರಕ್ಕೆ ಏರಿಕೆಯಾಗಿ ಒಟ್ಟು ಪ್ರಯಾಣಿಕರ ಪ್ರಮಾಣ ಶೇ೧೦೦ ರಷ್ಟು ಹೆಚ್ಚಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಬಳಿಕ, ಹನೂರು ಭಾಗದ ಹಲವು ಕಡೆ ಬಸ್‌ಗಳ ಕೊರತೆಯಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿರುವುದರ ಬಗ್ಗೆ ಮಾಧ್ಯಮಗಳಲ್ಲಿ ಬಂದಿದ್ದ ವರದಿಯನ್ನು ತೋರಿಸಿ ಮುಖ್ಯಮಂತ್ರಿಗಳು ಪ್ರಶ್ನಿಸಿ, ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಂಡು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. 

⦁ ರಾಜ್ಯದ ಸರಾಸರಿ ಗೃಹ ಬಳಕೆಯ ವಿದ್ಯುತ್‌ ಪ್ರಮಾಣ ೫೩ ಯೂನಿಟ್‌ ಇದೆ. ಜಿಲ್ಲೆಯ ಸರಾಸರಿ ಎಷ್ಟಿದೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಚಾಮರಾಜನಗರ ಜಿಲ್ಲೆಯ ಸರಾಸರಿ ವಿದ್ಯುತ್‌ ಬಳಕೆ ೩೨ ಯೂನಿಟ್‌ ಇದೆ ಎಂದು ಪ್ರಶ್ನಿಸಿದರು. ಕನಿಷ್ಠ ೬೦ ರಿಂದ ಗರಿಷ್ಠ ೧೮೦ ಯೂನಿಟ್‌ವರೆಗೆ ಜಿಲ್ಲೆಯಲ್ಲಿ ವಿದ್ಯುತ್‌ ಬಳಕೆ ಮಾಡುವವರಿದ್ದಾರೆ ಎನ್ನುವ ಉತ್ತರ ಅಧಿಕಾರಿಗಳಿಂದ ಬಂತು. 

⦁ ಚಾಮರಾಜನಗರ ಜಿಲ್ಲೆಯಲ್ಲಿ ಬೆಟ್ಟ ಗುಡ್ಡಗಳು ಮತ್ತು ಅರಣ್ಯ ಪ್ರದೇಶಗಳು ಇರುವುದರಿಂದ ಹಗಲು ಹೊತ್ತಿನಲ್ಲೇ ೩ ಫೇಸ್‌ ವಿದ್ಯುತ್‌ ನಿರಂತರ ೭ ಗಂಟೆ ಇರುವಂತೆ ಮಾಡಿ ಎನ್ನುವ ಬೇಡಿಕೆ ರೈತರಿಂದ ಇದೆ. ಆದ್ದರಿಂದ ಈ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿಗಳು ಸೂಚಿಸಿದರು. 

⦁ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಕೃಷಿ ಚಟುವಟಿಕೆ ಪ್ರಮಾಣ ಕಡಿಮೆ ಇದೆ. ಕಳೆದ ವರ್ಷ ಈ ಹೊತ್ತಿಗೆ ಶೇ೯೬ ರಷ್ಟು ಬಿತ್ತನೆ ಆಗಿತ್ತು. ಈ ವರ್ಷ ಶೇ೭೧ ರಷ್ಟು ಮಾತ್ರ ಆಗಿದೆ. ಮಳೆಯ ವ್ಯತ್ಯಾಸದಿಂದ ಇದರಲ್ಲಿ ಶೇ೫೦ ರಷ್ಟು ಬೆಳೆ ಮಾತ್ರ ರೈತರ ಕೈಗೆ ಬರಲಿದೆ. ಉಳಿದ ಬೆಳೆ ಹಾನಿಯಾಗಬಹುದು ಎನ್ನುವ ಅಂದಾಜಿದೆ ಎನ್ನುವ ಮಾಹಿತಿಯನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸಭೆಗೆ ನೀಡಿದರು. 

⦁ ಪರ್ಯಾಯ ಬೆಳೆ ಬೆಳೆಯಲು ರೈತರಿಗೆ ಅಗತ್ಯವಾದ ಬೀಜ, ರಸಗೊಬ್ಬರ, ಔಷಧ ಸಂಗ್ರವಿದೆಯೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಂಟಿ ನಿರ್ದೇಶಕರು ಸಾಕಷ್ಟು ಸಂಗ್ರಹ ಇದೆ. ರೈತರಿಗೆ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. 

⦁ ಹನೂರು ತಾಲ್ಲೂಕಿನಲ್ಲಿ ಕಳೆದ ೬ ತಿಂಗಳಿನಿಂದ ನರೇಗಾ ಕೆಲಸ ಆಗಿಲ್ಲ. ಸಾಮಾಗ್ರಿಗಳ ಬಿಲ್‌ಗಳು ಪಾವತಿಯಾಗಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಅವರು ದೂರಿದರು. ಈ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳನ್ನು ಪ್ರಶ್ನಿಸಿದರು. 

⦁ ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯ್ತಿ ಸಿಇಓ, ನಮ್ಮಿಂದ ಪ್ರಸ್ತಾವೆನೆ ಹೋಗಿರಲಿಲ್ಲ. ಹೀಗಾಗಿ ೩೫ ಕೋಟಿ ಸಾಮಾಗ್ರಿ ಬಿಲ್‌ಗಳು ಬಾಕಿ ಇತ್ತು. ಈಗ ಲೋಪಗಳನ್ನೆಲ್ಲಾ ಸರಿಪಡಿಸಿ ಸಂಬಂದಪಟ್ಟವರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. ನಾಳೆ ಪ್ರಸ್ತಾವನೆಯನ್ನು ಕಳುಹಿಸುತ್ತೇವೆ. ಪ್ರಸ್ತಾವನೆ ತಲುಪಿದ ತಕ್ಷಣ ಹಣ ಬಿಡುಗಡೆ ಮಾಡುವುದಾಗಿ ನರೇಗಾ ಕಾರ್ಯದರ್ಶಿಗಳು ತಿಳಿಸಿದ್ದಾರೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, "ಬರಗಾಲ ಇರುವುದರಿಂದ ಉದ್ಯೋಗ ಖಾತ್ರಿಯನ್ನು ಪರಿಣಾಮಕಾರಿಯಾಗಿ ಬಳಸಿ. ನರೇಗಾ ಕೆಲಸಗಳು ಹೆಚ್ಚೆಚ್ಚು ನೀಡಿ ಜನರ ಕೈಯಲ್ಲಿ ಹಣ ಇರುವಂತೆ ನೋಡಿಕೊಳ್ಳುವುದು ನಿಮ್ಮ ಹೊಣೆಗಾರಿಕೆ. ಜನ ಜೀವನ ಮಾಡಬೇಕೋ ಬೇಡವೋ ಎಂದು  ಪ್ರಶ್ನಿಸಿದ ಮುಖ್ಯಮಂತ್ರಿಗಳು...ಯಾವುದೇ ಕಾರಣಕ್ಕೂ ಕೆಲಸ ಕೇಳಿದವರಿಗೆ ಕೆಲಸ ಇಲ್ಲ ಎಂದು ಹೇಳುವಂತಿಲ್ಲ. ಕೆಲಸ ಕೊಡಬೇಕು. ಅವರ ಕೈಗೆ ಹಣವನ್ನೂ ಕೊಡಬೇಕು ಎಂದು ಸೂಚಿಸಿದರು.

⦁  ಜಿಲ್ಲೆಯ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆಯ ಸ್ಥಿತಿಗತಿ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ನಗರಸಭೆ ಅಧಿಕಾರಿಗಳು, ಯೋಜನಾಧಿಕಾರಿಗಳು ನೀಡಿದ ಮಾಹಿತಿಗಳು ಪರಸ್ಪರ ತದ್ವಿರುದ್ಧ ಇರುವುದಕ್ಕೆ ಮುಖ್ಯಮಂತ್ರಿಗಳು ಗರಂ ಆದರು. ಬಳಿಕ ಇಡೀ ಜಿಲ್ಲೆಯ ಒಳಚರಂಡಿ ವ್ಯವಸ್ಥೆ ಮತ್ತು ಕುಡಿಯುವ ನೀರಿನ ಸ್ಥಿತಿ ಗತಿ ಬಗ್ಗೆ ಸಮಗ್ರ ಮಾಹಿತಿ ಮತ್ತು ಆಗಬೇಕಾಗಿರುವ ಕೆಲಸಗಳು ಹಾಗೂ ಈ ಕೆಲಸಗಳಿಗೆ ತಗುಲುವ ವೆಚ್ಚದ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮಂಜುನಾಥ್‌ ಪ್ರಸಾದ್‌ ಅವರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಬಳಿಕ, ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಬೋರ್‌ವೆಲ್‌, ಟ್ಯಾಂಕರ್‌ ನೀರು, ಕುಡಿಯುವ ನೀರಿನ ಪ್ಲಾಂಟ್‌ಗಳನ್ನು ಅಳವಡಿಸಿಕೊಳ್ಳಬೇಕು. ಹಣ ಬೇಕಿದ್ದರೆ ಸರ್ಕಾರಕ್ಕೆ ಕೇಳಿ. ಎಷ್ಟು ಬೇಕಾದರೂ ಕೊಡುತ್ತೇವೆ. ಆದರೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಸೂಚನೆ ನೀಡಿದರು. 

⦁ ಕೋವಿಡ್‌ ಅವಧಿಯಲ್ಲಿ ಆಕ್ಸಿಜನ್‌ ಕೊರತೆಯಿಂದ ಮೃತಪಟ್ಟ ಕುಟುಂಬಗಳಿಗೆ ಒಂದು ಸರ್ಕಾರಿ ಉದ್ಯೋಗ ಕೊಡುವುದಾಗಿ ನಾವು ಭರವಸೆ ನೀಡಿದ್ದೆವು. ಇವರಿಗೆ ಕೆಲಸ ಕೊಡುವ ಸೂಚನೆಯನ್ನೂ ನಾನು ನೀಡಿದ್ದೆ. ಆ ಬಗ್ಗೆ ಏನಾಗಿದೆ ಬೆಳವಣಿಗೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಅವರು, ೩೨ ಮಂದಿಗೆ ಕಾಯಂ ಉದ್ಯೋಗ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಅವರ ವಿದ್ಯಾರ್ಹತೆಗಳನ್ನು ಪಡೆದುಕೊಂಡು, ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗಗಳು ಎಲ್ಲಿ ಖಾಲಿ ಇವೆ ಎನ್ನುವ ಮಾಹಿತಿಯನ್ನೂ ಪಡೆದು ಗುರುತು ಮಾಡಿಕೊಂಡಿದ್ದೇವೆ. ಈ ಪ್ರಸ್ತಾವನೆ ಕ್ಯಾಬಿನೆಟ್‌ ನಲ್ಲಿ ಒಪ್ಪಿಗೆ ಪಡೆಯುವ ಅಗತ್ಯವಿದೆ. ನಮ್ಮ ಕಡೆಯಿಂದ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು ಎಂದು ಸಭೆಗೆ ತಿಳಿಸಿದರು. 

⦁ ಎಸಿ, ಡಿಸಿ ಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಬೇಕು ಎನ್ನುವ ಸೂಚನೆಯನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದೆ. ಆ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ೩,೪,೫ ವರ್ಷಗಳಿಂದ ಬಾಕಿ ಇದ್ದ ಪ್ರಕರಣಗಳನ್ನೆಲ್ಲಾ ನಿಮ್ಮ ಸೂಚನೆ ಬಂದ ಬಳಿಕ ಬಗೆಹರಿಸಲಾಗಿದೆ. ಕೇವಲ ಆರರಿಂದ ೧೨ ತಿಂಗಳ ಅವಧಿಯ ಪ್ರಕರಣಗಳು ಬಾಕಿ ಇವೆ. ಆರು ತಿಂಗಳ ಆಯಸ್ಸಿನ ಪ್ರಕರಣಗಳನ್ನು ಒಂದು ತಿಂಗಳಿನಲ್ಲಿ ಬಗೆಹರಿಸುತ್ತೇವೆ ಎನ್ನುವ ಭರವಸೆಯ ಉತ್ತರ ಅಧಿಕಾರಿಗಳಿಂದ ಬಂತು. 

⦁ ಸರ್ಕಾರಿ ಜಮೀನು ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಿ. ಕೆರೆ ಒತ್ತುವರಿ ಮತ್ತು ಅರಣ್ಯ ಭೂಮಿ, ಸರ್ಕಾರಿ ಭೂಮಿ ಒತ್ತುವರಿ ತೆರವು ಶೀರ್ಘವಾಗಿ ಆಗಬೇಕು ಎನ್ನುವ ಸೂಚನೆಯನ್ನು ಮುಖ್ಯಮಂತ್ರಿಗಳು ನೀಡಿದರು.

⦁ ಆರೋಗ್ಯ ಸೈಚ್ಯಂಕದಲ್ಲಿ ಚಾಮರಾಜನಗರ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿಗಳ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳು, ಸದ್ಯ ೨೧ನೇ ಸ್ಥಾನದಲ್ಲಿದೆ. ಮುಂದಿನ ಒಂದು ವರ್ಷದಲ್ಲಿ ೧೦ನೇ ಸ್ಥಾನಕ್ಕೆ ತರುವ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕರಲ್ಲಿ ಜಾಗ್ರತೆ ಮೂಡಿಸುವುದರಿಂದ ಹಿಡಿದು ಪ್ರತೀ ತಾಲ್ಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪದೇ ಪದೇ ಭೇಟಿ ನೀಡುವುದೂ ಸೇರಿದಂತೆ ಹಲವು ಹಂತದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಇವೆಲ್ಲದರಿಂದ ಒಂದು ವರ್ಷದ ಅಂತರದಲ್ಲಿ ಜಿಲ್ಲೆಯನ್ನು ೧೦ನೇ ಸ್ಥಾನಕ್ಕೆ ಏರಿಸಬಹುದು ಎನ್ನುವ ಆತ್ಮವಿಶ್ವಾಸವಿದೆ ಎಂದು ತಿಳಿಸಿದರು.

**********

 

 

 

×
ABOUT DULT ORGANISATIONAL STRUCTURE PROJECTS