×
ಗಂಗಾ ಕಲ್ಯಾಣ- ಬಾಕಿ ಅರ್ಜಿಗಳನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ: ಮುಖ್ಯಮಂತ್ರಿ ಖಡಕ್ ಸೂಚನೆ

 

(ವಿಧಾನಸೌಧ, ಬೆಂಗಳೂರು), ಸೆಪ್ಟೆಂಬರ್ 23, 2023:

ಗಂಗಾ ಕಲ್ಯಾಣ ಕೊಳವೆ ಬಾವಿ ವಿದ್ಯುದೀಕರಣಕ್ಕೆ 1948 ಅರ್ಜಿಗಳು ಬಾಕಿ ಉಳಿದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಇದನ್ನು ಇನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ ಎಂದು ಸ್ಪಷ್ಟ ಸೂಚನೆ ನೀಡಿದರು. 

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಂದುವರೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.                     

ಎಸ್ಕಾಂಗಳು ವಿದ್ಯುಚ್ಛಕ್ತಿ ಸಂಪರ್ಕ ಒದಗಿಸುವುದಕ್ಕೆ ಅನಗತ್ಯ ವಿಳಂಬ ಮಾಡಕೂಡದು. ಶುಲ್ಕ ಪಾವತಿಸಿಲ್ಲ ಎಂದು ಬಾಕಿ ಉಳಿಸಿಕೊಳ್ಳಬಾರದು. ಇದಕ್ಕೆ ಟ್ರಾನ್ಸ್‌ಫಾರ್ಮರ್‌ ಗಳು ಇಲ್ಲ, ಕಂಬಗಳಿಲ್ಲ ಎಂಬ ನೆಪಗಳನ್ನು ಹೇಳಬಾರದು ಎಂದು ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜೆಸ್ಕಾಂ ಮತ್ತು ಹೆಸ್ಕಾಂ ಗಳಲ್ಲಿ ಬಾಕಿ ಅರ್ಜಿಗಳ ಸಂಖ್ಯೆ ಹೆಚ್ಚಿರುವುದನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು ಅಭಿಯಾನ ಕೈಗೆತ್ತಿಕೊಂಡು ವಿದ್ಯುದೀಕರಣ ಕೈಗೊಳ್ಳಲು ಸೂಚಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ ವೆಲ್‌ ಕೊರೆಯುವುದು ಹಾಗೂ ವಿದ್ಯುದೀಕರಣದಲ್ಲಿ ಅನಗತ್ಯವಾಗಿ ವಿಳಂಬ ಮಾಡಬಾರದು. ಈ ವಿಳಂಬ ನೀತಿ ಅಪರಾಧ ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.

 

DC ಮತ್ತು CEO ಗಳ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಪಟ್ಟಂತೆ ಸಿಎಂ ನೀಡಿದ ಸೂಚನೆಗಳು:

- ನಗರ ಸ್ಥಳೀಯ ಸಂಸ್ಥೆಗಳ 1200 ವಾರ್ಡುಗಳಲ್ಲಿ ಮೂರು ದಿನಕ್ಕಿಂತ ಹೆಚ್ಚು ಅವಧಿಯಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಎಲ್ಲ ಜಿಲ್ಲೆಗಳಿಗೆ 27 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಗತ್ಯವಿರುವೆಡೆ ಬೋರ್‌ವೆಲ್‌ಗಳನ್ನು ಕೊರೆಯಲು, ದುರಸ್ತಿ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

 

- ಚರಂಡಿ ನೀರಿನ ಪೈಪ್ ಲೈನ್,  ಕುಡಿಯುವ ನೀರಿನ ಪೈಪ್ ಲೈನ್ ನೊಂದಿಗೆ  ಸೇರುವ  ಕಡೆಗಳಲ್ಲಿ ಪೈಪ್ ಲೈನ್ ಸ್ಥಳಾಂತರ ಗೊಳ್ಳಬೇಕು. ಕಾಂಕ್ರೀಟ್ ರಸ್ತೆಗಳನ್ನು ಹಾಕುವ ಸಂದರ್ಭದಲ್ಲಿ ಯುಜಿಡಿ ಲೈನ್ ಹಾಗೂ ನೀರಿನ ಲೈನ್ ಗಳನ್ನು ಹಾಕುವ ಮುನ್ನ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕೆಂದು.  

 

- ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ಸಂಗ್ರಹಣೆಯ ಬೆಳವಣಿಗೆಯಲ್ಲಿ ಇಳಿಕೆಯಾಗಿದೆ. ಕೆಲವು ಜಿಲ್ಲೆಯಲ್ಲಿ ಬೆಳವಣಿಗೆಯ ಪ್ರಮಾಣ ಶೇ5 ಕ್ಕಿಂತ ಕಡಿಮೆ ಇದೆ.  ಇದನ್ನು ಸುಧಾರಿಸಲು  ಕ್ರಮ ವಹಿಸಬೇಕು.  

 

- ಆಸ್ತಿ ಮತ್ತು ವಾಣಿಜ್ಯ ಮುಗ್ಗಟ್ಟುಗಳ ತೆರಿಯನ್ನು ಯಾರೂ ಉಳಿಸಿಕೊಳ್ಳುವುದಿಲ್ಲ. ಕಟ್ಟದಿದ್ದವರಿಗೆ  ನೋಟೀಸು ಕೊಟ್ಟು ಕಟ್ಟಲು ಕಾಲಮಿತಿ ನಿಗದಿ ಮಾಡಿಬೇಕು. ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಆಯುಕ್ತರಿಗೆ ತೆರಿಗೆ ವಸೂಲು ಮಾಡುವಂತೆ ಸೂಚಿಸಿ ಪತ್ರ ಬರೆಯಲು ಮುಖ್ಯಮಂತ್ರಿಗಳು ಸೂಚಿಸಿದರು.

 

ಸ್ಮಶಾನ ಮತ್ತು ಖಬರಸ್ಥಾನಗಳಿಗೆ 3 ತಿಂಗಳೊಳಗೆ ಜಾಗ ಒದಗಿಸಿ: ಡಿಸಿ ಮತ್ತು ಸಿಇಒ ಗಳಿಗೆ ಮುಖ್ಯಮಂತ್ರಿ ಸ್ಪಷ್ಟ ಸೂಚನೆ:

ರಾಜ್ಯದಲ್ಲಿರುವ ಸ್ಮಶಾನ ಮತ್ತು‌ ಖಬರ್ ಸ್ಥಾನಗಳಿಗೆ ಮೂರು ತಿಂಗಳಲ್ಲಿ ಜಾಗ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು. 

ರಾಜ್ಯದಲ್ಲಿ ಯಾವುದೇ ಧರ್ಮ ಮತ್ತು ಜಾತಿಯವರು ಸ್ಮಶಾನ ಅಥವಾ ಖಬರ್ ಸ್ಥಾನಗಳಿಗೆ ಜಾಗ ಒದಗಿಸುವಂತೆ ಕೋರಿದ್ದರೆ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಸರ್ಕಾರಿ ಜಾಗವನ್ನು ಒದಗಿಸಿ ಕೊಡಬೇಕು. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದರೆ ಖಾಸಗಿಯವರಿಂದ ಜಾಗ ಖರೀದಿಸಿ ಸಾರ್ವಜನಿಕ‌ ಸ್ಮಶಾನ ಮತ್ತು‌ ಖಬರ್ ಸ್ಥಾನಗಳಿಗೆ ಒದಗಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.‌

ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ:

ಅಲ್ಪಸಂಖ್ಯಾತರ ವಸತಿ ಶಾಲೆಗಳ ಉನ್ನತೀಕರಣ ಹಾಗೂ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ/ ಕಾಲೇಜು ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಿಗೆ 65 ಕಡೆಗಳಲ್ಲಿ ನಿವೇಶನ ಒದಗಿಸಲು ಹಾಗೂ ನಾಲ್ಕು ಕಡೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿಗಳು ಸೂಚಿಸಿದರು.

ವಕ್ಫ್‌ ಆಸ್ತಿ ಸಂರಕ್ಷಣೆಗೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇರುವ 400 ಒತ್ತುವರಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ ಒತ್ತುವರಿ ತೆರವು ಗೊಳಿಸಲು ಸೂಚಿಸಿದರು.

ವಸತಿ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಅವರು ನೀಡಿದ ಸೂಚನೆಗಳು:

- 2940 ಕೋಟಿ ಹಂಚಿಕೆ ಮಾಡಲಾಗಿದೆ.  ರಾಜೀವ್‌ ಗಾಂಧಿ ವಸತಿ ನಿಗಮದ ಖಾತೆಯಲ್ಲಿ 1900 ಕೋಟಿಗೂ ಹೆಚ್ಚು ಅನುದಾನ ಲಭ್ಯವಿದ್ದು, ಆರ್ಥಿಕ ಪ್ರಗತಿ ಸಾಧಿಸಲು ಸಿಇಓಗಳಿಗೆ ಸೂಚಿಸಲಾಯಿತು. 

 

- ಈ ವರ್ಷ 3.11 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದ್ದು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಗುರಿ ಸಾಧಿಸಲು ಸೂಚಿಸಲಾಯಿತು.

 

- ಗಣಿಗಾರಿಕೆ ಪುನಶ್ಚೇತನ ನಿಗಮದಿಂದ ವಸತಿ ಯೋಜನೆಗಳಿಗೆ 1493 ಕೋಟಿ ರೂ. ಅನುದಾನ ಲಭ್ಯವಿದ್ದು, ಗಣಿ ಬಾಧಿತ ಪ್ರದೇಶಗಳಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜಾಗ ಗುರುತಿಸಲು ಸೂಚಿಸಲಾಯಿತು. 

 

- ಕೊಳೆಗೇರಿ ನಿರ್ಮೂಲನ ಮಂಡಳಿ ವತಿಯಿಂದ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಮನೆಗಳನ್ನು ನಿರ್ಮಿಸಲು ಜಾಗ ಗುರುತಿಸಲು ಸೂಚಿಸಲಾಯಿತು.

 

ಉನ್ನತ ಶಿಕ್ಷಣ ಇಲಾಖೆ:

 

- ರಾಜ್ಯದ 21 ಪದವಿ ಕಾಲೇಜುಗಳಿಗೆ ಜಮೀನು ಒದಗಿಸಲು ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು. 

 

- ಗ್ರಾಮೀಣ ಪ್ರದೇಶದಲ್ಲಿ ಜಾಗ ಒದಗಿಸಬಹುದು. ನಗರ ಪ್ರದೇಶದಲ್ಲಿ ನಿಗದಿತ ಮಾನದಂಡಗಳಂತೆ ಜಾಗ ಒದಗಿಸುವುದು ಕಷ್ಟವಾಗುತ್ತದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಇತರ ಇಲಾಖೆಗಳ ವ್ಯಾಪ್ತಿಯಲ್ಲಿ ನಿರುಪಯುಕ್ತವಾಗಿ ಖಾಲಿ ಜಾಗ ಲಭ್ಯವಿದ್ದಲ್ಲಿ, ಅದನ್ನು ಕಾಲೇಜು ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

 

DC ಮತ್ತು CEO ಗಳ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಕೊಟ್ಟ ಸೂಚನೆ:

- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಕಿ ಅಂಶಗಳಲ್ಲಿ ಹಲವು ಜಿಲ್ಲೆಗಳಲ್ಲಿ ಲಿಂಗಾನುಪಾತ ಕಡಿಮೆಯಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಪ್ರತಿ ಮೂರು ತಿಂಗಳಿಗೊಮ್ಮೆ ಪಿಸಿ& ಪಿಎನ್‌ಡಿಟಿ ಕಾಯ್ದೆಯನ್ವಯ ಸ್ಕ್ಯಾನಿಂಗ್‌ ಕೇಂದ್ರಗಳ ತಪಾಸಣೆ ನಡೆಸಲು ಸೂಚಿಸಿದರು. 

 

- ಗರ್ಭವತಿ ಮಹಿಳೆಯರ ದತ್ತಾಂಶದ ಮೇಲೆ ಜಿಲ್ಲಾಧಿಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದು ಸೂಚಿಸಿದರು.

 

- 2015 ರಲ್ಲಿ ಉತ್ತಮ ಸೂಚ್ಯಂಕ ಹೊಂದಿದ್ದ ಕೆಲವು ಜಿಲ್ಲೆಗಳು 2022 ರಲ್ಲಿ ಕುಸಿತ ಕಂಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೆಣ್ಣುಮಕ್ಕಳು ಹಾಗೂ ಮಹಿಳೆಯರಲ್ಲಿ ಅನೀಮಿಯಾ ಮತ್ತು ಅಪೌಷ್ಟಿಕತೆಯ ಕುರಿತು ಹೆಚ್ಚಿನ ನಿಗಾ ವಹಿಸಬೇಕು. ಆಸ್ಪತ್ರೆಗಳಲ್ಲಿಯೇ ಹೆರಿಗೆಯಾಗುವುದನ್ನು ಖಾತರಿಪಡಿಸಬೇಕು ಎಂದು ಸೂಚಿಸಿದರು.

 

- ತಾಯಿ ಮರಣ ತಪಾಸಣೆಯನ್ನು (Death Audit) ಜಿಲ್ಲಾಧಿಕಾರಿಗಳು ನಿಯಮಿತವಾಗಿ ನಡೆಸಬೇಕು. ಲಸಿಕೆ ಕಾರ್ಯಕ್ರಮಗಳಲ್ಲಿಯೂ ಸಾಧನೆ ಉತ್ತಮ ಪಡಿಸಬೇಕೆಂದು ತಿಳಿಸಿದರು.

 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:

ಹಿಂದುಳಿದ ವರ್ಗಗಳ ಹಾಸ್ಟೆಲುಗಳಿಗೆ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಂದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸೂಚಿಸಲಾಯಿತು.

- 2443 ಹಾಸ್ಟೆಲುಗಳಲ್ಲಿ ಕೇವಲ 981 ಹಾಸ್ಟೆಲುಗಳಿಗೆ ಮಾತ್ರ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಉಳಿದ 1462 ಹಾಸ್ಟೆಲುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.

 

- ಪ್ರತಿ ತಿಂಗಳು ಹಾಸ್ಟೆಲುಗಳಿಗೆ ದಿಢೀರ್‌ ಭೇಟಿ ಮಾಡಬೇಕು. ಇದರಿಂದ ಹಾಸ್ಟೆಲುಗಳ ಕುಂದುಕೊರತೆ, ಆಹಾರದ ಗುಣಮಟ್ಟ ಮತ್ತಿತರ ಸಮಸ್ಯೆಗಳು ಅರಿವಿಗೆ ಬರುತ್ತವೆ. 

 

- ನಗರ ಸ್ಥಳೀಯ ಸಂಸ್ಥೆಗಳು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಹೀಟ್‌ ಪಂಪ್‌ಗಳನ್ನು ಒದಗಿಸಲು ಸೂಚಿಸಿದರು.ʼ

 

- ಹಾಸ್ಟೆಲುಗಳ ತ್ಯಾಜ್ಯ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಹಾಸ್ಟೆಲುಗಳ ಕಟ್ಟಡ ನಿರ್ಮಾಣಕ್ಕಾಗಿ 120 ನಿವೇಶನಗಳನ್ನು ಒದಗಿಸಲು ಕೂಡಲೇ ಕ್ರಮ ವಹಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ಹಾಸ್ಟೆಲುಗಳಿಗೆ ತಡೆಗೋಡೆ ಆವರಣ ನಿರ್ಮಿಸಲು ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಯಿತು. 

 

 ಸತತ 8 ಗಂಟೆಗಳ DC ಮತ್ತು CEO ಗಳ ಸಭೆಯ ಕೊನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಿದ ಮಾತುಗಳು ಹೀಗಿವೆ:

 

- ಮೂರು ತಿಂಗಳ ನಂತರ ಮತ್ತೆ ಸಭೆ ಕರೆಯುತ್ತೇವೆ. ಅಷ್ಟರಲ್ಲಿ ಈ ಎರಡು ದಿನಗಳ ಕಾಲ ಇಲ್ಲಿ ಕೈಗೊಂಡ ನಿರ್ಣಯಗಳು ಹಾಗೂ ಚರ್ಚೆಗಳ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ಮುಂದಿನ ಸಭೆಯಲ್ಲಿ ಪರಿಶೀಲಿನೆ ಮಾಡಲಾಗುವುದು. 

 

- ಅಧಿಕಾರಿಗಳು ನೀಡಿರುವ ಸಲಹೆಗಳನ್ನು, ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. 

 

- ಜಿಲ್ಲಾಧಿಕಾರಿಗಳು, ಸಿ.ಇ.ಓ. ಗಳು ಮನಸು ಮಾಡಿದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಆಡಳಿತಾತ್ಮಕವಾಗಿ ರಾಜ್ಯದ ಚಿತ್ರಣವನ್ನೇ ಬದಲಿಸಲು ಸಾಧ್ಯ. 

 

- ಜಿಲ್ಲಾಧಿಕಾರಿಗಳು ಜಿಲ್ಲೆಯ ಆಡಳಿತದ ಮುಖ್ಯಸ್ಥರು. ಸಿ.ಇ.ಓ ಗಳು ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಬಹಳ ಪರಿಣಾಮಕಾರಿ ಬದಲಾವಣೆ ಮಾಡಲು ಸಾಧ್ಯವಿದೆ. 

 

- ಐದು ಗ್ಯಾರಂಟಿ ಯೋಜನೆಗಳಿಗೆ ಈ ವರ್ಷ 32 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರೊಂದಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆ ಸೇರಿದರೆ ಒಬ್ಬರಿಗೆ 80 ಸಾವಿರ ರೂ. ನೀಡಲಾಗುತ್ತಿದೆ. 

 

- ಅನ್ನಭಾಗ್ಯ ಯೋಜನೆಯಡಿ ಹಣ ನೀಡಲಾಗುತ್ತಿದೆ. ಆಗಸ್ಟ್‌ ತಿಂಗಳಲ್ಲಿ 600 ಕೋಟಿಗೂ ಹೆಚ್ಚು ಹಣ ನೀಡಲಾಗಿದೆ. 

 

- ಗೃಹ ಲಕ್ಷ್ಮಿ ಯೋಜನೆಯಡಿ 1.26 ಕೋಟಿ ಕುಟುಂಬಗಳಿಗೆ 2,000 ರೂ. ನೀಡಲಾಗುತ್ತಿದೆ. ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ತುಂಬಲು ಈ ಯೋಜನೆಗಳ ಜಾರಿ ಮಾಡಲಾಗುತ್ತಿದೆ. 

 

- ಜನರ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಆರ್ಥಿಕ ಚಟುವಟಿಕೆ ಹೆಚ್ಚಾಗುತ್ತದೆ. ವಾರ್ಷಿಕ ವರಮಾನ ಹೆಚ್ಚಾಗುತ್ತದೆ ಅಂತೆಯೇ ಜಿಡಿಪಿ ಬೆಳವಣಿಗೆಯಾಗುತ್ತದೆ. ಸರ್ಕಾರ ಇಷ್ಟೆಲ್ಲ ಹಣ ವೆಚ್ಚ ಮಾಡುವಾಗ ಜನರ ಆರ್ಥಿಕ ಸಾಮಾಜಿಕ ಪರಿಸ್ಥಿತಿ ಸುಧಾರಣೆಯಾಗಲೇ ಬೇಕು. 

 

- ಗ್ರಾಮೀಣ ಪ್ರದೇಶದಲ್ಲಿ, ಜನಜೀವನದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಗಮನ ಕೊಡಬೇಕು. ಈ ಐದು ಗ್ಯಾರಂಟಿಗಳು ಮತ್ತು ಬೇರೆ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕಾಗಿದೆ. ಇವುಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ.

  

- ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಶ್ರಮಿಸಬೇಕು. ಜನರು ಯಾಕೆ ತಹಸೀಲ್ದಾರರ ಕಚೇರಿಗೆ ಅಲೆಯುತ್ತಾರೆ. ಅಲ್ಲಿ ಸುಧಾರಣೆ ಮಾಡದಿದ್ದರೆ ಜನರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗದು. 

 

- ಭ್ರಷ್ಟಾಚಾರ ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇದರಿಂದ ಸಮಾಜದಲ್ಲಿ ಬದಲಾವಣೆಯನ್ನೂ ಮಾಡಬಹುದು, ಜನರ ಋಣ ತೀರಿಸಿದಂತೆಯೂ ಆಗುತ್ತದೆ. ಇಷ್ಟು ಹಣ ಖರ್ಚು ಮಾಡಿಯೂ ಸಮಾಜದಲ್ಲಿ ಬದಲಾವಣೆಯಾಗದಿದ್ದರೆ ಹೇಗೆ ? 

 

- ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿ ಮೇಲೆ ನಿಂತಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಹೀಗಾಗಿ ಸಾಮಾಜಿಕ  ಕಾರ್ಯಕ್ರಮಗಳು ನಿಮ್ಮ ಜಿಲ್ಲೆಗಳಲ್ಲಿ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿ, ಸಿಇಓಗಳು ಮತ್ತು ಎಸ್‌.ಪಿ. ಗಳು ಹೊಂದಾಣಿಕೆಯಿಂದ ಕೆಲಸ ಮಾಡಿದರೆ, ಬದಲಾವಣೆ ಮಾಡುವ ಪ್ರಯತ್ನ ಮಾಡಿದರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ. 

ಇದಕ್ಕೆ ನಿಮ್ಮ ಸಹಕಾರ ಹಾಗೂ ಚಿಂತನೆ ಇರಲಿ ಎಂದು ಆಶಿಸುತ್ತೇನೆ.

**********

 

 

 

 

×
ABOUT DULT ORGANISATIONAL STRUCTURE PROJECTS