×
ಜಿಲ್ಲಾಧಿಕಾರಿಗಳು-ಸಿ ಇ ಒ ಗಳು- ತಹಶೀಲ್ದಾರರು ಜನ ಸಂಪರ್ಕ ಸಭೆ ನಡೆಸಿ ಜನರಿಗೆ ಸ್ಪಂದಿಸಿ: ಮುಖ್ಯಮಂತ್ರಿ ಖಡಕ್ ಸೂಚನೆ

 

(ವಿಧಾನಸೌಧ, ಬೆಂಗಳೂರು), ಸೆಪ್ಟೆಂಬರ್ 12, 2023:

ತಾಲ್ಲೂಕು ಮಟ್ಟದಲ್ಲಿ ಸಚಿವರು, ಶಾಸಕರನ್ನು ಆಹ್ವಾನಿಸಿ, ಜನ ಸಂಪರ್ಕ ಸಭೆಗಳನ್ನು ವಾರಕ್ಕೊಮ್ಮೆ  ನಡೆಸಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. 

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ನಾಡಿನ ಜನತೆ ಸಣ್ಣ ಪುಟ್ಟ ಸಮಸ್ಯೆಗಳಿಗೂ ನನ್ನ ಬಳಿಗೆ ಬರುತ್ತಾರೆ ಎಂದರೆ ನೀವುಗಳು ಇದ್ದು ಏನು ಪ್ರಯೋಜನ ಎಂದು ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದರು. 

ಮುಖ್ಯಮಂತ್ರಿಯಾದ ಬಳಿಕ ನಾನು ಹಲವಾರು ಜಿಲ್ಲೆಗಳಿಗೆ ಭೇಟಿ ನೀಡಿದ್ದೆ. ಆ ವೇಳೆ ಜನ ಸಾಮಾನ್ಯರು ನೂರಾರು ರೀತಿಯ ಮನವಿಗಳನ್ನು ನನಗೆ ನೀಡುತ್ತಿದ್ದಾರೆ. ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಬಗೆಹರಿಸಬೇಕಾದ ಸಮಸ್ಯೆಗಳನ್ನು ಹೊತ್ತುಕೊಂಡು ಜನ ನನ್ನ ಬಳಿ ಬರುತ್ತಿದ್ದಾರೆ. ನೀವು ಸ್ಥಳೀಯವಾಗಿ ಜನ ಸಂಪರ್ಕ ಸಭೆ ನಡೆಸಿ ಸ್ಪಂದಿಸಿ ಸ್ಥಳದಲ್ಲೇ ಪರಿಹಾರ ಕೊಟ್ಟಿದ್ದರೆ ಹೀಗೆ ಆಗುತ್ತಿರಲಿಲ್ಲ. ಕೆಲವೊಂದು ಸಮಸ್ಯೆಗಳಿಗೆ ವಾರದ ಕಾಲ ಮಿತಿಯಲ್ಲಿ ಪರಿಹಾರ ಒದಗಿಸಿ ಕೊಡಿ. ಕೆಲಸ ಆಗಿದೆಯಾ , ಇಲ್ಲವಾ ಎನ್ನುವುದನ್ನು ಮರು ಪರೀಕ್ಷಿಸಿ. ಆಗ ಸ್ಥಳೀಯ ಸಮಸ್ಯೆಗಳಿಗಾಗಿ ಜನತೆ ಬಸ್ ಚಾರ್ಜ್ ಖರ್ಚು ಮಾಡಿಕೊಂಡು ನನ್ನ ತನಕ ಬರುವ ಅಗತ್ಯವೇ ಬೀಳುವುದಿಲ್ಲ ಎಂದು ತಿಳಿಸಿದರು. 

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವ ಸಂಪುಟದ ಇತರ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

 

ಮುಖ್ಯಮಂತ್ರಿಗಳ ಆರಂಭಿಕ ಮಾತುಗಳು:

 

- ಕೇವಲ ಬದಲಾವಣೆಗಾಗಿ ನಾಡಿನ ಜನತೆ ಸರ್ಕಾರವನ್ನು ಬದಲಾಯಿಸಿಲ್ಲ. ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡು ಹಿಂದಿನ ಸರ್ಕಾರವನ್ನು ಬದಲಾಯಿಸಿ ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ. 

 

- ಅಭಿವೃದ್ಧಿಯ ಆಶೋತ್ತರಗಳನ್ನು ಇಟ್ಟುಕೊಂಡ ಜನರ ನಿರೀಕ್ಷೆಗಳಿಗೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡಬೇಕು. 

 

- ಶಾಸಕರು, ಮಂತ್ರಿಗಳು, ಅಧಿಕಾರಿಗಳು ಜನ ಸೇವಕರು. ಈ ಸಾಮಾನ್ಯ ತಿಳಿವಳಿಕೆ ಪ್ರತಿಯೊಬ್ಬರಲ್ಲೂ ಇರಬೇಕು. ನಾವ್ಯಾರು ರಾಜರುಗಳಲ್ಲ.

 

ನ್ಯಾಯ ವಿಳಂಬ ಸರ್ಕಾರ ಸುತಾರಾಂ ಸಹಿಸಲ್ಲ- ಕಠಿಣ ಕ್ರಮ ಕಾದಿದೆ:  

ತಹಸೀಲ್ದಾರ್‌, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬರುವ ಅರ್ಜಿಗಳು 5 ವರ್ಷಕ್ಕೂ ಹೆಚ್ಚು ಅವಧಿಗೆ ಬಾಕಿ ಉಳಿದಿರುವುದನ್ನು ಗಮನಿಸಲಾಗಿದೆ. 5 ವರ್ಷವಾದರೂ ಪ್ರಕರಣ ಇತ್ಯರ್ಥಪಡಿಸದೆ ಇದ್ದರೆ, ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅರ್ಥ. 

Justice delayed is justice denied – ವಿಳಂಬ ಜಾಸ್ತಿಯಾದಷ್ಟು ಭ್ರಷ್ಟಾಚಾರಕ್ಕೆ ಅವಕಾಶವಾಗುತ್ತದೆ. ವಿಳಂಬವೂ ಭ್ರಷ್ಟಾಚಾರವೇ. 

ತಹಸೀಲ್ದಾರರು ಒಂದು ಅರ್ಜಿಯನ್ನು ಸ್ವೀಕರಿಸಿದರೆ, ಮೂರು ತಿಂಗಳಲ್ಲಿ ಇತ್ಯರ್ಥವಾಗಬೇಕು. ಉಪವಿಭಾಗಾಧಿಕಾರಿಗಳ ಬಳಿ ಬರುವ ಮನವಿಗಳ ಇತ್ಯರ್ಥಕ್ಕೆ ಬಹಳ ವಿಳಂಬ ಮಾಡ್ತಾರೆ. ಇದನ್ನು ಕನಿಷ್ಠ ಆರು ತಿಂಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳು ಒಂದು ವರ್ಷದಲ್ಲಿ ಇತ್ಯರ್ಥ ಮಾಡಬೇಕು.

ಜಿಲ್ಲಾಧಿಕಾರಿಗಳು ಅನಗತ್ಯವಾಗಿ ಪ್ರಕರಣ ಮುಂದೂಡುವುದು, ಕಕ್ಷಿದಾರರನ್ನು ಕಾಯಿಸುವುದು, ವಾದ-ವಿವಾದಗಳನ್ನು ಆಲಿಸಿದ ನಂತರ ತೀರ್ಪು ಬರೆಯಲು ವಿಳಂಬ ಮಾಡುವುದು ತರವಲ್ಲ. 

ಪ್ರಕರಣ ಇತ್ಯರ್ಥಗೊಳಿಸಲು ವಿಳಂಬ ಮಾಡಿದರೆ ನಮ್ಮ ಸರ್ಕಾರ ಸಹಿಸಲ್ಲ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

 

 

 

ಅಧಿಕಾರಿಗಳು Work from Home ಮಾಡಬಾರದು, Not Reachable ಆಗಬಾರದು:  

 

ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಅಧಿಕಾರಿಗಳು ಮನೆಯಿಂದ ಕೆಲಸ ಮಾಡಬಾರದು. ಕಚೇರಿಯಲ್ಲೇ ಕುಳಿತು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. 

ಅಧಿಕಾರಿಗಳು ಕೇಂದ್ರಸ್ಥಾನದಲ್ಲಿಯೇ ವಾಸವಿದ್ದು, ಜನರ ಸೇವೆಗೆ ಲಭ್ಯರಿರಬೇಕು. ಅಧಿಕಾರಿಗಳು ಕಚೇರಿಯಲ್ಲಿರಬೇಕು, ಇಲ್ಲ ಪ್ರವಾಸದಲ್ಲಿರಬೇಕು. ಮನೆಯಲ್ಲಿ ಕುಳಿತು ಕೆಲಸ ಮಾಡಬಾರದು. Work from home ಗೆ ಅವಕಾಶವಿಲ್ಲ.  ಇದರಿಂದ ಜನರಿಗೆ ತೊಂದರೆಯಾಗುವುದನ್ನು ಸರ್ಕಾರ ಸಹಿಸುವುದಿಲ್ಲ. 

ಹಾಗೆಯೇ ಅಧಿಕಾರಿಗಳು ದೂರವಾಣಿ ಕರೆಗೆ ಸಿಗುವುದಿಲ್ಲ ಎಂಬ ದೂರುಗಳೂ ಸಾರ್ವಜನಿಕರು, ಶಾಸಕರು ಮತ್ತು ಮಂತ್ರಿಗಳಿಂದ ಇವೆ. ಇದು ಒಳ್ಳೆಯದಲ್ಲ. ಮುಖ್ಯಮಂತ್ರಿ ಕಚೇರಿಯಿಂದ ಇರಲಿ, ಸಚಿವರಿರಲಿ, ಶಾಸಕರಿರಲಿ, ಜನಸಾಮಾನ್ಯರಿರಲಿ, ಅವರ ಕರೆಗಳಿಗೆ ಸ್ಪಂದಿಸಬೇಕು. ಯಾವುದೇ ಪಕ್ಷದ ಶಾಸಕರುಗಳಿರಲಿ ಪ್ರೋಟೋಕಾಲ್ ಚಾಚೂ ತಪ್ಪದೆ ಪಾಲಿಸಬೇಕು ಎನ್ನುವ ಸೂಚನೆ ನೀಡಿದರು. 

ಅಧಿಕಾರಿಗಳಿಗೆ ಹೃದಯ ಸರಿಯಾಗಿ ಕೆಲಸ ಮಾಡಬೇಕು. ಮನುಷ್ಯತ್ವ ಇಲ್ಲದವರು ಸಾರ್ವಜನಿಕ ಸೇವೆಗೆ ಬರಬಾರದು. ನಿಮ್ಮ ನಿರ್ಲಕ್ಷ್ಯ ಮತ್ತು ಉಡಾಫೆತನದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದರೆ ನಾವು ಸುಮ್ಮನೆ ಕೈರುವುದಿಲ್ಲ ಎಂದು ಎಚ್ಚರಿಸಿದರು. 

ಖಾಸಗಿ ಲೇವಾದೇವಿದಾರರು-ಬ್ಯಾಂಕ್ ಗಳಿಂದ ರೈತರಿಗೆ ಕಿರುಕುಳ ಸಹಿಸಲ್ಲ:

ರಾಜ್ಯದಲ್ಲಿ 251  ರೈತರ ಆತ್ಮಹತ್ಯೆ ಪ್ರಕರಣ ವರದಿಯಾಗಿದ್ದು, 174 ಪ್ರಕರಣಗಳಷ್ಟೇ ಇತ್ಯರ್ಥವಾಗಿದೆ. ಉಳಿದ ಪ್ರಕರಣಗಳನ್ನೂ ಶೀಘ್ರವೇ ವಿಲೇವಾರಿ ಮಾಡಿ, ಪರಿಹಾರ ವಿತರಿಸಬೇಕು. ಇದರಲ್ಲಿ ವಿಳಂಬ ಸರಿಯಲ್ಲ.

ಬರ ಘೋಷಣೆಯಾದ ನಂತರ ಖಾಸಗಿ ಲೇವಾದೇವಿದಾರರ ಮೇಲೆ ನಿಗಾ ಇಡಬೇಕು. ಬ್ಯಾಂಕುಗಳು ರೈತರಿಗೆ ಕಿರುಕುಳ ಕೊಡದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. 

ಅಧಿಕಾರಿಗಳಿಗೆ ಸೌಲಭ್ಯ ನೀಡುವುದು, ಜನರ ಸಮಸ್ಯೆಗೆ ಸ್ಪಂದಿಸಿ ಉತ್ತಮವಾಗಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ. 

ನೀವು ಚೆನ್ನಾಗಿ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ. ಕೆಲಸ ಮಾಡದಿದ್ದರೆ ಕೆಟ್ಟ ಹೆಸರು ಬರುತ್ತದೆ. ಅದಕ್ಕೋಸ್ಕರ ನಿಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದರು. 

ಆರೋಗ್ಯ ಇಲಾಖೆಯಲ್ಲಿ ವೈದ್ಯರು ಲಭ್ಯವಿರುವುದಿಲ್ಲ. ಅರೆ ವೈದ್ಯಕೀಯ ಸಿಬ್ಬಂದಿಯೇ ವೈದ್ಯರ ಪಾತ್ರ ನಿರ್ವಹಿಸುವುದು, ಔಷಧ ಪ್ರಿಸ್ಕ್ರಿಪ್ಷನ್‌ ಬರೆಯುವುದು ಇವೆಲ್ಲ ಆಗಬಾರದು. ವೈದ್ಯರು ತಮ್ಮ ಕೇಂದ್ರ ಸ್ಥಾನದಲ್ಲಿಯೇ ಇದ್ದುಕೊಂಡು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎನ್ನುವ ಸೂಚನೆ ನೀಡಿದರು. 

 

ಸಿಎಂ ನೀಡಿದ ಇತರೆ ಸೂಚನೆಗಳು:  

 

- ಸ್ಮಶಾನಗಳಿಗೆ ಮತ್ತು ಖಬರ್‌ಸ್ತಾನ್‌ಗಳಿಗೆ ಕೂಡಲೇ ಜಾಗ ಒದಗಿಸಬೇಕು.

 

- ಶಾಲಾ ಕಟ್ಟಡ, ಅಂಗನವಾಡಿ, ಆರೋಗ್ಯ ಕೇಂದ್ರ ಸ್ಮಶಾನಗಳಿಗೆ ಜಾಗ ಕೂಡಲೇ ಗುರುತಿಸಿ ಕೊಡಬೇಕು.

 

- ಸಾರ್ವಜನಿಕರಿಗೆ ಭೇಟಿ ಸಮಯ ನಿಗದಿ ಮಾಡಬೇಕು. ಕೇಂದ್ರ ಕಚೇರಿಯಲ್ಲಿರುವಾಗ ಸಾರ್ವಜನಿಕರಿಗೆ ಸಮಯ ನಿಗದಿ ಮಾಡಬೇಕು. ಆ ಸಮಯದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ, ಕೂಡಲೇ ಪರಿಹಾರ ಒದಗಿಸಬೇಕು. 

 

 - ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಸ್ಟೆಲುಗಳು, ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಜಿಲ್ಲಾಧಿಕಾರಿಗಳು ಅಧೀನ ಕಚೇರಿಗಳಿಗೆ ಭೇಟಿ ನೀಡಬೇಕು.

  

- ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೂರು ಜಿಲ್ಲೆಗಳಲ್ಲಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟಿದ್ದಾರೆ, ಅಸ್ವಸ್ಥರಾಗಿದ್ದಾರೆ. ಚಿತ್ರದುರ್ಗದಲ್ಲಿ ಕಲುಷಿತ ನೀರು ಕುಡಿದು ಆರು ಜನ ಸತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸಬಾರದು.

 

- ಇತ್ತೀಚೆಗೆ ಡೆಂಘಿ ಜ್ವರ ಜಾಸ್ತಿ ಆಗಿದೆ. ವಿಶೇಷವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 4000ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಈ ಸಾಂಕ್ರಾಮಿಕ ತಡೆಗಟ್ಟಲು ಒತ್ತು ನೀಡಬೇಕು. 

 

- ಮತ್ತೆ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಳ್ಳುತ್ತಿದ್ದು, ಕೂಡಲೇ ಲಸಿಕೆ ಹಾಕುವ ಕೆಲಸ ಪ್ರಾರಂಭ ಮಾಡಬೇಕು. ಕಾಲುಬಾಯಿ ಜ್ವರ ರೋಗಕ್ಕೂ ಲಸಿಕೆ ಹಾಕಬೇಕು.

 

- ಗೊಬ್ಬರವನ್ನು ಎಂ.ಆರ್.ಪಿ ದರಕ್ಕಿಂತ ಹೆಚ್ಚು ದರಕ್ಕೆ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಬೇಕು.

 

- ಒಟ್ಟಾರೆಯಾಗಿ ನಿಮ್ಮ ವೈಫಲ್ಯದಿಂದ ಜನರ ನಿರೀಕ್ಷೆ ಹುಸಿಯಾಗಬಾರದು. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವಿರಿ ಎಂಬ ವಿಶ್ವಾಸ ನನಗಿದೆ. 

 

- ಹೊಸ ಸರ್ಕಾರದ ಇಚ್ಛೆ ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಸರ್ಕಾರ ಇದರಲ್ಲಿ ಮುಂದೆ ಇದೆ. 

 

- ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ.ಈಗ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಐದನೇ ಗ್ಯಾರಂಟಿಯನ್ನು ಮುಂದಿನ ವರ್ಷ ಜನವರಿಯಿಂದ ಪ್ರಾರಂಭ ಮಾಡಲು ಉದ್ದೇಶಿಸಿದ್ದೇವೆ.ಗ್ಯಾರಂಟಿ ಯೋಜನೆಗಳಿಗೆ ಹಣದ ತೊಂದರೆ ಇಲ್ಲ. ಇದನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. 

 

- ಅಧಿಕಾರಿಗಳಿಗೆ ಅನಗತ್ಯವಾಗಿ ಶಿಕ್ಷೆ ನೀಡುವುದಿಲ್ಲ. ಆದರೆ ತಪ್ಪು ಮಾಡಿದರೆ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು.

  

- ಗಣೇಶ ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೇ ಕಾಪಾಡಬೇಕು. ಪರಿಸರ ಹಾನಿಯಾಗದಂತೆ ಹಬ್ಬ ಆಚರಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಕೋಮುಶಕ್ತಿಗಳು ಕಾನೂನು ಸುವ್ಯವಸ್ಥೆ ಹಾಳು ಮಾಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು; ಯಾವ ಧರ್ಮದವರಿಗೂ ತೊಂದರೆಯಾಗಬಾರದು.

   

ಗ್ರಾಮ ಲೆಕ್ಕಿಗರು ಪಂಚಾಯ್ತಿಗಳಲ್ಲೇ ಕುಳಿತು ಕಾರ್ಯ ನಿರ್ವಹಿಸಬೇಕು:  

 

ಗ್ರಾಮ ಲೆಕ್ಕಿಗರು ಜನರ ಕೈಗೇ ಸಿಗುತ್ತಿಲ್ಲ. ಅವರು ಎಲ್ಲಿರುತ್ತಾರೆ ಎಂದು ಹುಡುಕಿಕೊಂಡು ಹೋಗುವುದೇ ಜನರಿಗೆ ಒಂದು ತಲೆ ನೋವಾಗಿದೆ. ಆದ್ದರಿಂದ ಗ್ರಾಮ‌ ಲೆಕ್ಕಿಗರು ಗ್ರಾಮ ಪಂಚಾಯ್ತಿಗಳಲ್ಲೇ ಕುಳಿತು ಕೆಲಸ ಮಾಡುವಂತಾಗಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.‌

ಗ್ರಾಮ ಲೆಕ್ಕಿಗರನ್ನು ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವಂತೆ ಮತ್ತು ಅವರಿಗೆ ಗ್ರಾಮ ಪಂಚಾಯ್ತಿಯಲ್ಲೇ ಒಂದು ಕೊಠಡಿ ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. 

 

ಸಿಎಂ ನೀಡಿದ ಉಳಿದ ಸೂಚನೆಗಳು:

 

- ಸರ್ವೇ ಗೆ ಸಂಬಂಧಿಸಿದ ವ್ಯಾಜ್ಯಗಳು ಶೀಘ್ರ ವಿಲೇವಾರಿಗಾಗಿ ಕ್ರಮ.

 

- ಭೂ ಮಾಪಕರಿಂದ ಸರ್ವೇ ಪ್ರಕರಣಗಳು ಬಾಕಿ ಉಳಿಯಬಾರದು. ರೈತರು  ಸರ್ವೇ ವ್ಯಾಜ್ಯಗಳಿಗಾಗಿ ಕಚೇರಿಗೆ ಅಲೆಯುವುದನ್ನು ತಕ್ಷಣದಿಂದ ತಪ್ಪಿಸಿ. 

 

- ಕಂದಾಯ ಇಲಾಖೆಯಲ್ಲಿ  ಕಡತಗಳು ಅನಲೈನ ನಲ್ಲಿ 5-10 ದಿನದೊಳಗೆ ವಿಲೇವಾರಿ ಆಗಬೇಕು.

 

 - ಸರ್ವೇ mismatch ಗಳನ್ನು  ಭೂ ಮಾಪಕರು, ಎಸಿ, ತಹಸೀಲ್ದಾರ್ ಗಳ ಸರ್ವೇ ಮಾಡುವ ಬಗ್ಗೆ ಪಟ್ಟಿ ಮಾಡಿ, ಬಾಕಿ ಇರುವ ಸರ್ವೇ ಕಾರ್ಯವನ್ನು ವಿಲೀವಾರಿ ಮಾಡಬೇಕು. 

 

- ನಿಗದಿತ ಅವಧಿಯೊಳಗೆ  ಜೋಡಿ ಗ್ರಾಮಗಳ ಸರ್ವೇ ಕಾರ್ಯ ಪೂರ್ಣಗೊಳಿಸಬೇಕು. 

 

- ಬೆಂಗಳೂರು ನಗರ ಸುತ್ತುಮುತ್ತ  green belt ಪ್ರದೇಶದಲ್ಲಿ ಅನಧಿಕೃತ ಬಡಾವಣೆಗಳನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕೆ ಸಹಕಾರ ನೀಡುತ್ತಿರುವ ಪಿಡಿಒ, ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಿಗರ ವಿರುದ್ಧ ಕ್ರಮ ಕೈಗೊಳ್ಳಬೇಕು. 

 

- ಅನಧಿಕೃತ ಬಡಾವಣೆಗಳ ನಿರ್ಮಾಣ ವಿಷ ವರ್ತುಲವಿದ್ದಂತೆ. ಜಿಲ್ಲಾಧಿಕಾರಿಗಳು, ಸಿ ಇ ಓ ಗಳು ಈ ವಿಷಯಗಳನ್ನು ಗಂಬೀರವಾಗಿ ಪರಿಗಣಿಸಬೇಕು.

 

- ಜಿಲ್ಲೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಂದಾಯ ಭೂಮಿಯಲ್ಲಿ ಅನಧಿಕೃತ ಬಡಾವಣೆಗಳ ಹಾವಳಿಯನ್ನು ತಡೆಗಟ್ಟಲು ಅಗತ್ಯ ಗಮನ ಹರಿಸಬೇಕು.

 

- ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಂತರ ಜಿಲ್ಲೆಯಲ್ಲಿ ಅನಧಿಕೃತ ಬಡಾವಣೆಗಳ ಹಾವಳಿಗೆ ಅಂತ್ಯ ಹಾಡಬೇಕಿದ್ದು, ಇದರ ತಡೆಗಟ್ಟುವಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಬೇಕು. 

 

- ಕಂದಾಯ ಭೂಮಿಯಲ್ಲಿ ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ ನೀಡಲೆಬಾರದಂದು ಅಧಿಕಾರಿಗಳು ತೀರ್ಮಾನಿಸಬೇಕು. 

 

- ಬೆಂಗಳೂರು ಸುತ್ತಮುತ್ತ ಹಸಿರು ವಲಯದಲ್ಲಿ ಖಾಸಗಿ ವ್ಯಕ್ತಿಗಳು ಬಡಾವಣೆಗಳನ್ನು ಮಾಡಿ, ನಿವೇಶನಗಳನ್ನು ಹಂಚಿಕೆ ಮನೆ ಕಟ್ಟಿಕೊಂಡಿದ್ದಾರೆ. ಇದನ್ನು ಪಿಡಿಓ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳ ಸಹಕಾರ ಇಲ್ಲದ ಮಾಡಲು ಸಾಧ್ಯವಿಲ್ಲ. ಇದು ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸೂಚನೆ ನೀಡಿದರು. 

 

- ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಮುಖ್ಯ. ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಸಂಪೂರ್ಣ ಬೆಂಬಲ ನೀಡುತ್ತೇವೆ. ಅಕ್ರಮ ತಡೆಗಟ್ಟಿ ಎಂದು ಮುಖ್ಯಮಂತ್ರಿ ಸೂಚಿಸಿದರು. 

 

- ಜಿಲ್ಲೆಗಳಲ್ಲಿ ರೆವೆನ್ಯೂ ಬಡಾವಣೆಗಳಿಗೆ ಅವಕಾಶ ನೀಡಬಾರದು. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಅಕ್ರಮ ಬಡಾವಣೆಗಳ ಸಮಸ್ಯೆ ಕುರಿತು ಪ್ರತ್ಯೇಕ ಸಭೆ ನಡೆಸುವ ಅಗತ್ಯವಿದೆ. ಇತರ ಜಿಲ್ಲೆಗಳಲ್ಲಿ ಇದಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿದೆ. ಅಧಿಕಾರಿಗಳು ಗಂಭೀರ ಸ್ವರೂಪದ ತಪ್ಪುಗಳನ್ನೆಸಗಿದಾಗ ಕ್ರಿಮಿನಲ್‌ ಪ್ರಕರಣಗಳನ್ನೇ ದಾಖಲಿಸಲು ಸೂಚಿಸಲಾಯಿತು. 

 

- ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಿದ್ದಾಗ, ಪೋಡಿಮುಕ್ತ ಗ್ರಾಮ ಅಭಿಯಾನ ನಡೆಸಿದ್ದರು. ಅದರ ಸ್ಥಿತಿಗತಿ ಏನು? 30.715 ಗ್ರಾಮಗಳಿವೆ. 175 ವಿಧಾನಸಭಾ ಕ್ಷೇತ್ರಗಳಲ್ಲಿ 16,850 ಗ್ರಾಮಗಳು ಪೋಡಿ ಮುಕ್ತ ಗ್ರಾಮಗಳಾಗಿವೆ. ಉಳಿದೆಡೆ ಕ್ರಮ ಆಗಬೇಕಿದೆ. 14,000 ಗ್ರಾಮಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಈ ಅಭಿಯಾನವನ್ನು ಮತ್ತೆ ಕೈಗೆತ್ತಿಕೊಳ್ಳಲು ಸೂಚಿಸಿದರು.

 

- 3292 ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ರೂಪಿಸುವ ನಿಟ್ಟಿನಲ್ಲಿ 812 ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಲು ಇನ್ನೂ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಈ ಪ್ರಕ್ರಿಯೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಲು ಸೂಚಿಸಿದರು. 

 

ಬರ ಪರಿಸ್ಥಿತಿ:

ಮಳೆ ಮತ್ತು ಇತರ ಬರ ಸೂಚ್ಯಂಕಗಳನ್ನು ಆಧರಿಸಿ, ಆಗಸ್ಟ್‌ 19ರ ವರೆಗೆ ಗುರುತಿಸಿರುವ 53 ತಾಲ್ಲೂಕುಗಳು ಹಾಗೂ ಸೆಪ್ಟೆಂಬರ್‌ 2ರ ವರೆಗಿನ ಬರ ಪರಿಸ್ಥಿತಿ ಕಂಡು ಬಂದಿರುವ 83 ತಾಲ್ಲೂಕುಗಳಲ್ಲಿ ಬೆಳೆಹಾನಿ ಸಮೀಕ್ಷೆಯನ್ನು ಸೆಪ್ಟೆಂಬರ್‌ 11 ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು.

ನಾಳೆ ನಡೆಯಲಿರುವ ಸಚಿವ ಸಂಪುಟ ಉಪ ಸಮಿತಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು.

ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಒಟ್ಟು 521.94 ಕೋಟಿ ರೂ. ಅನುದಾನ ಲಭ್ಯವಿದೆ. 

ಮುಂಗಾರು ಹಂಗಾಮಿನಲ್ಲಿ ಉಂಟಾದ ಮನೆ ಹಾನಿ ಪರಿಹಾರ ಶೇ. 100 ರಷ್ಟು ಪಾವತಿಸಲಾಗಿದ್ದು, ಒಟ್ಟು 37.40 ಕೋಟಿ ರೂ. ಪರಿಹಾರ ವಿತರಿಸಲಾಗಿದೆ.

ನೀರಿನ ಸಮಸ್ಯೆ ಬಂದರೆ 24 ಗಂಟೆಯೊಳಗೆ ಟ್ಯಾಂಕರ್‌ ಮೂಲಕ ಪೂರೈಕೆ ಮಾಡಲು ತಹಸೀಲ್ದಾರರ ಹಂತದಲ್ಲಿಯೇ ಕ್ರಮ ಕೈಗೊಳ್ಳಬೇಕು.

 

ಸಿಎಂ ನೀಡಿದ ಉಳಿದ ಸೂಚನೆಗಳು:

- ಬೆಳೆ ಸಮೀಕ್ಷೆ ಸೆಪ್ಟೆಂಬರ್‌ ಒಳಗೆ ಪೂರ್ಣಗೊಳ್ಳಬೇಕು. ಇದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಮತ್ತೆ ಮತ್ತೆ ಈ ಸಮೀಕ್ಷೆಗೆ ಅವಕಾಶ ನೀಡಲಾಗದು.  ಈ ದತ್ತಾಂಶವನ್ನು ಪರಿಹಾರ ತಂತ್ರಾಂಶದೊಂದಿಗೆ ಸಂಯೋಜನೆಗೊಳಿಸಿ, ರೈತರಿಗೆ ನೇರವಾಗಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು.

 

- ಫ್ರೂಟ್ಸ್‌ ತಂತ್ರಾಂಶದಲ್ಲಿ ಶೇ. ನೂರರಷ್ಟು ರೈತರ ನೋಂದಣಿ ಮಾಡುವಂತೆ ಹಾಗೂ ರೈತರು ತಮ್ಮ ಜಮೀನಿನ ಮಾಹಿತಿಯನ್ನು ನಿಖರವಾಗಿ ದಾಖಲಿಸುವುದು ಅತಿ ಅಗತ್ಯ. ಇನ್‌ಪುಟ್‌ ಸಬ್ಸಿಡಿ ವಿತರಣೆ ಫ್ರೂಟ್ಸ್‌ ತಂತ್ರಾಂಶವನ್ನು ಆಧರಿಸಿ ನೀಡಲಾಗುತ್ತದೆ* 

 

- ಪ್ರಕೃತಿ ವಿಕೋಪ ಪರಿಹಾರದಡಿ ಬಾಕಿ ಇರುವ ಬದ್ಧತಾ ವೆಚ್ಚಗಳನ್ನು ಶೀಘ್ರವೇ ಇತ್ಯರ್ಥ ಪಡಿಸಿ, ಯಾವುದೇ ಹಿಂಬಾಕಿ ಉಳಿಯದಂತೆ ಕ್ರಮ ಕೈಗೊಳ್ಳಿ ಎಂದು ಸ್ಪಷ್ಟ ಸೂಚನೆ ನೀಡಿದರು. 

 

- ಮಳೆಯಿಂದ ಮನೆಗಳು ಹಾನಿಯಾಗಿದ್ದರೆ, ಎ ವರ್ಗದ ಹಾನಿಗೆ ಹಿಂದಿನ ಸರ್ಕಾರ ನೀಡುತ್ತಿದ್ದಷ್ಟೇ ಪರಿಹಾರ ವಿತರಿಸಲು ಸೂಚಿಸಲಾಗಿದೆ. 

 

- ಕಳೆದ ವರ್ಷ ಅನರ್ಹರ ಹೆಸರನ್ನೂ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಈ ಬಾರಿ ಪರಿಹಾರ ವಿತರಿಸಲು ಹಾನಿಯ ಪ್ರಮಾಣವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಇದಕ್ಕೆ ಪ್ರತ್ಯೇಕ ಆಪ್‌ ರೂಪಿಸಲಾಗಿದೆ. 

 

- ಕಳೆದ ವರ್ಷ ಪ್ರವಾಹದಿಂದ ಮನೆ ಕಳೆದುಕೊಂಡವರ ಹೆಸರು ದಾಖಲಿಸಲು ಬಿಟ್ಟು ಹೋದಲ್ಲಿ ಅಂತವರಿಗೆ ವಸತಿ ಯೋಜನೆಗಳಡಿ ಮನೆ ನೀಡುವ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದರು. 

 

- ಬೆಳೆ ಸಮೀಕ್ಷೆಯನ್ನು ಸೆಪ್ಟೆಂಬರ್‌ ಒಳಗೆ ಪೂರ್ಣಗೊಳಿಸಲು ಸೂಚಿಸಲಾಯಿತು. 

 

- ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 491 ಕೋಟಿ ರೂ. ಲಭ್ಯವಿದೆ. ಕುಡಿಯುವ ನೀರಿಗೆ ಯಾವ ಕಾರಣಕ್ಕೂ ತೊಂದರೆ ಆಗಬಾರದು. ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಕುರಿತು ಎಚ್ಚರ ವಹಿಸಬೇಕು. ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕು. 

 

- ಈಗ ಮೇವು ಲಭ್ಯವಿದ್ದರೂ, ಮುಂದಿನ ದಿನಗಳಲ್ಲಿ ಮೇವು ಕೊರತೆ ಆಗದಂತೆ ಮೇವಿನ ಬೀಜ ವಿತರಣೆ ಹಾಗೂ ರೈತರು ಬೆಳೆದ ಮೇವು ಖರೀದಿಸಿ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು. 

 

- ಮೆಕ್ಕೆಜೋಳದ ಮೇವು ಹಾಗೂ ಭತ್ತದ ಹುಲ್ಲು ನಾಶ ಮಾಡದಂತೆ ಎಚ್ಚರ ವಹಿಸಲು ಸೂಚನೆ. 

 

- ಅನಿವಾರ್ಯ ಸಂದರ್ಭಗಳಲ್ಲಿ ಕೊಳವೆಬಾವಿ ಕೊರೆಸುವ ಅನಿವಾರ್ಯತೆ ಉಂಟಾದಾಗ ಟಾಸ್ಕ್‌ಫೋರ್ಸ್‌ ಅಡಿ ಕೊಳವೆಬಾವಿ ಕೊರೆಸಲು ಎಸ್‌.ಡಿ.ಆರ್.ಎಫ್. ಅಡಿ ಅವಕಾಶವಿದೆ. ಆದರೆ ಇದರ ವಿದ್ಯುತ್‌ ಸಂಪರ್ಕಕ್ಕೆ ಮತ್ತು ಪಂಪ್‌ ಸೆಟ್‌ ಅಳವಡಿಸಲು ಅವಕಾಶವಿರದ ಕಾರಣ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ ಅನುದಾನ ಒದಗಿಸಲು ಸೂಚಿಸಲಾಯಿತು. 

 

- ಸಾಧ್ಯವಾದಷ್ಟು ಖಾಸಗಿ ಬೋರ್‌ ವೆಲ್‌ಗಳಿಂದ ನೀರು ಪೂರೈಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

 

- ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕಂಟಿಂಜೆನ್ಸಿ ಪ್ಲಾನ್‌ ಸಿದ್ಧಪಡಿಸಿಟ್ಟುಕೊಳ್ಳಿ. ಕೊಳವೆಬಾವಿ ತೋಡಿಸಲು ಅಂತರ್ಜಲ ಮಟ್ಟ ಉತ್ತಮ ಇರುವ ಕಡೆಗಳಲ್ಲಿ ಅನಿವಾರ್ಯತೆ ಇದ್ದರೆ ಕೊರೆಯಲು ಸೂಚಿಸಿದರು. 

 

- ಮಳೆ ಅಭಾವದಿಂದ ಕುಡಿಯುವ ನೀರಿಗೆ ಸಮಸ್ಯೆ ಇರುವ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿಗಳು 13 ಜಿಲ್ಲೆಗಳ 95 ಗ್ರಾಮ ಪಂಚಾಯಿತಿ ಹಾಗೂ ಎರಡು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದ್ದು, 13 ಹಳ್ಳಿಗಳಲ್ಲಿ ಟ್ಯಾಂಕರ್‌, 143 ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. 

 

- ಬೆಳೆವಿಮೆ ಹಾಗೂ ಇನ್‌ಪುಟ್‌ ಸಬ್ಸಿಡಿ ಎರಡೂ ಪಾವತಿಯಾಗಬೇಕು. ಇನ್‌ಪುಟ್‌ ಸಬ್ಸಿಡಿ ಪಾವತಿ ಸಂದರ್ಭದಲ್ಲಿ ಬೆಳೆವಿಮೆ ಮೊತ್ತ ಕಟಾವು ಆಗದಂತೆ ನೋಡಿಕೊಳ್ಳಲು ಸೂಚಿಸಿದರು. 

 

ನ್ಯಾಯಾಲಯ ಪ್ರಕರಣ ವಿಲೇವಾರಿ:

 

ತಹಸೀಲ್ದಾರ್‌ ನ್ಯಾಯಾಲಯದ ಬಾಕಿ ಪ್ರಕರಣಗಳ ಕುರಿತು ಪರಿಶೀಲಿಸಿ, ಐದು ವರ್ಷಕ್ಕೂ ಹೆಚ್ಚು ಅವಧಿಯ ಪ್ರಕರಣಗಳೂ ಬಾಕಿ ಉಳಿದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು,  ಜಿಲ್ಲಾಧಿಕಾರಿಗಳು ಇದನ್ನು ನಿಯಮಿತವಾಗಿ ಪರಿಶೀಲಿಸಬೇಕು. ಮೂರು ತಿಂಗಳಿಗಿಂತ ಹೆಚ್ಚು ಅವಧಿಗೆ ಉಳಿದಿರಬಾರದು ಎಂದು ಸೂಚಿಸಿದರು.

ಜಿಲ್ಲಾಧಿಕಾರಿಗಳ ಬಳಿ ಸರ್ಕಾರಿ ಜಮೀನಿನ ಪ್ರಮಾಣ ಹಾಗೂ ಒತ್ತುವರಿ ಆಗಿರುವ ಪ್ರಮಾಣದ ಮಾಹಿತಿ ಲಭ್ಯವಿರಬೇಕು. ನಿಮ್ಮ ಬಳಿ ಮಾಹಿತಿಯೇ  ಲಭ್ಯವಿಲ್ಲದಿದ್ದರೆ ಸರ್ಕಾರಿ ಆಸ್ತಿ ಹೇಗೆ ರಕ್ಷಿಸುತ್ತೀರಿ ಎಂದು ಖಾರವಾಗಿ ಪ್ರಶ್ನಿಸಿ ಒತ್ತುವರಿ ತೆರವಿಗೆ ತಕ್ಷಣದಿಂದ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಒತ್ತುವರಿ ಗುರುತಿಸಲು ನೂತನ ಆಪ್‌ ಅಭಿವೃದ್ಧಿ ಪಡಿಸಲಾಗುತ್ತಿದೆ. ತಂತ್ರಜ್ಞಾನ ಬಳಕೆಯೊಂದಿಗೆ ಒತ್ತುವರಿ ಗುರುತಿಸಿ, ತೆರವುಗೊಳಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.  

ನಕಲಿ ಭೂಮಂಜೂರಾತಿ ನೀಡಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 

 

ಜಾತಿ ದೌರ್ಜನ್ಯ ಶಿಕ್ಷೆ ಪ್ರಮಾಣ ಕಡಿಮೆ- ಪ್ರಗತಿ ಪರಿಶೀಲನೆಗೆ ಸೂಚನೆ: 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳ ಶಿಕ್ಷೆ ಪ್ರಮಾಣ ಕೇವಲ ಶೇ3.44 ರಷ್ಟಿದೆ. ಈ ಕುರಿತು ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಮಾಡಬೇಕು. ಜೊತೆಗೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ 15 ಅಂಶಗಳ ಕಾರ್ಯಕ್ರಮವನ್ನೂ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳ ಸಭೆಯಲ್ಲಿಯೂ ಪ್ರಗತಿ ಪರಿಶೀಲಿಸಬೇಕು.

ಬಡವರಿಗೆ ನಿಮ್ಮ ಅನುಕಂಪ ಇರಲಿ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಸೂಚಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವ ಸಂಪುಟದ ಇತರ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

**********

 

 

 

×
ABOUT DULT ORGANISATIONAL STRUCTURE PROJECTS