×
ಮನೆ-ಮನಗಳನ್ನು ತಲುಪಿದ ಜನತಾ ದರ್ಶನ: ಮುಖ್ಯಮಂತ್ರಿ ಅವರ ಮೊದಲ ಸೂಚನೆಗೆ ಸಿಕ್ಕ ಯಶಸ್ಸು

 

ಬೆಂಗಳೂರು, ಸೆಪ್ಟೆಂಬರ್ 25, 2023:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಮೊಟ್ಟ ಮೊದಲ ಬಾರಿಗೆ ರಾಜ್ಯಾದ್ಯಂತ ಏಕ‌ಕಾಲಕ್ಕೆ ಎಲ್ಲಾ ಜಿಲ್ಲೆಗಳಲ್ಲಿ ನಡೆದ ಜನತಾ ದರ್ಶನಕ್ಕೆ ಸಾರ್ವಜನಿಕರು ಮತ್ತು ಅಧಿಕಾರಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 

ಎರಡು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲೂ ಜನತಾದರ್ಶನ ನಡೆದಿದೆ. 

ಸಂಜೆ 6:30 ರ ವೇಳೆಗೆ ಲಭ್ಯವಿದ್ದ ಅಂಕಿ ಅಂಶಗಳ ಪ್ರಕಾರ ರಾಜ್ಯಾದ್ಯಂತ 6684 ಅಹವಾಲು ಮತ್ತು ಮನವಿಗಳು ಸ್ವೀಕೃತಗೊಂಡು 21ಕ್ಕೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ. ಉಳಿದಂತೆ 6663 ಅರ್ಜಿ, ಅಹವಾಲುಗಳು ದಾಖಲಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ರವಾನೆಯಾಗಿವೆ. (ಇದರಲ್ಲಿ ಮೌಖಿಕ ದೂರುಗಳು ಮತ್ತು ಪರಿಹಾರಗಳು ದಾಖಲಾಗಿಲ್ಲ). 

ಸ್ವೀಕರಿಸಲಾಗಿರುವ ಅಹವಾಲುಗಳಲ್ಲಿ ಕಂದಾಯ ಇಲಾಖೆಯದ್ದೇ ಸಿಂಹಪಾಲು ಆಗಿವೆ. ಸಂಜೆ 6:30 ಗಂಟೆವರೆಗೂ ಸಿಕ್ಕಿರುವ ಅಂಕಿ ಅಂಶಗಳ ಪ್ರಕಾರ 2100 ಕ್ಕೂ ಹೆಚ್ಚು ಅಹವಾಲುಗಳು ಕಂದಾಯ ಇಲಾಖೆಗೆ ಸೇರಿದ್ದಾಗಿವೆ. ನಂತರದ ಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೇರಿದ ಅಹವಾಲುಗಳಿವೆ. ಸಾವಿರಕ್ಕೂ ಅಧಿಕ ಅಹವಾಲುಗಳು ಈ ಇಲಾಖೆಗೆ ಸಂಬಂಧಿಸಿದ್ದಾಗಿವೆ. ಮೂರನೇ ಅತಿ ಹೆಚ್ಚು ಅಹವಾಲುಗಳು ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ್ದಾಗಿವೆ. 

ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಎದುರಿಗೆ ಅತಿ ಹೆಚ್ಚು ಸಮಸ್ಯೆಗಳು ಮತ್ತು ಅಹವಾಲುಗಳು ಸಲ್ಲಿಕೆಯಾಗಿವೆ. ಉಳಿದಂತೆ ಜಿಲ್ಲಾಧಿಕಾರಿಗಳ ಮುಂದೆ ಸಲ್ಲಿಕೆಯಾದವುಗಳಾಗಿವೆ. ಜಿಲ್ಲಾ ರಕ್ಷಣಾಧಿಗಳ ಎದುರಿಗೆ ಕೆಲವು ಜಿಲ್ಲೆಗಳನ್ನು ಹೊರತು ಪಡಿಸಿದರೆ ಹೆಚ್ಚಿನ‌ ಕಡೆ ಅತಿ ಕಡಿಮೆ ಅಹವಾಲುಗಳು ಸಲ್ಲಿಕೆ ಆಗಿರುವುದು ಆಶ್ಚರ್ಯದ ಜತೆಗೆ ವಿಶ್ಲೇಷಣೆ ಮಾಡಬೇಕಾದ ಸಂಗತಿಯಾಗಿದೆ. 

ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಹವಾಲುಗಳು ದಾಖಲಾಗಿವೆ. 774 ಅಹವಾಲುಗಳ ಮೂಲಕ ಹಾವೇರಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, 432 ಅಹವಾಲುಗಳ ಮೂಲಕ ಹಾಸನ ಎರಡನೇ ಸ್ಥಾನದಲ್ಲಿ, 423 ಅಹವಾಲುಗಳ ಮೂಲಕ ಕೋಲಾರ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. 

ಒಟ್ಟು ಅರ್ಜಿ ರೂಪದಲ್ಲಿ ಬಂದ ಅಹವಾಲುಗಳನ್ನು ದಾಖಲಿಸಿಕೊಳ್ಳುವ ಮತ್ತು ಸ್ಥಳದಲ್ಲೇ ಪರಿಹಾರಕ್ಕೆ ಪ್ರಯತ್ನಿಸುವ ಪ್ರಕ್ರಿಯೆ ಒಂದು ಕಡೆ ನಡೆದಿದೆ. ಮತ್ತೊಂದು ಕಡೆ ಅರ್ಜಿ ಇಲ್ಲದೆ ಮೌಖಿಕವಾಗಿ ಬಂದ ಅಹವಾಲುಗಳನ್ನೂ ದಾಖಲಿಸಿಕೊಳ್ಳುವ ಜತೆಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ. 

ಮೌಖಿಕವಾಗಿ ದೂರು ಕೊಡಲು ಬಂದವರನ್ನು ಕುಳ್ಳಿರಿಸಿ ಅಧಿಕಾರಿ ಮತ್ತು ಸಿಬ್ಬಂದಿಯೇ ಅಹವಾಲುಗಳನ್ನು ಬರೆದು, ಬಳಿಕ ಅದನ್ನು ಓದಿಹೇಳಿ ಅರ್ಜಿದಾರರಿಂದ ಸಹಿ ಪಡೆದು ದಾಖಲಿಸಿಕೊಳ್ಳುವ ಪ್ರಯತ್ನಗಳೂ ನಡೆದಿವೆ. 

ರಾಜ್ಯಾದ್ಯಂತ ಏಕ ಕಾಲಕ್ಕೆ ನಡೆಸಿದ ಜನತಾ ದರ್ಶನ ನಮಗೂ ಮೊದಲ ಅನುಭವ. ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ರೀತಿಯ ಪ್ರತಿಕ್ರಿಯೆ ಸಾರ್ವಜನಿಕರಿಂದ ಸಿಕ್ಕಿದೆ. ಅಧಿಕಾರಿಗಳ‌ ಸ್ಪಂದನೆ ಕೂಡ ಸಮಾಧಾನಕರವಾಗಿದೆ. ಇವತ್ತಿನ ಅನುಭವದ ಹಿನ್ನೆಲೆಯಲ್ಲಿ ಮುಂದಿನ‌ ಜನತಾ ದರ್ಶನದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನ ಮಾಡುತ್ತೇವೆ ಎನ್ನುವ ಅಭಿಪ್ರಾಯಗಳು ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳಿಂದ ವ್ಯಕ್ತವಾಗಿದೆ. 

 

ಇತರೆ ಹೈಲೈಟ್ಸ್:

 

- ಅನಿವಾರ್ಯ ಕಾರಣಗಳಿಂದ ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಇಂದು ಜನತಾ ದರ್ಶನ ನಡೆಯಲಿಲ್ಲ. ಬೆಳಗಾವಿಯಲ್ಲಿ ನಾಳೆ (ಸೆ 26 ರ ಮಂಗಳವಾರ) ನಡೆಯಲಿದೆ. 

 

- ಮೈಸೂರು ಜಿಲ್ಲೆಯ ಜನತಾ ದರ್ಶನದಲ್ಲಿನ ಕುಂದುಕೊರತೆ ಮನವಿಗಳನ್ನು IPGRS ನಲ್ಲಿ upload ಮಾಡುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಎಲ್ಲಾ ಅರ್ಜಿಗಳನ್ನು Manually ಸ್ವೀಕರಿಸಲಾಗಿದ್ದು ಬಳಿಕ upload ಮಾಡಲಿದ್ದಾರೆ. 

 

- ಹಾವೇರಿ ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರದ ಸಂಬಂಧ ಸಾವಿರಾರು ಅರ್ಜಿಗಳು ಬಂದಿವೆ. ಸ್ವೀಕರಿಸುವ ವೇಳೆ ಕೆಲವು ಅನಾನುಕೂಲಗಳು ಸಂಭವಿಸಿದ್ದರಿಂದ ಅವುಗಳನ್ನೂ upload ಮಾಡಲು ಸಾಧ್ಯವಾಗಿಲ್ಲ.

 

ಬೆಂಗಳೂರು, ಸೆಪ್ಟೆಂಬರ್ 24, 2023:

ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಇಡಿ ರಾಜ್ಯದಾದ್ಯಂತ ಏಕ ಕಾಲಕ್ಕೆ “ಜನತಾ ದರ್ಶನ”:

ರಾಜ್ಯದ ಇತಿಹಾದಲ್ಲೇ ಮೊದಲ ಬಾರಿಗೆ ಇಡಿ ರಾಜ್ಯದಾದ್ಯಂತ ಏಕ ಕಾಲಕ್ಕೆ “ಜನತಾ ದರ್ಶನ”ಕ್ಕೆ ನಾಡು ನಾಳೆ ಸಾಕ್ಷಿಯಾಗಲಿದೆ.

ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಡೆಯಲಿರುವ ಈ ಅರ್ಥಪೂರ್ಣ ಕಾರ್ಯಕ್ರಮದ ಹೊಣೆಗಾರಿಕೆ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯ್ತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಮೇಲಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳ ಸಮ್ಮುಖದಲ್ಲೇ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಮತ್ತು ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಕಾಳಜಿ ಈ ಜನತಾ ದರ್ಶನದ ಹಿಂದಿದೆ.

ಮುಖ್ಯಮಂತ್ರಿಗಳ ಸೂಚನೆ ಏನು?

ಆಡಳಿತಕ್ಕೆ ಚುರುಕು ಮುಟ್ಟಿಸಿ, ಸರ್ಕಾರಿ ಯಂತ್ರಾಂಗವನ್ನು ಕ್ರಿಯಾಶೀಲಗೊಳಿಸುವ ಪ್ರಯತ್ನವಾಗಿ ನಡೆಸಿದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಪಂಚಾಯ್ತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹತ್ತು ದಿನಗಳ ಹಿಂದೆ ಒಂದು ಸೂಚನೆ ನೀಡಿದ್ದರು. 

"ಜಾತಿ ಪ್ರಮಾಣಪತ್ರ, ಖಾತೆ ಬದಲಾವಣೆ, ಟ್ರಾನ್ಸ್ ಫಾರ್ಮರ್ ರಿಪೇರಿ, ವಿದ್ಯುತ್ ಕಂಬ ಅಳವಡಿಕೆಯಂತಹ ಸಣ್ಣ ಪುಟ್ಟ ಕೆಲಸಗಳಿಗೂ ಜನ ನನ್ನ ಬಳಿಗೆ ಬರುತ್ತಿದ್ದಾರೆ. ನಾನು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಜನರು ಇಷ್ಟು ಸಣ್ಣ ಪುಟ್ಟ ಕೆಲಸಗಳಿಗೂ ನನ್ನನ್ನು ಹುಡುಕಿಕೊಂಡು ಬರುವಂತಾಗಿದೆ ಎಂದರೆ ನೀವುಗಳಿದ್ದೂ ಏನು ಪ್ರಯೋಜನ ಎಂದು ಸಭೆಯಲ್ಲಿ ಪ್ರಶ್ನಿಸಿದ್ದರು. ಬಳಿಕ ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲೂ ಜನತಾ ದರ್ಶನ ನಡೆಸಬೇಕು ಎನ್ನುವ ಸೂಚನೆಯನ್ನೂ ನೀಡಿದ್ದರು. 

ಈ ಸೂಚನೆಯ ಫಲವೇ ಸೆ.25ರ ನಾಳೆ ರಾಜ್ಯದಾದ್ಯಂತ ಏಕ ಕಾಲಕ್ಕೆ ನಡೆಯಲಿರುವ “ಜನತಾ ದರ್ಶನ” ಕಾರ್ಯಕ್ರಮ. ಇದು ನಿಗದಿತವಾಗಿ ನಡೆಯಲಿದೆ.

ಸ್ವರೂಪ ಏನು?

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಜನತಾ ದರ್ಶನ ನಡೆಸುತ್ತಾರೆ. ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿರುತ್ತಾರೆ. ಇವರೆಲ್ಲರ ನಡುವೆ ಸಮನ್ವಯ ಸಾಧಿಸಿ ಜನತಾ ದರ್ಶನ ಅರ್ಥಪೂರ್ಣವಾಗಿ ಮತ್ತು ಫಲಪ್ರದವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿ ನೇಮಕಗೊಂಡಿರುವ ಹಿರಿಯ ಐಎಎಸ್ ಅಧಿಕಾರಿಗಳ ಮೇಲೆ ಇರುತ್ತದೆ. 

ಪ್ರತಿ ಜಿಲ್ಲೆಯಲ್ಲೂ ಜನತಾ ದರ್ಶನ ನಡೆಯುವ, ನಡೆಸುವ ಬಗ್ಗೆ ಸಾರ್ವಜನಿಕರಿಗೆ ಈಗಾಗಲೇ ತಿಳಿವಳಿಕೆ ನೀಡಲಾಗಿದೆ. ನಿಗದಿತ ಸ್ಥಳದಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಜನತಾ ದರ್ಶನ ಆರಂಭವಾಗಬೇಕು ಎನ್ನುವ ಸೂಚನೆ ಸರ್ಕಾರದ ಕಡೆಯಿಂದ ಹೋಗಿದೆ. ಇಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು. ಈ ಅಹವಾಲುಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಒದಗಿಸುವುದು ಪ್ರಥಮ ಆಧ್ಯತೆಯಾಗಿರುತ್ತದೆ. ತಾಂತ್ರಿಕ ಕಾರಣಗಳಿಂದ ಇದು ಸಾಧ್ಯವಾಗದಿದ್ದರೆ ಸಾರ್ವಜನಿಕರ ಅಹವಾಲುಗಳು ಸ್ಥಳದಲ್ಲೇ ದಾಖಲಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ವರ್ಗಾವಣೆಗೊಳ್ಳುತ್ತವೆ. ಎಲ್ಲದಕ್ಕೂ ಕಾಲ ಮಿತಿಯಲ್ಲಿ ಪರಿಹಾರ ಒದಗಿಸುವ ಮತ್ತು ಸಾರ್ವಜನಿಕರು ನೀಡಿದ ಅಹವಾಲಿನ ಸ್ಥಿತಿಗತಿಯನ್ನು ಅರ್ಜಿದಾರರಿಗೆ ಮನವರಿಕೆ ಮಾಡಿಸುವ ಜವಾಬ್ದಾರಿ ಕೂಡ ಜಿಲ್ಲಾಡಳಿತದ ಮೇಲೆ ಇರುತ್ತದೆ.

ಸಾರ್ವಜನಿಕರ ಅಹವಾಲು ಎಲ್ಲಿ ದಾಖಲಾಗುತ್ತವೆ? 

ಜನತಾ ದರ್ಶನದಲ್ಲಿ ಸಲ್ಲಿಕೆಯಾಗುವ ಸಾರ್ವಜನಿಕರ ಅಹವಾಲುಗಳು ಈಗಾಗಲೇ ಚಾಲ್ತಿಯಲ್ಲಿರುವ “ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (ಐಪಿಜಿಆರ್‌ಎಸ್-ಇಂಟೆಗ್ರೇಟೆಡ್ ಪಬ್ಲಿಕ್ ಗ್ರಿವಿಯೆನ್ಸ್ ರಿಡ್ರೆಸಲ್ ಸಿಸ್ಟಂ) ತಂತ್ರಾಂಶದಲ್ಲಿ ದಾಖಲಾಗುತ್ತದೆ ಮತ್ತು ಇಲ್ಲಿಂದಲೇ ಸಂಬಂಧಪಟ್ಟ ಇಲಾಖೆಯ ಟೇಬಲ್ಲಿಗೆ ಅರ್ಜಿಗಳ ವಿಲೇವಾರಿಯೂ ನಡೆಯುತ್ತದೆ. ಬಳಿಕ ಕಾಳಜಿ ವಹಿಸಿ ಕಾಲಮಿತಿಯಲ್ಲಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎನ್ನುವ ಸೂಚನೆ ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ರವಾನೆಯಾಗಿದೆ. 

ತಾಲ್ಲೂಕು ಮಟ್ಟದ ಜನತಾ ದರ್ಶನ:

ನಾಳೆ ಇಡಿ ರಾಜ್ಯಾದ್ಯಂತ ಜಿಲ್ಲಾ ಮಟ್ಟದ ಜನತಾ ದರ್ಶನ ಸಭೆ ನಡೆದ ಬೆನ್ನಲ್ಲೇ ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಜಿಲ್ಲಾಧಿಕಾರಿಗಳು ಒಂದು ತಾಲ್ಲೂಕನ್ನು ಆರಿಸಿಕೊಂಡು ತಾಲ್ಲೂಕು ಮಟ್ಟದ ಜನತಾ ದರ್ಶನ ಸಭೆ ನಡೆಸಬೇಕು ಎನ್ನುವ ಆದೇಶವನ್ನೂ ಈಗಾಗಲೇ ಮುಖ್ಯಮಂತ್ರಿಗಳ ಸೂಚನೆಯಂತೆ, ಅಪರ ಮುಖ್ಯ ಕಾರ್ಯದರ್ಶಿ ಆಗಿರುವ ರಜನೀಶ್ ಗೋಯಲ್ ಅವರು ಹೊರಡಿಸಿದ್ದಾರೆ. 

ಪರಿಣಾಮ:

ಸಾರ್ವಜನಿಕರು ಪದೇ ಪದೇ ಸಣ್ಣ ಪುಟ್ಟ ಕೆಲಸಗಳಿಗೂ ಸರ್ಕಾರಿ ಕಚೇರಿಗಳಿಗೆ, ಶಾಸಕರ, ಜಿಲ್ಲಾ ಮಂತ್ರಿಗಳ, ಮುಖ್ಯಮಂತ್ರಿಗಳ ಬಳಿಗೆ ಅಲೆಯುವುದು ತಪ್ಪುತ್ತದೆ. ಅರ್ಜಿದಾರರ ದೂರು ಸತ್ಯವಾಗಿದ್ದು, ಯಾವುದೇ ದುರುದ್ದೇಶದಿಂದ ಕೂಡಿರದಿದ್ದರೆ ಅಂತಹ ಅರ್ಜಿಗಳಿಗೆ ಸೂಕ್ತ ಪರಿಹಾರ ಒದಗಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಯನ್ನು ಇದಕ್ಕೆ ಹೊಣೆಗಾರರನ್ನಾಗಿಸಿ ಸರ್ಕಾರ ಕ್ರಮ ಜರುಗಿಸಲಿದೆ. 

ಹೀಗೆ...ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಇಡಿ ರಾಜ್ಯದಾದ್ಯಂತ ಏಕ ಕಾಲಕ್ಕೆ ಒಂದೇ ದಿನ ಜನತಾ ದರ್ಶನ ದಾಖಲಾಗುತ್ತಿದೆ.

**********

 

 

×
ABOUT DULT ORGANISATIONAL STRUCTURE PROJECTS