×
ಗ್ಯಾರಂಟಿ ಯೋಜನೆಗಳಿಗೆ ಆಯವ್ಯಯದಲ್ಲಿ 35410 ಕೋಟಿ ರೂ. ಅಗತ್ಯ - ಆಯವ್ಯಯದಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ಕ್ರಮ: ಮುಖ್ಯಮಂತ್ರಿ

 

(ವಿಧಾನಸೌಧ, ಬೆಂಗಳೂರು), ಜುಲೈ 21, 2023:

ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿರುವ ಗ್ಯಾರಂಟಿ ಯೋಜನೆಗಳ ಕುರಿತು ಜನರು ಸಂತುಷ್ಟರಾಗಿದ್ದಾರೆ. ಇದಕ್ಕಾಗಿ 35410 ಕೋಟಿ ರೂ. ಅಗತ್ಯವಿದ್ದು, ಆಯವ್ಯಯದಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್ತಿನಲ್ಲಿ ತಿಳಿಸಿದರು.

ಅವರು ಇಂದು ವಿಧಾನಪರಿಷತ್ತಿನಲ್ಲಿ ಆಯವ್ಯಯ ಕುರಿತ ಚರ್ಚೆಗೆ ಉತ್ತರಿಸಿ ಮಾತನಾಡಿದರು. 

ಗ್ಯಾರಂಟಿ ಯೋಜನೆಗಳಿಗೆ 13500 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹ ಗುರಿ, 8068 ಕೋಟಿ ರೂ. ಹೆಚ್ಚುವರಿ ಸಾಲ, ಬಂಡವಾಳ ಯೋಜನೆಗಳ ಮರು ಆದ್ಯತೆ ನಿಗದಿ ಮೂಲಕ 6086 ಕೋಟಿ ರೂ. ಹಾಗೂ ರಾಜಸ್ವ ಯೋಜನೆಗಳ ಮರು ಆದ್ಯತೆ ನಿಗದಿ ಪಡಿಸುವ ಮೂಲಕ 7000 ಕೋಟಿ ರೂ. ಸೇರಿದಂತೆ ಒಟ್ಟು 34,654 ಕೋಟಿ ರೂ. ಸಂಪನ್ಮೂಲ ಕ್ರೋಢೀಕರಣ ಮಾಡಲಾಗುವುದು ಎಂದು ತಿಳಿಸಿದರು.

ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಜೇಬಿಗೆ ಹಣ ಹಾಕುವ ಈ ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಸಾರ್ವತ್ರಿಕ ಮೂಲ ಆದಾಯ (Universal Basic Income)  ಕಾರ್ಯಕ್ರಮಗಳಿಂದ ಪ್ರೇರಿತವಾಗಿವೆ. ಶೇ. 90 ರಷ್ಟು ಜನರು ತೆರಿಗೆ ಪಾವತಿ ಮಾಡಿದರೆ, ಶೇ. 1೦ ರಷ್ಟು ಜನರು ತೆರಿಗೆಯ ಸೌಲಭ್ಯಗಳನ್ನು ಅನುಭವಿಸುತ್ತಾರೆ. ಆದರೆ ಸಂಪನ್ಮೂಲಗಳ ಮರುಹಂಚಿಕೆ ನ್ಯಾಯಯುತವಾಗಿ ಆಗಬೇಕೆಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರಾಜ್ಯದ ಆಯವ್ಯಯದ ಗಾತ್ರ 326747 ಕೋಟಿ ರೂ.ಗಳಷ್ಟಿದ್ದು, 2022-23 ರ ಆಯವ್ಯಯ ಗಾತ್ರಕ್ಕಿಂತ ಶೇ. 22 ರಷ್ಟು ಹೆಚ್ಚಳವಾಗಿದೆ. ವಿತ್ತೀಯ ಕೊರತೆ ಶೇ. 2.6 ರಷ್ಟಿದ್ದು, ಸಾಲದ ಪ್ರಮಾಣ ಜಿ.ಎಸ್.ಡಿ.ಪಿ. ಯ ಶೇ. 22 ರಷ್ಟಿದೆ. ಆದ್ದರಿಂದ ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ ವಿತ್ತೀಯ ಶಿಸ್ತನ್ನು ನಿರ್ಧರಿಸುವ ಎರಡು ಮಾನದಂಡಗಳನ್ನು ನಮ್ಮ ಸರ್ಕಾರ ಪಾಲನೆ ಮಾಡಿದೆ. ಈ ಬಾರಿ 15,523 ಕೋಟಿ ರೂ. ಕೊರತೆ ಬಜೆಟ್‌ ಮಂಡಿಸಲಾಗಿದ್ದು, ಗ್ಯಾರಂಟಿ ಯೋಜನೆಗಳ ಕಾರಣದಿಂದ ಕೊರತೆ ಬಜೆಟ್‌ ಮಂಡಿಸಲಾಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ, ಕೊರತೆ ಪ್ರಮಾಣ ಕಡಿಮೆಯಾಗಿದೆ. ಮುಂದಿನ ಬಾರಿ ಉಳಿತಾಯ ಬಜೆಟ್‌ ಮಂಡಿಸಲು ಎಲ್ಲ ಪ್ರಯತ್ನ ಮಾಡಲಾಗುವುದು. ಆದ್ದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟ ಪಡಿಸಿದರು.

ಬಸವಾದಿ ಶರಣರಂತೆ ನುಡಿದಂತೆ ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಜಾರಿಯೊಂದಿಗೆ ಪ್ರಣಾಳಿಕೆಯಲ್ಲಿ ತಿಳಿಸಿದ 76 ಕಾರ್ಯಕ್ರಮಗಳನ್ನು ಆಯವ್ಯಯದಲ್ಲಿ ಘೋಷಣೆ ಮಾಡಲಾಗಿದೆ.

ಶಕ್ತಿ ಯೋಜನೆಯಡಿ ಪ್ರತಿದಿನ ಸರಾಸರಿ 50 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಒಟ್ಟಾರೆ 23 ಕೋಟಿ ಪ್ರಯಾಣಿಕರಿಗೆ ಈ ಸೌಲಭ್ಯ ದೊರೆತಿದೆ. ಈ ಕುರಿತು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.

ಗೃಹ ಜ್ಯೋತಿ ಯೋಜನೆಯಡಿ 1.16 ಕೋಟಿ ಕುಟುಂಬಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಜುಲೈ 1 ರಿಂದಲೇ ಗೃಹ ಬಳಕೆಗೆ 2೦೦ ಯುನಿಟ್‌ ವರೆಗೆ ಉಚಿತ ವಿದ್ಯುತ್‌ ಸೌಲಭ್ಯ ದೊರೆಯಲಿದೆ. 

ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರದ ಅಕ್ಕಿ ರಾಜಕೀಯದಿಂದಾಗಿ ಹೆಚ್ಚುವರಿ ಆಹಾರಧಾನ್ಯ ನೀಡಲು ಸಾಧ್ಯವಾಗಿಲ್ಲ. ಬದಲಿಗೆ ಪ್ರತಿ ಫಲಾನುಭವಿಗೆ ತಲಾ 170 ರೂ. ನಂತೆ 4.42 ಕೋಟಿ ಫಲಾನುಭವಿಗಳಿಗೆ ನಗದು ವರ್ಗಾವಣೆ ಮಾಡಲು ಚಾಲನೆ ನೀಡಲಾಗಿದೆ. ಈ ವರೆಗೆ 57.51 ಕುಟುಂಬಗಳಿಗೆ 337,08 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಗೃಹ ಲಕ್ಷ್ಮಿ ಯೋಜನೆಗೆ ವಾರ್ಷಿಕ 32೦೦೦ ಕೋಟಿ ರೂ. ಅಗತ್ಯವಿದ್ದು, ಪ್ರಸಕ್ತ ಸಾಲಿನಲ್ಲಿ 18000 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು. ಯುವ ನಿಧಿ ಯೋಜನೆಯು ಡಿಸೆಂಬರ್‌ ತಿಂಗಳಿನಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ. ನಿರುದ್ಯೋಗಿ ಯುವಕರ ಕೌಶಲ್ಯಾಭಿವೃದ್ಧಿಗೆ ಕೂಡ ಒತ್ತು ನೀಡಲಾಗುವುದು. ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ ಪ್ರತ್ಯೇಕ ಇಲಾಖೆಯನ್ನು ತಮ್ಮ ಸರ್ಕಾರದ ಹಿಂದಿನ ಅವಧಿಯಲ್ಲೇ ಪ್ರಾರಂಭಿಸಲಾಯಿತು ಎಂಬುದನ್ನು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸ್ಮರಿಸಿದರು.

2013-18 ರ ಅವಧಿಯಲ್ಲಿ ನಮ್ಮ ಸರ್ಕಾರ 7.27 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೆವು. ಆದರೆ ಹಿಂದಿನ ಸರ್ಕಾರದ ಅವಧಿಯಲ್ಲಿ 12,26,000 ಕೋಟಿ ರೂ. ವೆಚ್ಚ ಮಾಡಿದರೂ ಏನೂ ಅಭಿವೃದ್ಧಿ ಮಾಡಿಲ್ಲ ಎಂದ ಮುಖ್ಯಮಂತ್ರಿಗಳು, ತಮ್ಮ ಹಿಂದಿನ ಅವಧಿಯಲ್ಲಿ 14,54,663 ಮನೆಗಳನ್ನು ಕಟ್ಟಿಸಲಾಗಿತ್ತು. ಹಿಂದಿನ ಬಿಜೆಪಿ ಸರ್ಕಾರವು ಕಟ್ಟಿಸಿದ್ದು 5,19,464 ಮನೆಗಳು. ಅಂತೆಯೇ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ 14,169 ಕಿ.ಮೀ. ಹೆದ್ದಾರಿ ನವೀಕರಣ ಮಾಡಿದ್ದರೆ, ಅವರು ಕೇವಲ 8139 ಕಿ.ಮೀ. ನವೀಕರಣ ಮಾಡಿದ್ದಾರೆ. ತಮ್ಮ ಹಿಂದಿನ ಅವಧಿಯಲ್ಲಿ 696 ಹಾಸ್ಟೆಲ್‌ ಕಟ್ಟಡ ನಿರ್ಮಿಸಿದ್ದರೆ, ನಿಕಟಪೂರ್ವ ಸರ್ಕಾರವು ಕೇವಲ 47 ಹಾಸ್ಟೆಲ್‌ ಕಟ್ಟಡ ನಿರ್ಮಿಸಿದೆ ಎಂದು ವಿವರಿಸಿದರು.

ಹಿಂದಿನ ಸರ್ಕಾರದ ಅವಧಿಯ ಬಿಟ್‌ ಕಾಯಿನ್‌ ಹಗರಣ, ಪಿಎಸ್‌ಐ ನೇಮಕಾತಿ ಹಗರಣ, ಕೋವಿಡ್‌ ಉಪಕರಣ/ ಔಷಧ ಖರೀದಿ ಹಗರಣ ಮೊದಲಾದವುಗಳ ತನಿಖೆ ಈಗಾಗಲೇ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದರು.

ಜನರ ಕೈಗೆ ದುಡ್ಡು ನೀಡಲು ನಮ್ಮ ಸರ್ಕಾರ ಪಂಚ ಗ್ಯಾರೆಂಟಿ:

ಬೆಲೆ ಏರಿಕೆಯಿಂದ ತತ್ತರಿಸಿರುವ  ಜನರ ಕೈಗೆ ದುಡ್ಡು ನೀಡಲು ನಮ್ಮ ಸರ್ಕಾರ ಪಂಚ ಗ್ಯಾರೆಂಟಿಗಳನ್ನು ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸಾಮಾಜಿಕ ಸ್ವಾತಂತ್ರ್ಯಯಿಲ್ಲದಿದ್ದರೆ , ದೇಶಕ್ಕೆ ಸ್ವಾತಂತ್ರ್ಯ ಬಂದರೂ ಪ್ರಯೋಜನವಿಲ್ಲ . ರಾಜಕೀಯ ಪ್ರಜಾಪ್ರಭುತ್ವಯಿದ್ದರೆ ಸಾಲದು, ಸಾಮಾಜಿಕ ಪ್ರಜಾಪ್ರಭುತ್ವವಿರಬೇಕು. ಸಮಾಜಿಕ ಹಾಗೂ ಆರ್ಥಿಕ ಅಸಮಾನತೆಯಿಂದ ಕಷ್ಟದಲ್ಲಿರುವವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಡಾ. ಅಂಬೇಡ್ಕರ್ ಅವರು ಹೇಳಿದ್ದರು. ಎಲ್ಲರಿಗೂ ಸಮಪಾಲು , ಸಮಬಾಳು  ಎಂಬ ಧ್ಯೇಯವೇ ಸಮಾಜವಾದ. ನಮ್ಮ ಸರ್ಕಾರ ಜನರ ಜೇಬಿಗೆ ದುಡ್ಡು ಕೊಡುವ ಮೂಲಕ  ಉದ್ಯೋಗ ಸೃಷ್ಟಿ , ಜಿಡಿಪಿ ಬೆಳವಣಿಗೆ, ತೆರಿಗೆ ಮೂಲಕ್ಕೂ ದಾರಿಯಾಗುತ್ತದೆ ಎಂದರು.

ಕೇಂದ್ರದಿಂದ ರಾಜ್ಯಗಳಿಗೆ ನೀಡುವ ಸಹಾಯಧನ ಕಡಿಮೆಯಾಗಿದೆ:

ನಾವು ನುಡಿದಂತೆ ನಡೆದಿದ್ದೇವೆ. 165 ಭರವಸೆಗಳಲ್ಲಿ  158 ಭರವಸೆಗಳನ್ನು ಈಡೇರಿಸಿದ್ದೇವೆ.. 2018 ಮಾರ್ಚ್ ಅಂತ್ಯಕ್ಕೆ 2,45,000 ಕೋಟಿ ಸಾಲ ಇತ್ತು. 2023 ಕ್ಕೆ ಇದು 5,20,000 ಕೋಟಿ ರೂ.ಸಾಲವಿದೆ. ನಾವು ಬಡವರ ಪರವಾಗಿದ್ದೇವೆ. ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ತತ್ತರಿಸಿರುವ ಜನರ ಜೇಬಿಗೆ ಹಣ ತುಂಬುವ ಕೆಲಸ ಮಾಡಿದ್ದೇವೆ. ಸಾರ್ವತ್ರಿಕ ಮೂಲ ಆದಾಯವನ್ನು ಎಲ್ಲಾ ಅಭಿವೃದ್ಧಿಯಾಗಿರುವ ರಾಜ್ಯಗಳು ಮಾಡುತ್ತಿವೆ. .  14  ಮತ್ತು 15 ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ ರಾಜ್ಯಕ್ಕೆ ಬರುವ ಅನುದಾನ ಕಡಿಮೆಯಾಗಿದೆ. 5495 ಕೋಟಿ ರೂ. ಮಧ್ಯಂತರ ಪರಿಹಾರ  ನೀಡಲಿಲ್ಲ.  25 ಜನ ಸಂಸದರಿದ್ದರೂ ಇದರ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನಿಸಲಿಲ್ಲ ಎಂದು ತಿಳಿಸಿದರು. ರಾಜ್ಯಗಳಿಗೆ ನೀಡುವ ಸಬ್ಸಿಡಿಗಳು ಕಡಿಮೆಯಾಗಿದೆ. ಯೋಜನೆಯಲ್ಲಿ ಶೇ. 80 ರಷ್ಟು ರಾಜ್ಯ ಹಾಗೂ ಶೇ.20 ರಷ್ಟು ಕೇಂದ್ರ ಸರ್ಕಾರ ಹಾಕಿ , ಕೇಂದ್ರ ಪುರಸ್ಕೃತ ಯೋಜನೆ ಎನ್ನಲಾಗುತ್ತದೆ. ಈ ವರ್ಷ ರಾಜ್ಯದಿಂದ ವಿವಿಧ ತೆರಿಗೆಗಳ ರೂಪದಲ್ಲಿ ಕೇಂದ್ರಕ್ಕೆ 4 ಲಕ್ಷ ಕೋಟಿ ರೂ. ಹೋಗುತ್ತಿದ್ದು, ಅದರಲ್ಲಿ ತೆರಿಗೆ ಪಾಲು ಹಾಗೂ  ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸೇರಿ ಕೇವಲ 50257 ಕೋಟಿ ಬರುತ್ತದೆ ಎಂದರು.

ತೆರಿಗೆ ಸಂಗ್ರಹಕ್ಕೆ ಗುರಿ ಹೆಚ್ಚಳ:

ತೆರಿಗೆ ಸೋರಿಕೆಯನ್ನು ತಡೆದು , ತೆರಿಗೆ ಸಂಗ್ರಹಕ್ಕೆ ಪ್ರಮುಖ ಇಲಾಖೆಗಳಿಗೆ ಹೆಚ್ಚಿನ ಗುರಿಯನ್ನು ನೀಡಲಾಗಿದೆ. 13,500 ಕೋಟಿ ತೆರಿಗೆ ಬಾಬ್ತುಗಳಿಂದ ಸಂಗ್ರಹವಾಗುತ್ತದೆ.  ನಮ್ಮ ಸರ್ಕಾರ 85,808 ಕೋಟಿ ಹೆಚ್ಚುವರಿ ಸಾಲ ಪಡೆಯುತ್ತಿದೆ. ಯೋಜನೆಗಳ ಆದ್ಯತೀಕರಣದಿಂದ ರೂ. 34,650 ಕೋಟಿ ಕ್ರೋಢೀಕರಣ ಮಾಡಲಾಗುತ್ತದೆ.  ಇದು ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಾನದಂಡಗಳ ಮಿತಿಯೊಳಗೆ ಇದೆ.  ಮುಂದೆಯೂ ಉಳಿತಾಯ ಬಜೆಟ್ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಪಂಚ ಗ್ಯಾರೆಂಟಿಗಳಿಂದ 1.30 ಕೋಟಿ ಕುಟುಂಬಗಳಿಗೆ ಅನುಕೂಲ:

ಸಂಪನ್ಮೂಲ ಕ್ರೋಢೀಕರಣ , ಪಂಚ ಯೋಜನೆಗಳಿಗೆ ಅನುದಾನ ಮೀಸಲು ಮಾಡಲಾಗಿದೆ. ರಾಜ್ಯದ ಆರ್ಥಿಕತೆ ದಿವಾಳಿಯಾಗುತ್ತಿಲ್ಲ. 76 ಕಾರ್ಯಕ್ರಮಗಳ ಅನುಷ್ಠಾನ ಮಾಡುವ ಮೂಲಕ ನುಡಿದಂತೆ ನಡೆಯುತ್ತಿದ್ದೇವೆ.  ಶಕ್ತಿ ಯೋಜನೆ ಮೂಲಕ ಪ್ರತಿ ದಿನ ಸುಮಾರು 50 ಲಕ್ಷ ಜನ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. 2800 ಕೋಟಿಯನ್ನು ಈ ಯೋಜನೆಗೆ ಈ ವರ್ಷ ಇಡಲಾಗಿದೆ. ಗೃಹಜ್ಯೋತಿ ಯೋಜನೆ ಜುಲೈ ತಿಂಗಳಿನಿಂದ ಜಾರಿ ಮಾಡಿ , ಫಲಾನುಭವಿಗಳು ಆಗಸ್ಟ್ ತಿಂಗಳಿನಿಂದ ಬಿಲ್ಲು ಪಾವತಿಸುವ ಅಗತ್ಯವಿಲ್ಲ. ರಾಜ್ಯದಲ್ಲಿ ಜನರ ಗೃಹಬಳಕೆಯ ವಿದ್ಯುತ್ ಸರಾಸರಿ 53 ಯೂನಿಟ್ .12 ತಿಂಗಳ ಸರಾಸರಿಗೆ ಶೇ.10 ರಷ್ಟು ಸೇರಿಸಿ , ಉಚಿತ ವಿದ್ಯುತ್ ನೀಡಲಾಗುವುದು. ರಾಜ್ಯಕ್ಕೆ ಅನ್ನಭಾಗ್ಯ ಯೋಜನೆಗೆ 2,29,000 ಮೆ.ಟನ್ ಅಕ್ಕಿ ಬೇಕಾಗುತ್ತದೆ. ಅಕ್ಕಿ ಸರಬರಾಜಿಗೆ ಕೇಂದ್ರ ನಿರಾಕರಿಸಿದ್ದರಿಂದ 5 ಕೆಜಿ ಬದಲು 170 ರೂ.  ವೆಚ್ಚವನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದ್ದು , ಈ ಯೋಜನೆಗೆ ಸುಮಾರು 10 ಸಾವಿರ ಕೋಟಿ ರೂ. ಮೀಸಲಿರಿಸಲಾಲಿದೆ. ಈವರೆಗೆ 57.51 ಲಕ್ಷ ಕುಟುಂಬಗಳಿಗೆ  337.08 ಕೋಟಿ ಬ್ಯಾಂಕ್ ಖಾತೆಗೆ ತಲುಪಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ 34000 ಕೋಟಿ ರೂ. , ಈ ವರ್ಷ 18000 ಕೋಟಿ ರೂ ಮೀಸಲಿರಿಸಲಾಗಿದೆ. ಯುವನಿಧಿ ಯೋಜನೆಯಡಿ 2022-23 ರಲ್ಲಿ ಪಾಸಾದ ಪದವಿಧರರು ಹಾಗೂ ಡಿಪ್ಲೋಮಾ ಪಡೆದಿರುವವರಿಗೆ 3000 ರೂ. ಹಾಗೂ 1500 ರೂ. ಅನುಕ್ರಮವಾಗಿ 24 ತಿಂಗಳವರಗೆ  ನೀಡಲಾಗುವುದು. ಪಂಚ ಗ್ಯಾರೆಂಟಿಗಳಿಂದ  1.30 ಕೋಟಿ ಕುಟುಂಬಗಳಿಗೆ ಅನುಕೂಲವಾಗುತ್ತಿದೆ ಎಂದರು. 

ಗ್ಯಾರಂಟಿಗಳಿಂದ ಜನ ಸಂತುಷ್ಟರಾಗಿದ್ದಾರೆ:

ನಮ್ಮ ಸರ್ಕಾರ ನೀಡಿರುವ ಎಲ್ಲ ಗ್ಯಾರಂಟಿ ಯೋಜನೆಗಳನ್ನು ತಪ್ಪದೆ ಜಾರಿ ಮಾಡುತ್ತಿದ್ದು, ಜನರೂ ಸಂತುಷ್ಟರಾಗಿದ್ದಾರೆ. ನಮ್ಮ ಬಜೆಟ್ ಗಾತ್ರ 3,27,747 ಕೋಟಿ ರೂ. , ಕಳೆದ ಸರ್ಕಾರದ ಬಜೆಟ್ ಗಿಂತ 62027 ಕೋಟಿ ರೂ. ಶೇ.23 ರಷ್ಟು ಅಭಿವೃದ್ಧಿಯನ್ನು ಸೂಚಿಸುತ್ತಿದೆ.  ನಾವು 5 ವರ್ಷದಲ್ಲಿ 14,54,663 ಮನೆಗಳನ್ನು ಕಟ್ಟಿಸಿದೆವು .  ನಾವು ಹಿಂದಿನ ಸರ್ಕಾರಕ್ಕಿಂತ 6 ಲಕ್ಷ ಮನೆಗಳನ್ನು ಹೆಚ್ಚಾಗಿ ನಿರ್ಮಿಸಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲಿ 14,169 ಕಿ.ಮೀ. ಹೆದ್ದಾರಿ ಅಭಿವೃದ್ಧಿಪಡಿಸಿದ್ದೆವು.  ಅವರ ಸರ್ಕಾರ 8037 ಕಿ.ಮಿ ಮಾತ್ರ ನಿರ್ಮಿಸಿದ್ದಾರೆ. ನಮ್ಮ ಸರ್ಕಾರದ 5 ವರ್ಷದಲ್ಲಿ 696 ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ .ಎಸ್ ಸಿಎಸ್ ಪಿ / ಟಿಎಸ್ ಪಿ   ಕಾನೂನು ಬಂದ ನಂತರ, ನಮ್ಮ ಸರ್ಕಾರ 5 ವರ್ಷದಲ್ಲಿ 88530 ಕೋಟಿ  ಖರ್ಚು ಮಾಡಲಾಗಿದೆ.. ನಮ್ಮ ಬಜೆಟ ಗಾತ್ರ 2018-19 ರಲ್ಲಿ  202297 ಕೊಟಿ ಇತ್ತು. ಆಗ 29691 ಕೋಟಿ ರೂ. ಎಸ್ ಸಿ ಎಸ್ ಟಿ ಗಳಿಗೆ ಮೀಸಲಿಟ್ಟಿದ್ದೆವು. ಈ ವರ್ಷದ ಬಜೆಟ್ ನಲ್ಲಿ ನಮ್ಮ ಸರ್ಕಾರ ಎಸ್ ಸಿಎಸ್ ಪಿ / ಟಿಎಸ್ ಪಿ    ಯೋಜನೆಗಳಿಗೆ 34294 ಕೋಟಿ ಮೀಸಲಿಡಲಾಗಿದೆ. ನಮ್ಮದು ಬಡವರ ಪರ ಹಾಗೂ ದಲಿತಪರವಾದ ಸರ್ಕಾರ ಎಂದು ತಿಳಿಸಿದರು.

ಅವಕಾಶ ವಂಚಿತರಿಗೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ:

ಈ ಸರ್ಕಾರ ಸಮಾಜದ ಎಲ್ಲ ವರ್ಗದ ಜನರು, ಅವಕಾಶ ವಂಚಿತರಿಗೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನಿಸಲಾಗಿದ್ದು, ಮುಂದೆಯೂ ಪ್ರಯತ್ನಿಸಲಾಗಿದೆ. ಜನಪರ , ಅಭಿವೃದ್ಧಿಪರ, ದೂರದೃಷ್ಟಿಯುಳ್ಳ, ರಾಜ್ಯ ಆರ್ಥಿಕತೆ ಬೆಳವಣಿಗೆಗೆ ಪೂರಕವಾದ ಬಜೆಟ್ ನ್ನು ಮಂಡಿಸಲಾಗಿದೆ. ರಾಜ್ಯದ ಜನರು ಈ ಬಜೆಟ್ ನ್ನು ಸ್ವಾಗತಿಸಿದ್ದಾರೆ. ಬಜೆಟ್ ಚರ್ಚೆಯಲ್ಲಿ ಭಾಗವಹಿಸಿ , ಬಜೆಟ್ ಸ್ವಾಗತಿಸಿದವರು ಹಾಗೂ ಟೀಕಿಸಿದವರಿಗೆ ಮುಖ್ಯಮಂತ್ರಿಗಳು ಧನ್ಯವಾದಗಳನ್ನು ತಿಳಿಸಿದರು.

 

ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ಮೇಲಿನ ಚರ್ಚೆಗೆ ಉತ್ತರಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಹೆಚ್. ವಿಶ್ವನಾಥ್‌ ಅವರು, "ನಾನು ಇಲ್ಲಿರುವುದು ಸುಮ್ಮನೆ-ಅಲ್ಲಿರುವುದು ನಮ್ಮನೆ" ಎಂದು ಸಿಎಂ ಅವರ ಕಡೆ ಕೈ ತೋರಿಸುತ್ತಾ, ಮುಖ್ಯಮಂತ್ರಿಗಳು ಉತ್ತರ ನೀಡುವಾಗ ಬ್ಯಾಂಡ್‌ ಸೆಟ್‌ ಇದ್ದಿದ್ದರೆ ಕುಣಿಯೋಣ ಎಂದೆನ್ನಿಸಿತ್ತು ಎಂದು ಬಣ್ಣಿಸಿದರು.

**********

 

×
ABOUT DULT ORGANISATIONAL STRUCTURE PROJECTS