×
Social Darvinism ಅನ್ನು ಸಂವಿಧಾನ ತಿರಸ್ಕರಿಸಿದೆ. ನಾವೂ ಸ್ಪಷ್ಟವಾಗಿ ತಿರಸ್ಕರಿಸಬೇಕು: ಮುಖ್ಯಮಂತ್ರಿ

 

ಬೆಂಗಳೂರು, ಸೆಪ್ಟೆಂಬರ್ 15, 2023:

Social darvinism ಗೆ ನಾವು ಅವಕಾಶ ಕೊಡಬಾರದು. ಬಲಾಢ್ಯರು ಮಾತ್ರ ಉಳಿಯಬೇಕು ಎನ್ನುವ ಡಾರ್ವಿನ್ ಸಿದ್ಧಾಂತಕ್ಕೆ ನಾವು ವಿರುದ್ಧ. ಎಲ್ಲರಿಗೂ ನ್ಯಾಯ ಸಿಗುವಂತಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. 

ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ನಡೆದ ಮೊದಲ ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಈ ಸೂಚನೆ ನೀಡಿದರು. 

ಬಲಾಢ್ಯರು ಮಾತ್ರ ಬದುಕಬೇಕು, ಶಕ್ತಿ ಇದ್ದವರಿಗೆ ಮಾತ್ರ ನ್ಯಾಯ ಸಿಗಬೇಕು ಎನ್ನುವ ಡಾರ್ವಿನ್‌ ಸಿದ್ಧಾಂತದ ಮನಸ್ಥಿತಿಗೆ ಪೊಲೀಸ್ ಇಲಾಖೆಯಲ್ಲಿ ಅವಕಾಶ ಇರದಂತೆ ನೋಡಿಕೊಳ್ಳುವ ಜವಾಬ್ದಾರಿ ಇಲಾಖೆಯ ಮೇಲಿದೆ ಎಂದರು.

 

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಾ ರಾಜ್ಯಗಳ, ಎಲ್ಲಾ ದೇಶಗಳ ಜನ ನೆಲೆಸಿದ್ದಾರೆ. ಅವರೆಲ್ಲರೂ ನೆಮ್ಮದಿಯಿಂದ, ಖುಷಿಯಿಂದ ಇರಬೇಕು ಎಂದು ಸೂಚಿಸಿದರು. 

ದೂರು ಬಂದರೆ ಮಾತ್ರ FIR ದಾಖಲಿಸಬೇಕು ಎನ್ನುವ ಮನಸ್ಥಿತಿ ಬಿಟ್ಟುಬಿಡಿ. ಸ್ವಯಂ ಪ್ರೇರಿತ FIR ದಾಖಲಿಸಿಕೊಂಡು ತನಿಖೆ ನಡೆಸಿದರೆ ಪೊಲೀಸ್ ವ್ಯವಸ್ಥೆಗೆ ಘನತೆ ಬರುತ್ತದೆ. ಅಪರಾಧ ಜಗತ್ತಿಗೆ ಭಯವೂ ಮೂಡುತ್ತದೆ ಎಂದರು. 

ಸಮಾಜಘಾತುಕ ಶಕ್ತಿಗಳ ಜತೆ ಸ್ನೇಹ ಇಟ್ಟುಕೊಂಡಿರುವ ಅಧಿಕಾರಿಗಳನ್ನೂ ನಾನು ಗಮನಿಸಿದ್ದೇನೆ. ಹೀಗಾದಾಗ ಜನ ಸಾಮಾನ್ಯರಿಗೆ ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆ ಬರಲು ಹೇಗೆ ಸಾಧ್ಯ? ಬೇಲಿಯೇ ಎದ್ದು ಹೊಲ ಮೇಯ್ದರೆ ಸಮಾಜದ ರಕ್ಷಣೆ ಹೇಗೆ ಸಾಧ್ಯ ಎಂದು ಜನ ಸಾಮಾನ್ಯರು ಪ್ರಶ್ನಿಸುತ್ತಾರೆ. 

ಚಾಳಿಬಿದ್ದ ರೌಡಿಗಳನ್ನು ಗಡಿಪಾರು ಮಾಡುವುದು ಹೆಚ್ಚು ಕ್ರಿಯಾಶೀಲವಾಗಿ ನಡೆಯಬೇಕು. ಅವರಿಗೆ ಸಲೀಸಾಗಿ ಜಾಮೀನು ಸಿಗುವಂಥಾಗಬಾರದು.

 

ದೂರುದಾರರಿಗೆ ಧೈರ್ಯ ನೀಡುವ ಕೆಲಸ ಪೊಲೀಸ್ ಠಾಣೆಗಳಲ್ಲಿ ಆಗಬೇಕು. ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತಿರಬೇಕು. 

ಗೃಹ ಸಚಿವ ಜಿ.ಪರಮೇಶ್ವರ್, ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಮತ್ತು ನಸೀರ್ ಅಹಮದ್ ಅವರು ಉಪಸ್ಥಿತರಿದ್ದರು. 

ಸಿಎಂ ಮಾತಿನ ಇತರೆ ಹೈಲೈಟ್ಸ್:

 

- ಪೊಲೀಸ್ ಪಡೆ ಹೆಚ್ಚಿಸುವುದೇ ದೊಡ್ಡ ಸಾಧನೆ ಅಲ್ಲ. ಜನರಿಗೆ ಎಷ್ಟು ಸುರಕ್ಷತೆ, ಭದ್ರತೆ, ನ್ಯಾಯ ಸಿಕ್ಕಿದೆ ಎನ್ನುವುದು ಮುಖ್ಯ.

 

- ಇಡಿ ಸರ್ವೀಸ್ ನಲ್ಲಿ ಠಾಣೆಗಳಿಗೆ ಭೇಟಿಯನ್ನೇ ನೀಡದ ಹಿರಿಯ ಅಧಿಕಾರಿಗಳಿದ್ದಾರೆ. ಇದು shame ಅಲ್ಲವೇ? 

 

- ಜನ ಬದಲಾವಣೆ ನಿರೀಕ್ಷಿಸಿ ನಮ್ಮನ್ನು ಅಧಿಕಾರಕ್ಕೆ ಬಂದಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಪೊಲೀಸ್ ಇಲಾಖೆ ವರ್ತಿಸಬೇಕು. ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳು ಬಂದ್ ಆಗಬೇಕು. 

 

- SP, DG, IG ಗಳು ಹಾಗೂ ಪೊಲೀಸ್ ಆಯುಕ್ತರು ಮನಸ್ಸು ಪಟ್ಟರೆ ಯಾವುದೇ ಸಂಘಟಿತ ಕಾನೂನು ಬಾಹಿರ ಕೃತ್ಯಗಳು ನಡೆಯಲು ಸಾಧ್ಯವಿಲ್ಲ. 

 

- ಡಿಸಿಪಿ, ಎಸ್.ಪಿ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದೆ ಎಂದರೆ ನೀವುಗಳಿದ್ದೂ ಏನು ಪ್ರಯೋಜನ ಹೇಳಿ. 

 

- ಸೈಬರ್ ಅಪರಾಧಗಳ ತಡೆ ಸವಾಲಿನದ್ದಾಗಿದ್ದು ತಂತ್ರಜ್ಞಾನ ಬಳಕೆ ಮತ್ತು ಕೌಶಲ್ಯವನ್ನು ವಿಶೇಷ ತರಬೇತಿಗಳ ಬಳಿಕ ಅಧಿಕಾರಿಗಳು ಹೆಚ್ಚಿಸಿಕೊಳ್ಳಬೇಕು. 

 

- ಮಹಾತ್ಮಗಾಂಧಿ ಕನಸಿನಂತೆ ಹೆಣ್ಣು ಮಕ್ಕಳು ಮಧ್ಯರಾತ್ರಿಯಲ್ಲೂ ನಿರಾಂತಕವಾಗಿ ಓಡಾಡುವ ರೀತಿಯ ಸಮಾಜ ನಿರ್ಮಿಸೋಣ.

 

ಡಿಸಿಪಿ-ಎಸ್ ಪಿ ಗಳನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳುತ್ತೇವೆ:

ಆಯಾ ಠಾಣಾ ವ್ಯಾಪ್ತಿಗಳಲ್ಲಿ ಅಕ್ರಮ ಚಟುವಟಿಕೆಗಳು, ಕಾನೂನು ಬಾಹಿರ ಸಂಘಟಿತ ಅಪರಾಧಗಳು ನಡೆಯುತ್ತಿದ್ದರೆ ಡಿಸಿಪಿ, ಎಸ್ ಪಿ ಮಟ್ಟದ ಅಧಿಕಾರಿಗಳನ್ನೂ ಹೊಣೆ ಮಾಡಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. 

ನಮ್ಮ ಸರ್ಕಾರ ಕೇವಲ‌ಕೆಳ ಹಂತದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ಕೈ ತೊಳೆದುಕೊಳ್ಳುವುದಿಲ್ಲ, ಹಿರಿಯ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. 

ಸುಳ್ಳು ಸುದ್ದಿ, ವದಂತಿಗಳ ಮೂಲಕ ಸಮಾಜದ ಶಾಂತಿ ಕದಡುವವರ ವಿರುದ್ಧ ಸ್ವಯಂಪ್ರೇರಿತ ಎಫ್ ಐ ಆರ್ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು. ಸೂಕ್ಷ್ಮ ಪ್ರಕರಣಗಳಲ್ಲಿ ದೂರು ಕೊಡುವವರು ಬರಲಿ ಎಂದು ಕಾಯುತ್ತಾ ಕೂರಬಾರದು ಎನ್ನುವ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು. 

ಸಿಸಿಬಿ ಯನ್ನು  ಇನ್ನಷ್ಟು ಸದೃಢಗೊಳಿಸಲು 230 ಸಿಬ್ಬಂದಿಯನ್ನು ಹೊಸದಾಗಿ ನೇಮಿಸಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. ಸಿಬ್ಬಂದಿಗೆ ಅಗತ್ಯವಾದರೆ ಹೊಸ ಕಟ್ಟಡಗಳನ್ನು ಒದಗಿಸಲಾಗುವುದು ಎಂದರು. 

ಹಿರಿಯ ಅಧಿಕಾರಿಗಳು ಜನ ಸಂಪರ್ಕಕ್ಕೆ ಸಿಗದೇ ಹೋದರೆ , ಜನ ಸ್ನೇಹಿ ಆಗದೇ ಹೋದರೆ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 

ಅನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಸರ್ಕಾರ zero tolarence ವಹಿಸಲಿದೆ ಎಂದು ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸಿದರು. 

ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಪೊಲೀಸ್ ಅಧಿಕಾರಿಗಳಿಗೆ ನೀಡಿದ ಸೂಚನೆಗಳ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. 

ಗೃಹ ಸಚಿವರಾದ ಜಿ.ಪರಮೇಶ್ವರ್, ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತರಾದ ದಯಾನಂದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಗೋಷ್ಠಿಯಲ್ಲಿದ್ದರು. 

 

ಗೋಷ್ಠಿಯ ಮುಖ್ಯಾಂಶಗಳು:

 

- ಠಾಣಾಧಿಕಾರಿಗಳ ಗಮನಕ್ಕೆ ಬರದಂತೆ ಯಾವ ಅಪರಾಧಗಳೂ, ಕರಾಳ ದಂಧೆಗಳೂ ನಡೆಯಲು ಸಾಧ್ಯವಿಲ್ಲ. 

 

- ಹಿರಿಯ ಅಧಿಕಾರಿಗಳು ಠಾಣೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುವುದು ಕಡ್ಡಾಯ. 

 

- ಪೊಲೀಸರು ದರ್ಪ ಬಿಟ್ಟು ಜನಸ್ನೇಹಿಯಾಗಿ ಕೆಲಸ ಮಾಡಬೇಕು. 

 

- ಠಾಣೆಗೆ ಬರುವ ಬಡವರು, ಜನಸಾಮಾನ್ಯರಿಗೆ ಪೊಲೀಸ್ ವ್ಯವಸ್ಥೆ ಬಗ್ಗೆ ಭರವಸೆ ಹುಟ್ಟುವ ರೀತಿಯಲ್ಲಿ ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಿ.

**********

 

×
ABOUT DULT ORGANISATIONAL STRUCTURE PROJECTS