×
ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ: ಸರ್ವರ ಸಹಕಾರ ಕೋರಿದ ಮುಖ್ಯಮಂತ್ರಿ

 

(ವಿಧಾನಸೌಧ, ಬೆಂಗಳೂರು), ಆಗಸ್ಟ್‌ 23, 2023:

ಮೇಕೆದಾಟು, ಕಾವೇರಿ, ಮಹಾದಾಯಿ, ಕೃಷ್ಣಾ ಸಮಸ್ಯೆಗಳ ಕುರಿತು ಪ್ರಧಾನ ಮಂತ್ರಿಗಳ ಬಳಿ ಸರ್ಕಾರಕ್ಕೆ ಸರ್ವಪಕ್ಷ ನಿಯೋಗ ತೆರಳೋಣ. ಇದಕ್ಕೆ ಎಲ್ಲರ ಸಹಕಾರ ಬಯಸುವುದಾಗಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಇಂದು ಕಾವೇರಿ, ಮೇಕೆದಾಟು ಮತ್ತು ಮಹಾದಾಯಿ ಜಲ ವಿವಾದಗಳ ಕುರಿತಂತೆ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದ ಹಿತ ಕಾಪಾಡಲು ನಾವು ಎಂದಿಗೂ ಬದ್ಧರಾಗಿರುತ್ತೇವೆ. ಐದಾರು ವರ್ಷಗಳಿಗೊಮ್ಮೆ ಮಳೆಯ ಕೊರತೆಯಿಂದಾಗಿ ತಮಿಳು ನಾಡಿಗೆ ಕಾವೇರಿ ನೀರು ಬಿಡಲು ಸಂಕಷ್ಟ ಎದುರಾಗುತ್ತದೆ. ಈ ಕುರಿತು ಸಂಕಷ್ಟ ಹಂಚಿಕೆ ಸೂತ್ರ ನಿರ್ದಿಷ್ಟ ಪಡಿಸಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ವಕೀಲರು ಸಮರ್ಥವಾಗಿ ವಾದ ಮಂಡಿಸಬೇಕು. ಇದಕ್ಕೆ ಸರ್ಕಾರ ಎಲ್ಲ ಅಗತ್ಯ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ಮೇಕೆದಾಟು ಯೋಜನೆ: ತಮಿಳುನಾಡಿಗೆ ಅನುಕೂಲ:

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಸಂಕಷ್ಟ ಹಂಚಿಕೆ ಸೂತ್ರದ ಕುರಿತು ತೀರ್ಮಾನ ಆಗಲೇ ಬೇಕು. ಇಂತಹ ಸಂಕಷ್ಟದ ಸಮಯದಲ್ಲಿ 67 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯದ ಮೇಕೆದಾಟು ಸಮತೋಲನಾ ಜಲಾಶಯ ನಿರ್ಮಿಸಿದರೆ, ಅವರಿಗೆ ನೀರು ಬಿಡಲು ಅನುಕೂಲವಾಗುತ್ತದೆ. ಈ ಯೋಜನೆಗೆ ತಮಿಳುನಾಡು ವಿನಾಕಾರಣ ವಿರೋಧಿಸುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಧಿಕಾರಿಗಳಿಂದ ಸಮರ್ಥ ವಾದ ಮಂಡನೆ:

ಕಾವೇರಿ ವಿವಾದ ಹಳೆಯದು. ಸರ್ವೋಚ್ಛ ನ್ಯಾಯಾಲಯ ನಮಗೆ ತೀರ್ಪು ಕೊಟ್ಟ ನಂತರ 2018 ರಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿದೆ. ಕಾವೇರಿ ನೀರು ನಿಯಂತ್ರಣಾ ಸಮಿತಿ ಸ್ಥಾಪನೆಯಾಗಿದೆ. ಅನೇಕ ಸಭೆಗಳನ್ನು ಮಾಡಿದ್ದಾರೆ. ಕಾವೇರಿ ಪ್ರಾಧಿಕಾರ 22 ಸಭೆ ಹಾಗೂ ನಿಯಂತ್ರಣ ಸಮಿತಿ 84 ಸಭೆ ನಡೆಸಿದೆ. ಈ ಸಮಿತಿಗಳಾದ ಮೇಲೆ, ರಾಜ್ಯದಲ್ಲಿ ಸಂಕಷ್ಟದ ದಿನಗಳು ಎದುರಾಗಿದೆ. ಆಗ ನಾವು ನಿಯಂತ್ರಣ ಸಮಿತಿ, ಪ್ರಾಧಿಕಾರದಲ್ಲಿ ಚರ್ಚಿಸಿ, ಅದರ ತೀರ್ಮಾನದಂತೆ ನಡೆದುಕೊಂಡ ಅನೇಕ ನಿದರ್ಶನಗಳಿವೆ.

ಕಾವೇರಿ ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದಲ್ಲಿ ಕರ್ನಾಟಕವನನು ಪ್ರತಿನಿಧಿಸುವ ಅಧಿಕಾರಿಗಳು ಸಂಕಷ್ಟದ ಬಗ್ಗೆ ಪ್ರತಿಪಾದನೆ ಮಾಡಿದ್ದಾರೆ. ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ವರ್ಷ ಮಳೆ ಕಡಿಮೆ ಆಯಿತು. ಜೂನ್‌ ಹಾಗೂ ಆಗಸ್ಟ್‌ ನಲ್ಲಿ ಮಳೆ ಕೊರತೆಯಾಗಿದೆ. ಇಲ್ಲಿಯ ವರೆಗೆ ನೀರು ಬಿಡಬೇಕಾಗಿದ್ದಿದ್ದು  86.38 ಟಿಎಂಸಿ. ಆದರೆ 20 ನೇ ತಾರೀಖಿನ ವರೆಗೆ ನೀರು ಬಿಟ್ಟಿರುವುದು 24 ಟಿಎಂಸಿ. ಅಂದರೆ ನಾವು ವಿರೋಧ ಮಾಡಿದ್ದೇವೆ; ವಾಸ್ತವವನ್ನು ಪ್ರಾಧಿಕಾರದ ಮುಂದೆ ಬಿಡಿಸಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ.

ಮಳೆ ಕೊರತೆಯಿಂದಾಗಿ ಬೆಳೆಗಳಿಗೆ ನೀರು ಬಿಟ್ಟಿಲ್ಲ; ಕುಡಿಯುವ ನೀರಿಗೆ ನೀರು ಬೇಕಾಗುತ್ತದೆ ಎಂದು ವಿವರಿಸಲಾಗಿದೆ.

ನಾವು ವಾದ ಮಾಡಿದ್ದರಿಂದಲೇ 15,000 ಕ್ಯೂಸೆಕ್ಸ್‌ ನೀರಿನಿಂದ 10,000 ಕ್ಯೂಸೆಕ್ಸ್‌ ನೀರಿಗೆ ಇಳಿಕೆ ಮಾಡಲಾಯಿತು. ಅದನ್ನೂ ಮರು ಪರಿಶೀಲನೆ ಮಾಡುವಂತೆ ಅರ್ಜಿ ಸಲ್ಲಿಸಿದೆವು. 15,000 ಕ್ಯುಸೆಕ್ಸ್‌ ನೀರು ಕೊಡಲಾಗದು ಎಂದು ರಾಜ್ಯದ ಅಧಿಕಾರಿಗಳು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ವಾದ ಮಂಡಿಸುತ್ತಿರುವಾಗಲೇ ತಮಿಳುನಾಡಿದ ಅಧಿಕಾರಿಗಳು ಸಭಾತ್ಯಾಗ ಮಾಡಿದರು. ನಂತರ ಸುಪ್ರೀಂ ಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದಾರೆ. 25ರಂದು ಈ ಪ್ರಕರಣ ವಿಚಾರಣೆಗೆ ಬರಲಿದ್ದು, ಈ ವಿಷಯದಲ್ಲಿ ವಕೀಲರು ಸಮರ್ಥವಾಗಿ ವಾದ ಮಾಡುತ್ತಾರೆ ಎಂದು ವಿಶ್ವಾಸದಿಂದ ನುಡಿದರು.

ರಾಜಕೀಯ ಇಲ್ಲ:

ಕರ್ನಾಟಕದ ನೆಲ, ಜಲ, ಗಡಿ, ಭಾಷೆಗಳ ಬಗ್ಗೆ ಮೊದಲಿನಿಂದಲೂ ಎಲ್ಲ ರಾಜಕೀಯ ಪಕ್ಷಗಳೂ ಒಕ್ಕೊರಲಿನಿಂದ ಮಾತನಾಡಿವೆ. ಈ ವಿಷಯಗಳಲ್ಲಿ ರಾಜಕೀಯ ಮಾಡುವ ಪ್ರಯತ್ನವನ್ನು ಯಾರೂ  ಮಾಡಿಲ್ಲ,ಮಾಡಲೂ ಬಾರದು. ಯಾಕೆಂದರೆ ನಾವೆಲ್ಲರೂ ರಾಜ್ಯದ ಏಳು ಕೋಟಿ ಜನರ ಹಿತ ಕಾಪಾಡಬೇಕಾಗಿದೆ. ನಾವು ಆಡಳಿತ ಪಕ್ಷದವರಾಗಲಿ, ರಾಜ್ಯದ ಹಿತ ಕಾಪಾಡುವುದು ಎಲ್ಲರ ಜವಾಬ್ದಾರಿ.  ಹಾಗಾಗಿಯೇ ರಾಜಕೀಯ ಮಾಡಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಭೆಯ ಪ್ರಾರಂಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನೀರಾವರಿ ವಿಷಯದಲ್ಲಿ ರಾಜ್ಯದ ಹಿತ ರಕ್ಷಣೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿ, ಸರ್ಕಾರದ ಕಾನೂನು ಹೋರಾಟ ಮುಂದುವರೆಯಲಿದ್ದು, ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳ ಮುಖಂಡರ ಸಹಕಾರ ಕೋರಿದರು.

ಕರ್ನಾಟಕ ಮತ್ತು ಕೇರಳದ ಕಾವೇರಿ ಕಣಿವೆಯ ಪ್ರದೇಶದಲ್ಲಿ ನೈಋತ್ಯ ಮಾನ್ಸೂನ್‌ ವೈಫಲ್ಯದಿಂದಾಗಿ 2023-24ರ ಜಲ ವರ್ಷವು ಸಂಕಷ್ಟದ ವರ್ಷವಾಗಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿಯು ತನ್ನ ಸಭೆಯಲ್ಲಿ ಜೂನ್‌ ವರೆಗಿನ ಮಳೆಯ ಕೊರತೆಯನ್ನು ಗಮನಿಸಿದೆ. ಆಗಸ್ಟ್‌ 10 ರಂದು 1,5000 ಕ್ಯೂಸೆಕ್‌ ನೀರು  ಬಿಡಲು ಸೂಚಿಸಿತು. ಇದನ್ನು ರಾಜ್ಯ ಬಲವಾಗಿ ವಿರೋಧಿಸಿದ್ದು, ನೀರಿನ ಪ್ರಮಾಣ 10,000 ಕ್ಯೂಸೆಕ್‌ಗೆ ಇಳಿಕೆ ಮಾಡಿದೆ. ಇದರಿಂದ ಅಸಮಾಧಾನಗೊಂಡ ತಮಿಳುನಾಡು ಸುಪ್ರೀಂ ಕೋರ್ಟಿನಲ್ಲಿ ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದು, ಶುಕ್ರವಾರ ಮೂರು ನ್ಯಾಯಾಧೀಶರ ಪೀಠದ ಮುಂದೆ ವಿಚಾರಣೆಗೆ ಬರಲಿದೆ.

ಸಂಪೂರ್ಣ ಸಹಕಾರ: ಸರ್ವಪಕ್ಷಗಳ ಬೆಂಬಲ:

ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ವೀರಪ್ಪ ಮೊಯಿಲಿ, ಜಗದೀಶ ಶೆಟ್ಟರ, ಹೆಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಸಂಸದರಾದ ಸುಮಲತಾ, ಜಗ್ಗೇಶ, ಡಾ. ಹನುಮಂತಯ್ಯ, ಮುನಿಸ್ವಾಮಿ, ಜಿ.ಎಂ. ಸಿದ್ದೇಶ್ವರ, ಜಿ.ಸಿ. ಚಂದ್ರಶೇಖರ್‌, ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮೊದಲಾದವರು ರಾಜ್ಯದ ಕಾನೂನು ಹೋರಾಟಕ್ಕೆ ಬೆಂಬಲ ಸೂಚಿಸಿದರು. ರೈತರ ಹಿತ ರಕ್ಷಣೆಗೆ ಸರ್ಕಾರದೊಂದಿಗೆ ಇರುವುದಾಗಿ ಬೆಂಬಲ ವ್ಯಕ್ತಪಡಿಸಿದರು. ಹಾಗೂ ಸಂಕಷ್ಟ ಹಂಚಿಕೆ ಸೂತ್ರವನ್ನು ಇನ್ನಷ್ಟು ನಿರ್ದಿಷ್ಟಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. 

ಮಹಾದಾಯಿ ವಿವಾದ:

ಮಹಾದಾಯಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕಳಸಾ ಮತ್ತು ಬಂಡೂರಾ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆಗಳ ತೀರುವಳಿ ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ತೀರುವಳಿ ಪಡೆಯಲೂ ಸಹ ಅರ್ಜಿ ಸಲ್ಲಿಸಲಾಗಿದೆ. ಆದರೆ ಗೋವಾ ಸರ್ಕಾರ ಈ ಕುರಿತು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಈ ಕುರಿತು ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಿದರು. 

ವಕೀಲರ ತಂಡ ಹಿಂದಿನ ಅನುಭವಗಳನ್ನು ಬಳಸಿ ರಾಜ್ಯದ ಹಿತದೃಷ್ಟಿಯಿಂದ ಸಮರ್ಥವಾಗಿ ವಾದ ಮಂಡಿಸುವ ಕುರಿತು ಸಲಹೆ ನೀಡಿದರು.

ಕನ್ನಡ ನಾಡು-ನುಡಿ-ಜಲ-ಭೂಮಿ-ಸಂಸ್ಕೃತಿಯ ಹಿತ ಕಾಪಾಡುವ ವಿಚಾರದಲ್ಲಿ ರಾಜಿಯ ಮಾತೇ ಇಲ್ಲ:

ಕನ್ನಡ ನಾಡು-ನುಡಿ-ಜಲ-ಭೂಮಿ-ಸಂಸ್ಕೃತಿಯ ಹಿತ ಕಾಪಾಡುವ ವಿಚಾರದಲ್ಲಿ ರಾಜಿಯ ಮಾತೇ ಇಲ್ಲ. 7 ಕೋಟಿ ಕನ್ನಡಿಗರ ಹಿತ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸರ್ವ ಪಕ್ಷಗಳೂ ಒಟ್ಟಾಗಿ  ಶ್ರಮಿಸೋಣ. ಹೀಗಾಗಿ ಸರ್ವ ಪಕ್ಷ ನಿಯೋಗಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು. 

ಕಾವೇರಿ ಜಲಾನಯನ ಪ್ರದೇಶದಲ್ಲಿ ನಮ್ಮ ರೈತರ ಹಿತವನ್ನು ಸಂಪೂರ್ಣ ಕಾಪಾಡಿದ್ದೇವೆ. ನಮ್ಮ ಬೆಳೆ ರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. 

ಮುಖ್ಯಮಂತ್ರಿಗಳ ಮಾತಿನ ಹೈಲೈಟ್ಸ್:

 

- ಸರ್ವ ಪಕ್ಷ ನಾಯಕರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. 

 

- ಕಾವೇರಿ ಪ್ರಾಧಿಕಾರ 22 ಸಭೆ, ನಿಯಂತ್ರಣ ಸಮಿತಿಯಲ್ಲಿ 84 ಸಭೆಗಳು ನಡೆದಿವೆ. 

 

- ರಾಜ್ಯವನ್ನು ಪ್ರತಿನಿಧಿಸುವ ಅಧಿಕಾರಿ ಮತ್ತು ವಕೀಲರ ತಂಡ ವಾಸ್ತವ ಸ್ಥಿತಿಯನ್ನು ಸಮರ್ಥವಾಗಿ ಪ್ರಾಧಿಕಾರದ ಮುಂದೆ, ನಿಯಂತ್ರಣ ಸಮಿತಿ ಮುಂದೆ ಮಂಡಿಸಿದ್ದಾರೆ. 

 

- ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದನ್ನು , ವಾಸ್ತವ ಸ್ಥಿತಿಯನ್ನು ಮಂಡಿಸಿದ್ದಾರೆ. 

 

- ಇಲ್ಲಿಯವರೆಗೂ ನಾವು 24 ಟಿಎಂಸಿ ಮಾತ್ರ ಬಿಡುಗಡೆ ಮಾಡಿದ್ದೇವೆ. ನಿಗಧಿ ಮಾಡಿದ್ದಕ್ಕಿಂತ  ಕಡಿಮೆ ನೀರು ಬಿಟ್ಟಿದ್ದೀವಿ. ಮೂರನೇ ಒಂದು ಭಾಗದಷ್ಟು ಮಾತ್ರ ನೀರು ಬಿಟ್ಟಿದ್ದೀವಿ ಅಷ್ಟೆ. 

 

- ನಾವು ಸಮರ್ಥ ವಾದ ಮಂಡಿಸಿದ್ದರಿಂದಲೇ ತಮಿಳುನಾಡಿನ ಬೇಡಿಕೆಗಿಂತ ಕಡಿಮೆ ನೀರು ಬಿಡಲು ಆದೇಶವಾಯಿತು. ಸಮರ್ಥ ವಾದ ಮಂಡಿಸದಿದ್ದರೆ ಆದೇಶದಲ್ಲಿನ ನೀರಿನ ಪ್ರಮಾಣ ಇನ್ನೂ ಹೆಚ್ಚಿರುತ್ತಿತ್ತು. 

 

- ನಾಡಿನ ರೈತರ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ರಾಜಕೀಯವೂ ಇಲ್ಲ. ರಾಜಿಯೂ ಇಲ್ಲ. 

 

- ನಮ್ಮ ಕಾನೂನು ತಂಡಕ್ಕೆ, ತಜ್ಞರ ತಂಡಕ್ಕೆ ಅಗತ್ಯವಾದ ಸಕಲ ನೆರವು ನೀಡುತ್ತಿದ್ದೇವೆ. 

 

- ಸಂಕಷ್ಟ ಹಂಚಿಕೆ ಸೂತ್ರದ ವಿಚಾರದಲ್ಲೂ ನಮ್ಮ ವಕೀಲ ತಂಡದಿಂದ ಸಮರ್ಥ ವಾದ. 

 

- ನಾವು 15 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ವಾದ ಮಂಡಿಸುವಾಗಲೇ‌ ತಮಿಳುನಾಡಿನವರು walk out ಮಾಡಿದರು. ಬಳಿಕ 10 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶವಾಗಿದೆ. ಈಗ 10 ಸಾವಿರ ಕ್ಯೂಸೆಕ್ಸ್ ನೀರನ್ನೂ ಬಿಡಲು ಸಾಧ್ಯವಿಲ್ಲ ಎಂದು ಮತ್ತೆ ಸಮರ್ಥ ವಾದ ಮಂಡಿಸುತ್ತೇವೆ. 

 

- ಮತ್ತೆ ಮಳೆ ಬರುವ ಸೂಚನೆ ಕಾಣುತ್ತಿಲ್ಲ. ಆದ್ದರಿಂದ ಸಂಕಷ್ಟ ಹಂಚಿಕೆ ಸೂತ್ರ ವೈಜ್ಞಾನಿಕವಾಗಿ ಆಗಲೇಬೇಕು. 

 

- ಮೇಕೆದಾಟು ಆದರೆ ಕುಡಿಯುವ ನೀರಿನ ಸಮಸ್ಯೆ ಬಹುತೇಕ ಕಡಿಮೆ ಮಾಡಬಹುದು. 

 

ಸಭೆಯಲ್ಲಿ ಜಲ ಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ, ಜಗದೀಶ ಶೆಟ್ಟರ, ಡಿ.ವಿ. ಸದಾನಂದಗೌಡ, ವೀರಪ್ಪ ಮೊಯಿಲಿ, ಸಚಿವರಾದ ಹೆಚ್‌.ಕೆ. ಪಾಟೀಲ, ಚಲುವರಾಯಸ್ವಾಮಿ, ಡಾ. ಜಿ. ಪರಮೇಶ್ವರ, ಕೆ.ಜೆ. ಜಾರ್ಜ್‌, ಕೃಷ್ಣ ಬೈರೇಗೌಡ, ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಎಲ್ಲ ಪಕ್ಷಗಳ ಶಾಸಕರು ಸಂಸದರು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಹಿರಿಯ ವಕೀಲರಾದ ಮೋಹನ್‌ ಕಾತರಕಿ ಮತ್ತು ಇತರ ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

**********

 

×
ABOUT DULT ORGANISATIONAL STRUCTURE PROJECTS