ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಹ್ಯಾಪಿನೆಸ್ ಇಂಡೆಕ್ಸ್ ಆಧಾರದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಾರ್ಯಕ್ರಮ: ಮುಖ್ಯಮಂತ್ರಿ

know_the_cm

(ಕಲಬುರಗಿ), ಸೆಪ್ಟೆಂಬರ್ 17, 2021

-ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹ್ಯಾಪಿನೆಸ್ ಇಂಡೆಕ್ಸ್ ಆಧರಿಸಿ, ಕಾರ್ಯಕ್ರಮಗಳನ್ನು ರೂಪಿಸಲು ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲ್ಲಿ ತಿಳಿಸಿದರು.

-ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಧ್ವಜಾರೋಹಣ ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಒಂದು ಕುಟುಂಬದ ಸಂತೃಪ್ತಿಯ ಮಾನದಂಡವನ್ನು ಆಧರಿಸಿ ಹ್ಯಾಪಿನೆಸ್ ಇಂಡೆಕ್ಸ್ ಅನ್ನು ನಿಗದಿ ಪಡಿಸಲಾಗುತ್ತದೆ. ಈ ಸೂಚ್ಯಂಕವನ್ನು ಆಧಾರವಾಗಿಟ್ಟುಕೊಂಡು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಲು ಉದ್ದೇಶಿಸಿದೆ. ಈ ಕುರಿತು ಯೋಜನಾ ಮಂಡಳಿಯ ಸದಸ್ಯರು ಹಾಗೂ ಇತರ ಪರಿಣತರೊಂದಿಗೆ ಸವಿಸ್ತಾರವಾಗಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

-ಇಂದು ಪ್ರಮುಖ ಶುಭದಿನದಂದು ಕಲಬುರಗಿಗೆ ಭೇಟಿ ಕೊಟ್ಟಿದ್ದೇನೆ. ನಮ್ಮ ನಾಯಕ ಯಡಿಯೂರಪ್ಪನವರು ಈ ಭಾಗದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ಹಾಗೂ ನೈತಿಕವಾಗಿ ಕಲ್ಯಾಣವಾಗಬೇಕು ಎಂಬ ಆಶಯದೊಂದಿಗೆ ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟಿದ್ದಾರೆ. ಈ ಭಾಗದ ಸಮಗ್ರ ಅಭಿವೃದ್ಧಿ ಮಾಡುವುದಕ್ಕೆ ತಮಗೆ ದೊರೆತಿರುವ ಸದವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಇಚ್ಛೆ ನನ್ನದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

-ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳನ್ನು ಶೀಘ್ರವೇ ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡಲಾಗುವುದು. ಈ ಭಾಗವನ್ನು ಎರಡು ಸ್ತರಗಳಲ್ಲಿ ಅಭಿವೃದ್ಧಿ ಮಾಡಬೇಕಾಗಿದೆ. ಜನೋಪಯೋಗಿ ಬೃಹತ್ ಯೋಜನೆಗಳಾದ ನೀರಾವರಿ, ವಿದ್ಯುತ್ ಉತ್ಪಾದನೆ, ಕೈಗಾರಿಕಾ ಯೋಜನೆಗಳ ಅನುಷ್ಠಾನದೊಂದಿಗೆ ಉದ್ಯೋಗ ಸೃಜನೆ ಮಾಡಬೇಕಾಗಿದೆ. ಇದರೊಂದಿಗೆ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು. ಅದರ ಜೊತೆಗೆ ಕೃಷ್ಣಾಮೇಲ್ದಂಡೆ ಹಂತ 3ರಡಿ ಕಲಬುರಗಿ, ರಾಯಚೂರು, ವಿಜಾಪುರ ಜಿಲ್ಲೆಯ ಯೋಜನೆಗಳನ್ನು ಪೂರ್ಣಗೊಳಿಸಲು ಒತ್ತು ನೀಡಲಾಗುವುದು. ಎನ್ ಆರ್ ಬಿಸಿ, ಎನ್ ಎಲ್ ಬಿಸಿ, ಮಲ್ಲಬಾದ್ , ಜೇವರ್ಗಿ ಶಾಖಾ ಕಾಲುವೆ ಮೊದಲಾದವುಗಳನ್ನು ಪೂರ್ಣಗೊಳಿಸುವ ಚಿಂತನೆ ನಮ್ಮದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

-ಕಲಬುರಗಿ ಭಾರತದ ಪ್ರಮುಖ ನಗರವಾಗಿ ಬೆಳೆಯುತ್ತಿದ್ದು, ಇದನ್ನು ಕೈಗಾರಿಕಾ ನಗರವಾಗಿ ಪರಿವರ್ತನೆ ಮಾಡಬೇಕಾಗಿದೆ. ಕೃಷಿ ಸಂಸ್ಕರಣೆ, ತೋಟಗಾರಿಕೆ ಉತ್ಪನ್ನ ಸಂಸ್ಕರಣೆಗೆ ಒತ್ತು ನೀಡಲಾಗುವದು. ಜೊತೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರೋತ್ಸಾಹದ ಲಾಭವನ್ನು ಕಲ್ಯಾಣ ಕರ್ನಾಟಕ ಕೇಂದ್ರಿತವಾಗಿ ಪಡೆದುಕೊಂಡು, ಬೇಳೆಕಾಳುಗಳು, ಎಣ್ಣೆಕಾಳುಗಳನ್ನು ಬೆಳೆಗೆ ಉತ್ತೇಜನ ನೀಡಲು ಉದ್ದೇಶಿಸಿದೆ ಎಂದರು. ತೊಗರಿ ಮಂಡಳಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

-ಕೈಗಾರಿಕೆಯಲ್ಲಿ ಜವಳಿ, ಔಷಧಿ ಉದ್ಯಮಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಜೊತೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ, ಹೂಡಿಕೆದಾರರ ಸಭೆ ಕರೆದು, ಈ ಭಾಗದ ಯೋಜನೆಗಳಿಗೆ ಅನುಮೋದನೆ ನೀಡಿ, ದೊಡ್ಡ ಪ್ರಮಾಣದ ಹೂಡಿಕೆ ಆಕರ್ಷಿಸಲು ಉದ್ದೇಶಿಸಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗುವುದು. ಉದ್ಯೋಗ ಸೃಜನೆಯನ್ನು ಆಧರಿಸಿ ಕೈಗಾರಿಕೆಗಳಿಗೆ ಪ್ರೋತ್ಸಾಹಕ ನೀಡಲು ನಿರ್ಧರಿಸಲಾಗಿದೆ. ಈ ವರೆಗೆ ಬಂಡವಾಳದ ಪ್ರಮಾಣವನ್ನು ಆಧರಿಸಿ ಪ್ರೋತ್ಸಾಹಕ ನೀಡಲಾಗುತ್ತಿತ್ತು ಎಂದು ಅವರು ವಿವರಿಸಿದರು.

-ಈ ಭಾಗದಲ್ಲಿ ಜವಳಿ ಪಾರ್ಕ್ ಹಾಗೂ ಆಭರಣಗಳ ಪಾರ್ಕ್ ಸ್ಥಾಪಿಸುವ ಕನಸು ಕೈಗಾರಿಕಾ ಸಚಿವರದ್ದಾಗಿದೆ. ಜೊತೆಗೆ ಕೇಂದ್ರ ಸರ್ಕಾರದ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯಡಿ ಆರು ಜಿಲ್ಲೆಗಳಿಗೆ ವಿಶೇಷ ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಗಿದೆ. ಇದಲ್ಲದೆ ಮಾನವ ಅಭಿವೃದ್ಧಿ ಸೂಚ್ಯಂಕದ ಆಧಾರದಲ್ಲಿ ಈ ಜಿಲ್ಲೆಗಳಲ್ಲಿ ಗುರುತಿಸಲಾಗಿರುವ ಕೊರತೆಗಳನ್ನು ನಿವಾರಿಸಲು ಯೋಜನೆಗಳನ್ನು ರೂಪಿಸಲಾಗುವುದು. ಉದಾಹರಣೆಗೆ ನೀತಿ ಆಯೋಗವು ಮಹತ್ವಾಕಾಂಕ್ಷಿ ಜಿಲ್ಲೆಗಳೆಂದು ಗುರುತಿಸಿರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಪೌಷ್ಟಿಕತೆ, ಆರೋಗ್ಯಕ್ಕೆ ಒತ್ತು ನೀಡಬೇಕಾಗಿದೆ ಎಂದು ತಿಳಿಸಿದರು.

-ಕಲ್ಯಾಣ ಕರ್ನಾಟಕ ಮಂಡಳಿ 13 ಸಾವಿರ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾಗಿದೆ. ಕಳೆದ ವರ್ಷ ಹಾಗೂ ಈ ವರ್ಷದ 1500 ಕೋಟಿ ರೂ. ಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಈ ವರ್ಷ 400 ಕೋಟಿ ಬಿಡುಗಡೆ ಯಾಗಿದೆ. ಪ್ರಗತಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುವುದು. ಮುಂದಿನ ಮಾರ್ಚ್ ವೇಳೆಗೆ ಮಂಜೂರಾಗಿರುವ ಕಾಮಗಾರಿಗಳಮನ್ನು ಪೂರ್ಣಗೊಳಿಸಿ, ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಗುರಿ ನೀಡಲಾಗಿದೆ. ಮಂಡಳಿಯ ಅನುಷ್ಠಾನ ಸಾಮರ್ಥ್ಯವನ್ನು ಗಮನಿಸಿ, ಅನುದಾನ ದ್ವಿಗುಣಗೊಳಿಸಲು ತಾವು ಸಿದ್ಧರಿರುವುದಾಗಿ ತಿಳಿಸಿದರು.

know_the_cm

-ನಂಜುಂಡಪ್ಪ ವರದಿ ಪರಿಷ್ಕರಣೆ ಮಾಡಲು ಉದ್ದೇಶಿಸಿದೆ. ಅಂದಿನ ನಂಜುಂಡಪ್ಪ ವರದಿಯ ಮಾನದಂಡಗಳು, ಮಾನವ ಅಭಿವೃದ್ಧಿ ಸೂಚ್ಯಂಕ ಹಾಗೂ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಆಧರಿಸಿ, ವಿಶೇಷ ಅಭಿವೃದ್ಧಿ ಯೋಜನೆಯನ್ನು ಹೊಸ ಗುರಿ ನಿಗದಿಯೊಂದಿಗೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

-ಸರ್ಕಾರದಲ್ಲಿ ಆರ್ಥಿಕ ಶಿಸ್ತನ್ನು ತರಬೇಕು. ಆದ್ಯತೆಗಳನ್ನು ಗುರುತಿಸಬೇಕಾಗಿದೆ. ಬದ್ಧ ವೆಚ್ಚ ಕಡಿಮೆ ಮಾಡಿ, ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಹಣ ಒದಗಿಸುವ ಅವಕಾಶ ಸೃಷ್ಟಿ ಮಾಡಬೇಕಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಇದುವರೆಗೆ ಮಾಡಿರುವ ವೆಚ್ಚದ ಭೌತಿಕ ಪ್ರಗತಿಯ ಮೌಲ್ಯ ಮಾಪನ ಮಾಡಲಾಗುವುದು ಎಂದು ತಿಳಿಸಿದರು.

-ಪೆಟ್ರೋಲ್ , ಡೀಸೆಲ್ ಗಳನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರುವ ಕುರಿತು, ಇದು ದೂರಗಾಮಿ ಪರಿಣಾಮ ಬೀರುವ ವಿಷಯವಾಗಿದ್ದು, ಇನ್ನಷ್ಟು ಚರ್ಚೆಯಾಗುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

-ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಕೊಡುವ ಬಗ್ಗೆ ಚರ್ಚೆ ಮಾಡಲಾಗುವುದು. ಆದರೆ ಡಿ.ಪಿ.ಎ.ಆರ್. ನ ವಿಶೇಷ ಕೋಶವನ್ನು ಕಲಬುರಗಿಯಲ್ಲಿ ಸ್ಥಾಪಿಸಲಾಗುವುದು. 371 (ಜೆ ) ಅನುಷ್ಠಾನಕ್ಕೆ ರಚಿಸಲಾದ ಕೋಶವನ್ನು ಕಲಬುರಗಿಯಲಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.

-ರಾಜ್ಯ ಆಯವ್ಯಯದಲ್ಲಿ ನಿಗದಿಪಡಿಸುವ ಯೋಜನೆಗಳಿಗೆ ಹೆಚ್ಚುವರಿಯಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಹಾಗೂ ನಂಜುಂಡಪ್ಪ ವರದಿ ಆಧಾರಿತ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನ ಒದಗಿಸುವ ಆಶಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

-ದೆಹಲಿಗೆ ತೆರಳಿದಾಗ ಕಲಬುರಗಿಯಲ್ಲಿ ರೈಲ್ವೆ ವಿಭಾಗ ಸ್ಥಾಪಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇನೆ. ಕಲಬುರಗಿ ಮಧ್ಯಭಾರತದ ಪ್ರಮುಖ ಭಾಗವಾಗಿದೆ. ರೈಲ್ವೆ ವಿಭಾಗ ಇಲ್ಲಿ ಸ್ಥಾಪನೆಯಾದರೆ, ಪ್ರಯಾಣಿಕರಿಗೆ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿಗಳಳು ತಿಳಿಸಿದರು.

-ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದಾಗ ಬೀದರ್- ಬಳ್ಳಾರಿ ನಡುವೆ ರಾಷ್ಟ್ರೀಯ ಹೆದ್ದಾರಿಗಳನ್ನು ಪರಸ್ಪರ ಸಂಪರ್ಕಿಸುವ ಬಗ್ಗೆ ಚರ್ಚಿಸಲಾಗಿದೆ. ಪಿಯುಷ್ ಗೋಯಲ್ ಅವರೊಂದಿಗೆ ಟೆಕ್ಸ್ ಟೈಲ್ ಪಾರ್ಕ್ ಮತ್ತು ಜ್ಯುವೆಲ್ಲರಿ ಪಾರ್ಕ್, ಫಾರ್ಮಾ ಪಾರ್ಕ್ ಕುರಿತೂ ಮಾತನಾಡಿದ್ದೇನೆ. ಇಂದು ಅವರನ್ನು ಭೇಟಿಯಾದಾಗ ಮತ್ತೊಮ್ಮೆ ಈ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.

-ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಈಗ ನಿರ್ಣಯ ತೆಗೆದುಕೊಳ್ಳುವುದಲ್ಲ, ಇದು ಅನುಷ್ಠಾನ ಕಾಲ. ಕಾರ್ಯಕ್ರಮ ಅನುಷ್ಠಾನಕ್ಕೆ ನಮ್ಮ ಆದ್ಯತೆ. ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ನುಡಿದರು.

ಉದ್ಯೋಗ ಸೃಷ್ಟಿಗೆ ಕಲ್ಯಾಣ ಕರ್ನಾಟಕ ಹೂಡಿಕೆದಾರರ ಸಮಾವೇಶ: ಮುಖ್ಯಮಂತ್ರಿ

-ಮುಂದಿನ ಎರಡು ತಿಂಗಳ ಒಳಗೆ ಕಲ್ಯಾಣ ಕರ್ನಾಟಕ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

-ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಮಾತನಾಡಿಸ ಅವರು, ಕಲಬುರಗಿಯಲ್ಲಿ ಉದ್ಯೋಗ ಸೃಷ್ಟಿ ಬಹಳ ಮುಖ್ಯ. ಸಣ್ಣ, ಮದ್ಯಮ ಮತ್ತು ಭಾರಿ ಉದ್ಯಮಗಳ ಸೃಷ್ಟಿಗೆ ವಿಪುಲ ಅವಕಾಶಗಳಿವೆ ಎಂದರು.

-ಮುರುಗೇಶ್ ನಿರಾಣಿಯವರ ನೇತೃತ್ವದಲ್ಲಿ ಕರ್ನಾಟಕದ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹೂಡಿಕೆದಾರರ ಸಭೆ ನಡೆಸಿ ಚರ್ಚಿಸಿ, ಅನುಮೋದನೆಗಳನ್ನು ನೀಡಿ, ಇಲ್ಲಿ ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗುವುದು ಬಹಳ ಅಗತ್ಯವಿದೆ. ಇದರಿಂದ ಸಣ್ಣ ಉದ್ದಿಮೆಗಳೂ ಬೆಳೆಯುತ್ತವೆ. ಹಾಗೂ ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು.

-ಸಿಮೆಂಟ್ ಉದ್ಯಮ ಇಲ್ಲಿ ಬಹಳ ಇದೆ. ಆದರೆ ಇದರ ಲಾಭ ಸ್ಥಳೀಯರಿಗೆ ಆಗುತ್ತಾ ಇಲ್ಲ. ಆದ್ದರಿಂದ ಸಿಮೆಂಟ್ ತಯಾರಕರನ್ನು ಕರೆಸಿ, ಎಷ್ಟು ಜನ ಸ್ಥಳೀಯರಿಗೆ ಉದ್ಯೋಗ ನೀಡಿದ್ದೀರಿ ಎಂದು ಮಾಹಿತಿ ಪಡೆದುಕೊಳ್ಳಲಾಗುವುದು. ಕಾನೂನಾತ್ಮಕವಾಗಿ ಬರುವ ಲಾಭದಲ್ಲಿ ಸಿ.ಎಸ್.ಆರ್. ಅನುದಾನ ಕಲ್ಯಾಣ ಕರ್ನಾಟಕಕ್ಕೆ ದೊರೆಯಬೇಕು. ಆದರೆ ಇದು ಆಗುತ್ತಾ ಇಲ್ಲ. ಕೋವಿಡ್ ಸಂದರ್ಭದಲ್ಲಿಯೂ ನಿರೀಕ್ಷೆಗೆ ತಕ್ಕಂತೆ ನೆರವು ನೀಡಿಲ್ಲ. ಆದರೆ ಮುಂದೆ ಹೀಗೆ ನಡೆಯುವುದಿಲ್ಲ. ಯಾವ ಭೂಮಿಯಿಂದ ನೀವು ಲಾಭ ಪಡೆದಿದ್ದೀರೋ, ಆ ನೆಲಕ್ಕೆ, ಅಲ್ಲಿನ ಜನರಿಗೆ ಸಹಾಯ ಮಾಡಲೇಬೇಕು ಎಂದು ಮುಖ್ಯಮಂತ್ರಿಯವರು ಎಚ್ಚರಿಕೆ ನೀಡಿದರು.

ನಂಜುಂಡಪ್ಪ ವರದಿಗೆ ಹೊಸ ರೂಪ:

- ನಂಜುಂಡಪ್ಪ ವರದಿಯನ್ನು ಪುನರ್ ಪರಿಶೀಲಿಸಲಾಗುತ್ತಿದೆ. ಮುಂದಿನ 5 ವರ್ಷಗಳಿಗೆ ವಿಸ್ತರಿಸಿ ಪ್ರಸ್ತುತ ಸವಾಲುಗಳನ್ನು ಎದುರಿಸಲು ಅನುಕೂಲವಾಗುವಂತೆ ಅದಕ್ಕೆ ಹೊಸ ರೂಪ ನೀಡಲಾಗುವುದು.

-ಆಶೋತ್ತರಗಳ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಅಧಿಕಾರಿಗಳ ಮನೋಭಾವ ಬದಲಾಯಿಸಿ, ಆಯವ್ಯಯದಲ್ಲಿ ಎಲ್ಲಾ ಇಲಾಖೆಗಳ ಯೋಜನೆಗಳಿಗೂ ಸಂರ್ಪವಾದ ಅನುದಾನವನ್ನು ಒದಗಿಸಲಾಗುವುದು. ಅದಲ್ಲದೆ, ಪ್ರತಿ 3 ತಿಂಗಳಿಗೊಮ್ಮೆ ಕೆ.ಕೆ.ಡಿ.ಬಿ ಹಾಗೂ ನಂಜುಂಡಪ್ಪ ವರದಿ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಖುದ್ದು ತಾವೇ ಮಾಡುವುದಾಗಿ ತಿಳಿಸಿದರು.

-ನೈಸರ್ಗಿಕ ಸಂಪತ್ತು, ನದಿಗಳನ್ನು ಕೃಷಿಗೆ ಬಳಕೆ ಮಾಡುವ ಯೋಜನೆಗಳು, ಕೃಷ್ಣಾ ಮೇಲ್ದಂಡೆ - 3 ನೇ ಹಂತದಲ್ಲಿ ಈ ಭಾಗದ ಯೋಜನೆಗಳನ್ನು ಪೂರ್ಣಗೊಳಿಸುವುದು.ಮತ್ತು ಈ ಭಾಗದ ಕಲಬುರಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ , ಯಾದಗಿರಿಯಲ್ಲಿ ಫಾರ್ಮಾ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಬಳಿ ಚರ್ಚಿಸಲಾಗುವುದು ಎಂದರು.

ಹುದ್ದೆಗಳ ನೇಮಕಾತಿ:

-ನೇಮಕಾತಿ ಎಂದಾಗ ಈ ಭಾಗದಲ್ಲಿ ನೇಮಕಾತಿಯನ್ನು ಮಾಡಬೇಕಾದ ಪ್ರಮಾಣದಲ್ಲಿ ಮಾಡಲಾಗಿಲ್ಲ. ಅದನ್ನು ಪೂರ್ಣಗೊಳಿಸುವ ಸಂಕಲ್ಪ ನಮ್ಮ ಸರ್ಕಾರದ್ದು. ಡಿ ವರ್ಗದಿಂದ ಹಿಡಿದು, ಸಿ. ಬಿ ಮತ್ತು ಎ ವರ್ಗದ ಹುದ್ದೆಗಳ ನೇಮಕಾತಿ ಮಾಡಲಾಗುವುದು. ಎಲ್ಲಕ್ಕಿಂತ ಹೆಚ್ಚಾಗಿ ಕಲ್ಯಾಣ ಕರ್ನಾಟಕ ಮಂಡಳಿಯಲ್ಲಿ ನೇಮಕಾತಿ ಆಗಬೇಕಿದೆ. ಕಲ್ಯಾಣ ಕರ್ನಾಟಕ ಮಂಡಳಿಯನ್ನು ಬಲಪಡಿಸಿ, ಅದಕ್ಕೆ ಶಾಶ್ವತವಾಗಿ ಒಬ್ಬ ಕಾರ್ಯದರ್ಶಿಯನ್ನು ನೇಮಕ ಮಾಡಲಾಗುವುದು. 372 ಜೆ ಅನುಷ್ಠಾನ ಮಾಡಲು ಇರುವ ಸೆಲ್ ಕಚೇರಿಯನ್ನು ಕಲಬುರಗಿಯಲ್ಲಿ ಸ್ಥಾಪನೆ ಮಾಡಲಾಗುವುದು. ಅದಾದರೆ 371 ಜೆ ಅನುಷ್ಠಾನದ ಸಂಪೂರ್ಣ ನಿಗಾ ವಹಿಸಬೇಕು. ಖರ್ಚಾಗಿರುವ ಹಣದ ಸಾರ್ಥಕತೆ ಎಷ್ಟು, ಎಷ್ಟು ವಿದ್ಯಾರ್ಥಿಗಳಿಗೆ ಲಾಭ ಆಗಿದೆ, ಮಾನವ ಸಂಪನ್ಮೂಲ ಅಭಿವೃದ್ಧಿ ಏನಾಗಿದೆ, ಆರೋಗ್ಯ ಕ್ಷೇತ್ರ, ಉದ್ಯೋಗ, ಕೈಗಾರಿಕೆಗಳು ಏನಾಗಿದೆ ಎಂಬ ಮೌಲ್ಯಮಾಪನ ಮಾಡಲಾಗುತ್ತಿದೆ. ಇದರ ಮೂಲಕ ಅಗತ್ಯ ಬದಲಾವಣೆಗಳನ್ನು ಮಾಡಿ ನೇರವಾಗಿ ಈ ಎಲ್ಲ ಕ್ಷೇತ್ರಗಳಲ್ಲಿ ಮೌಲ್ಯಮಾಪನ ಆಧಾರದ ಮೇಲೆ ಬದಲಾವಣೆಗಳನ್ನು ತರಲಾಗುತ್ತಿದೆ. ನಮ್ಮ ಚಿಂತನೆ, ಕಾರ್ಯಸರಣಿ, ಗುರಿ ಹಾಗೂ ಅನುಷ್ಠಾನದಲ್ಲಿ ಆಮೂಲಾಗ್ರ ಬದಲಾವಣೆ ತರುವ ಸಂಕಲ್ಪವನ್ನು ಮಾಡಿದ್ದೇವೆ. ಈ ಸರ್ಕಾರ ನಿಮ್ಮ ಪರವಾಗಿದೆ. ಈವರೆಗೆ ನಿರೀಕ್ಷೆ ಇಟ್ಟು ನಿರಾಶರಾಗಿರಬಹುದು. ಆದರೆ ಸ್ವಲ್ಪ ಸಮಯದಲ್ಲಿ ಇಲ್ಲಿ ಆಮೂಲಾಗ್ರ ಬದಲಾವಣೆ ತರಲಾಗುವುದು ಎಂಬ ಭರವಸೆಯಿತ್ತರು. ಕಲ್ಯಾಣ ಕರ್ನಾಟಕ ಮಂಡಳಿಗೆ ಒದಗಿಸಲಾಗಿರುವ 8 ಸಾವಿರ ಕೋಟಿಗೂ ಹೆಚ್ವು ಅನುದಾನದಲ್ಲಿ ಕೇವಲ 6 ಸಾವಿರ ಕೋಟಿ ರೂ.ಗಳು ವೆಚ್ಚವಾಗಿದೆ. ಇನ್ನು 2 ಸಾವಿರ ಕೋಟಿ ಈ ವರ್ಷದಲ್ಲಿ ವೆಚ್ಚವಾಗಬೇಕಿದೆ. ಸುಮಾರು 13 ಸಾವಿರ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪೂರ್ಣವಾಗಬೇಕಿದೆ. ಈ ಭಾಗದ ಶಾಸಕರಿ ಹೆಚ್ವಿನ ಅನುದಾನ ಬೇಡಿಕೆ ಇಟ್ಟಾಗ, ಇರುವುದನ್ನು ಪೂರ್ಣವಾಗಿ ಖರ್ಚು ಮಾಡಿ, ಮುಂದಿನ ಆಯವ್ಯಯದಲ್ಲಿ 1500 ಕೋಟಿ ಖರ್ಚು ಮಾಡಿದರೆ ಹೆಚ್ಚಿನ ಅನುದಾನ ನೀಡುವ ಕರಾರು ಹಾಕಿದ್ದೇನೆ. ಅಷ್ಟು ಹಣವನ್ನು ಉಪಯೋಗಿಸಿದರೆ, 1500 ಕೋಟಿಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸಿ, ಆಸ್ತಿ ಸೃಜನೆ, ಮಾನವ ಸಂಪನ್ಮೂಲ ಅಭಿವೃದ್ಧಿಗೆ ವ್ಯಯಿಸಿದರೆ, ಇನ್ನಷ್ಟು ಅನುದಾನ ನೀಡಲು ಸಿದ್ಧವಿರುವುದಾಗಿ ತಿಳಿಸಿದರು. ಈ ಭಾಗದ ಸಮಗ್ರ ಅಭಿವೃದ್ಧಿಯಾಗಬೇಕು ಎಂದರು.

-ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆ ಮೇಲಿರುತ್ತದೆ. ಒಬ್ಬ ಮುತ್ಸದ್ದಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ. ಕಲ್ಯಾಣ ಕರ್ನಾಟಕದ ಕೆಲಸಗಳು ಮುಂದಿನ ಜನಾಂಗಕ್ಕೂ ಒಳಿತಾಗುವ ನಿಟ್ಟಿನಲ್ಲಿ ನಮ್ಮ ಯೋಜನೆ ಮತ್ತು ಯೋಚನೆಗಳಿರಬೇಕು ಎಂದು ತಿಳಿಸಿದರು.

ಸರ್ದಾರ್ ಪಟೇಲರ ಕೊಡುಗೆ:

know_the_cm

-ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಇಚ್ಛಾಶಕ್ತಿ, ದೂರದೃಷ್ಟಿ ಮತ್ತು ಭಾರತದ ಅಖಂಡತೆ ಮತ್ತು ಏಕತೆಯ ಬಗ್ಗೆ ಅವರು ಅಚಲ ವಿಶ್ವಾಸದಿಂದ ಹಲವಾರು ರಾಜ್ಯಗಳನ್ನು ಒಟ್ಟು ಸೇರಿಸಿ ಭಾರತ ಒಕ್ಕೂಟ ರಾಷ್ಟ್ರವನ್ನಾಗಿ ಮಾಡಿದ್ದಾರೆ. ಭಾರತ ಸಾರ್ವಭೌಮ ದೇಶವಾಗಿದ್ದರೆ ಅದರ ಹಿಂದಿರುವ ಬಹುದೊಡ್ಡ ಶಕ್ತಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರದ್ದು. ತಾತ್ವಿಕ ಮತ್ತು ತಾರ್ಕಿಕ ಹೋರಾಟವನ್ನು ಮಾಡಿದರು. ಲೋಕ ಮಾನ್ಯ ತಿಲಕ್ ರಿಂದ ಹಿಡಿದು ಭಗತ್ ಸಿಂಗ್ ವರೆಗೆ ಅನೇಕ ದೇಶಭಕ್ತರನ್ನು , ಒಗ್ಗೂಡಿಸಿದರು. ರೈತರು ಮತ್ತು ಕಾರ್ಮಿಕರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವಂತೆ ಮಾಡಿದರು. ಯಾವ ದೇಶದಲ್ಲಿ ರೈತರು ಮತ್ತು ಕಾರ್ಮಿಕರು ಒಗ್ಗೂಡಿ ನಿರ್ಣಯ ಮಾಡುತ್ತಾರೆ ಅಲ್ಲಿ ಬದಲಾವಣೆ ಸಾಧ್ಯವಾಗುತ್ತದೆ. ಐತಿಹಾಸಿಕ ಬಾರ್ಡೋಲಿ ಮತ್ತು ಚಂಪಾರನ್ ಸತ್ಯಾಗ್ರಹ, ಸ್ವತಂತ್ರಕ್ಕೆ ದಾರಿಮಾಡಿಕೊಟ್ಟಿತು. ಒಂದು ಹನಿ ರಕ್ತವನ್ನೂ ಹರಿಸದೆ ಭಾರತವನ್ನು ಒಗ್ಗೂಡಿಸಿದ ಹಿರಿಮೆ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಸೇರುತ್ತದೆ. ಇಲ್ಲದಿದ್ದರೆ ಭಾರತದ ನಕ್ಷೆ ಬದಲಾಗುತ್ತಿತ್ತು. ಅದನ್ನು ನಾವೆಲ್ಲರೂ ಸದಾ ಕಾಲ ನೆನಪಿಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

371 ಜೆ:

-ಕರ್ನಾಟಕದ ಏಕೀಕರಣದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹಿರಿಯರ ಪಾತ್ರ ಬಹಳ ದೊಡ್ಡದು. ಹಿರಿಯರಿಗೆ ಈ ಸಂದರ್ಭದಲ್ಲಿ ನಮನಗಳನ್ನು ಸಲ್ಲಿಸಬೇಕು. ಏಕೀಕರಣದ ಲಾಭ ಈ ಭಾಗದ ಜನರಿಗೆ ದೊರೆಯಲಿಲ್ಲ. ಈ ಭಾಗಕ್ಕೆ ಸಂವಿಧಾನದಲ್ಲಿ 371 ಅಳವಡಿಸಲಾಗಿತ್ತು ಜೆ ವರೆಗೂ ವಿಸ್ತರಿಸಲಾಗಿದೆ. ಈ ನಿಟ್ಟಿನಲ್ಲಿ ವೈಜನಾಥ ಪಾಟೀಲರ ಕೊಡುಗೆ ಅಪಾರ. ನಮ್ಮ ನಾಯಕ ಬಿ.ಎಸ್ .ಯಡಿಯೂರಪ್ಪ ಅವರು 371 ಜೆ ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

-ಕೇವಲ ಸಂವಿಧಾನದ ತಿದ್ದುಪಡಿಯಾದರೆ ಸಾಲದು, 371 ಜೆ ನಂತರ ಎಲ್ಲರ ಬದುಕಿನಲ್ಲಿಯೂ ಬದಲಾವಣೆ ಆಗುತ್ತದೆ ಎಂಬ ಆಶಾಕಿರಣ ಮೂಡಿತ್ತು. ಆದರೆ, ಆಡಳಿತ ಮಾಡುವವರ ಮನಸ್ಥಿತಿ ಬದಲಾವಣೆಯಾಗದೆ ಈ ಭಾಗದ ಜನರ ಜೀವನ ಗುಣಮಟ್ಟದಲ್ಲಿ ಬದಲಾವಣೆ ಸಾಧ್ಯವಿಲ್ಲ ಎನ್ನುವ ಕಟು ಸತ್ಯವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಆಮೂಲಾಗ್ರ ಬಡಲಾವಣೆಯಾಗಬೇಕಿದೆ. ಸಣ್ಣಪುಟ್ಟ ಕಾರ್ಯಕ್ರಮಗಳ ಮೂಲಕ ಬದಲಾವಣೆಯನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ರಾಜ್ಯದ ಪ್ರಮುಖ ಭಾಗವಾದ ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಾಗದೆ , ಅಭಿವೃದ್ಧಿ ಚಿತ್ರಣ ಪೂರ್ಣವಾಗುವುದಿಲ್ಲ. ಕನ್ನಡ ಮಾತೆಯ ಮಕ್ಕಳ ಸಮಗ್ರ ಅಭಿವೃದ್ಧಿಯ ಚಿಂತನೆಯನ್ನು ನಮ್ಮ ಹಿರಿಯರು ಮಾಡಿದ್ದು, ಅದರ ಸಾಕಾರವಾಗಬೇಕು. ನಾವು ಮುಂದೆ ಸಾಗಬೇಕಾಗಿರುವ ದಾರಿ ಹಾಗೂ ಆ ಸಂಕಲ್ಪದಿಂದ ಮುಂದುವರೆಯಬೇಕಾದದ್ದು ಬಹಳ ಮುಖ್ಯ ಎಂದು ತಿಳಿಸಿದರು.

-ಆಶ್ವಾಸನೆಗಳು, ಘೋಷಣೆಗಳಿಂದ ಕಲ್ಯಾಣ ಕರ್ನಾಟಕದ ಕಟ್ಟಕಡೆಯ ಹಳ್ಳಿಯಲ್ಲಿರುವ ವ್ಯಕ್ತಿಯ, ರೈತ, ಮಹಿಳೆ, ಯುವಕನ ಬದುಕಿನಲ್ಲಿ ಬದಲಾವಣೆಯಾಗಬೇಕಾದರೆ, ನಾವು ಯಾವ ಕಾರ್ಯಕ್ರಮವನ್ನು ರೂಪಿಸುತ್ತೇವೆ, ಅದು ಅವರಿಗೆ ಮುಟ್ಟುವ ಕೆಲಸವಾಗಬೇಕು. ಯಾವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕಿದೆ ಅವುಗಳನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡಲಾಗುವುದು.

-ಕಲಬುರಗಿಯಲ್ಲಿ ನಾಲ್ಕು ಕ್ಲಸ್ಟರ್ ಯೋಜನೆಗಳಿವೆ ಅದು ಜನರಿಗೆ ಉಪಯುಕ್ತವಾಗಬೇಕು. ಬೀದರ್ ನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿದೆ. ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು. ಅದಕ್ಕಾಗಿ ಹೆಚ್ಚಿನ ಒತ್ತು ನೀಡಲಾಗುವುದು. ಕಲ್ಯಾಣ ಕರ್ನಾಟಕದ ಹಲವಾರು ಜಿಲ್ಲೆಗಳು ಅತ್ಯಂತ ಹಿಂದುಳಿದಿವೆ. ಶಿಕ್ಷಣಕ್ಕೆ ಬಂದರೆ, ಅತಿ ಹೆಚ್ಚು ಶಾಲೆ , ಕಾಲೇಜು ಬಿಟ್ಟ ವಿದ್ಯಾರ್ಥಿಗಳ ಸಂಖ್ಯೆ ಇಲ್ಲಿದೆ. ಅದಕ್ಕೆ ಅಗತ್ಯವಿರುವ ಸಂಸ್ಥೆ, ಶಿಕ್ಷಕರ ನೇಮಕಾತಿಯನ್ನು ಮಾಡಲಾಗುವುದು ಎಂದರು.

ಮುಖ್ಯಮಂತ್ರಿಗಳಿಂದ 96.24 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ:

-ಕಲಬುರಗಿ ನಗರದ ಡಿ.ಎ.ಆರ್. ಪೊಲೀಸ್ ಪರೇಡ್ ಮೈದಾನದಲ್ಲಿ ಜರುಗಿದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಹೆಚ್.ಎಸ್.ಆರ್. ಲೇಔಟ್‍ನಲ್ಲಿ ವಸತಿ ನಿಲಯ ಸ್ಥಾಪನೆ ಸೇರಿದಂತೆ ಕಲಬುರಗಿ ನಗರದಲ್ಲಿ ನಗರಾಭಿವೃದ್ಧಿ ಯೋಜನೆ ಹಾಗೂ ಕೆ.ಕೆ.ಆರ್.ಡಿ.ಬಿ ಮಂಡಳಿಯ ಅನುದಾನದ ಒಟ್ಟು 96.24 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

-ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಬೆಂಗಳೂರಿನ ಹೆಚ್. ಎಸ್. ಆರ್ ಲೇಔಟ್ ನಲ್ಲಿ ಬಾಲಕ-ಬಾಲಕಿಯರ ವಸತಿ ನಿಲಯ ಮತ್ತು ಆಡಳಿತ ಕಚೇರಿ ನಿರ್ಮಾಣಕ್ಕಾಗಿ 59 ಕೋಟಿ ರೂ. ವೆಚ್ಚದ ಕಾಮಗಾರಿಗೆ ಇಂದು ಅಡಿಗಲ್ಲು ಹಾಕಲಾಗಿದ್ದು, ಬೃಹತ್ ವಸತಿ ನಿಲಯ ತಲೆ ಎತ್ತಲಿದೆ. ಇದು ಈ ಭಾಗದ ಯುವಕರಿಗೆ, ನಿರುದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದರು.

-ಕಲಬುರಗಿ ನಗರದ ವಿವಿಧ ಪ್ರದೇಶಗಳಲ್ಲಿ ಕೆ.ಕೆ.ಆರ್.ಡಿ.ಬಿ, ಅನುದಾನದ 330.82 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ತೆರೆದ ಚರಂಡಿಗೆ ಕೊಳವೆ ಮಾರ್ಗಗಳ ದುರಸ್ತಿ ಮತ್ತು ಒಳಚರಂಡಿ ವ್ಯವಸ್ಥೆಗೆ ಜೋಡಣೆ ಮಾಡುವ ಕಾಮಗಾರಿಗೂ ಇಲ್ಲಿ ಚಾಲನೆ ನೀಡಲಾಯಿತು.

-ನಗರಾಭಿವೃದ್ಧಿ ಅನುದಾನದಡಿಯಲ್ಲಿ 135 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಲಬುರಗಿ ನಗರದಲ್ಲಿ ಸಿಗ್ನಲ್‍ಗಳ ಉದ್ಘಾಟನೆ ಹಾಗೂ 1738.28 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರದ ಹೀರಾಪೂರ ವೃತ್ತದಿಂದ ಎಸ್.ವಿ.ಪಿ ವೃತ್ತದವರೆಗೆ, ಅನ್ನಪೂರ್ಣ ಕ್ರಾಸ್‍ದಿಂದ ಖರ್ಗೆ ಪೆಟ್ರೋಲ್ ಬಂಕ್ ವರೆಗೂ ಹಾಗೂ ಜಗತ್ ವೃತ್ತದಿಂದ ಎಸ್.ವಿ.ಪಿ ವೃತ್ತದವರೆಗೆ ಬಸ್ ರಾಪಿಡ್(ಡಿಚಿಠಿiಜ) ಟ್ರಾನ್ಸಿಟ್ ಜೊತೆಗೆ ಸೈಕಲ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

-2020-21ನೇ ಸಾಲಿನ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ 683 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಲಬುರಗಿ ನಗರದ ಮೋಹನ್ ಲಾಡ್ಜ್ ನಿಂದ ರಾಮ ಮಂದಿರವರೆಗೆ ರಸ್ತೆ ವಿಭಜಕ, ಫುಟ್ ಪಾತ್, ವಿದ್ಯುತ್ ನಿರ್ಮಾಣ ಕಾಮಗಾರಿ ಹಾಗೂ 477.00 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಗರದ ರಾಜಾಪೂರ ಬಳಿಯ ಮುಖ್ಯ ರಸ್ತೆಯ ಸೇಡಂ ರಸ್ತೆಯಿಂದ ರಿಂಗ್ ರಸ್ತೆ ವರೆಗೂ ಸೈಕಲ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗಳಿಗೂ ಸಹ ಸಿಎಂ ಬೊಮ್ಮಾಯಿ ಅವರು ಚಾಲನೆ ನೀಡಿದರು.

-ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್. ನಿರಾಣಿ, ತೋಟಗಾರಿಕೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಸಚಿವ ಮುನಿರತ್ನ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಸಂಸದ ಡಾ. ಉಮೇಶ ಜಾಧವ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ವಿಧಾನಸಭೆ ಶಾಸಕರುಗಳಾದ ಎಂ.ವೈ.ಪಾಟೀಲ, ಬಸವರಾಜ ಮತ್ತಿಮಡು ಹಾಗೂ ವಿಧಾನ ಪರಿಷತ್ ಶಾಸಕರುಗಳಾದ ಶಶೀಲ ಜಿ. ನಮೋಶಿ, ಬಿ.ಜಿ.ಪಾಟೀಲ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಚಂದು ಪಾಟೀಲ, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರು, ಭೀಮರಾಯನಗುಡಿ ಅಚ್ಟುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕೃಷ್ಣ ಮೇಲ್ದಂಡೆ ಯೋಜನೆ (ಕಾಡಾ) ಅಧ್ಯಕ್ಷ ಶರಣಪ್ಪ ತಳವಾರ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ, ಈಶಾನ್ಯ ವಲಯದ ಪೆÇಲೀಸ್ ಮಹಾ ನಿರೀಕ್ಷಕ ಮನೀμï ಖರ್ಬಿಕರ್, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಕಲಬುರಗಿ ನಗರ ಪೆÇಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ ಶಶಿ, ಜಿಲ್ಲಾ ಪೆÇಲೀಸ್ ಅಧೀಕ್ಷಕಿ ಡಾ. ಸಿಮಿ ಮರಿಯಮ್ ಜಾರ್ಜ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ಅಪರ ಆಯುಕ್ತ ನಳಿನ್ ಅತುಲ್, ಜೆಸ್ಕಾಂ ಎಂ.ಡಿ. ರಾಹುಲ ಪಾಂಡ್ವೆ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು ಸೇರಿದಂತೆ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

*************