ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಸರ್ಕಾರದ ಕಾರ್ಯದರ್ಶಿಗಳು ಜಿಲ್ಲೆ, ತಾಲ್ಲೂಕು, ಹಳ್ಳಿಗಳಿಗೆ ಭೇಟಿ ನೀಡಬೇಕು: ಮುಖ್ಯಮಂತ್ರಿ

know_the_cm

(ವಿಕಾಸಸೌಧ, ಬೆಂಗಳೂರು), ಆಗಸ್ಟ್ 31, 2021

-ಸರ್ಕಾರದ ಕಾರ್ಯದರ್ಶಿಗಳು ಜಿಲ್ಲೆ, ತಾಲ್ಲೂಕು, ಹಳ್ಳಿಗಳಿಗೆ ಭೇಟಿ ನೀಡಬೇಕು, ತಮ್ಮ ಇಲಾಖೆಯ ಕಾರ್ಯಕ್ರಮ ಅನುಷ್ಠಾನವನ್ನು ಖುದ್ದಾಗಿ ಪರಿಶೀಲನೆ ನಡೆಸಬೇಕು, ತೊಡಕುಗಳಿದ್ದಲ್ಲಿ ಸ್ಥಳದಲ್ಲಿಯೇ ಬಗೆಹರಿಸಬೇಕು, ಆಗ ಜನರ ಬಳಿಗೆ ಸರ್ಕಾರ ಹೋದಂತಾಗುತ್ತದೆ, ಜನ ಇದ್ದಲ್ಲಿ ಅಭಿವೃದ್ದಿಯಾಗಲು ಸಾಧ್ಯ.

-ಇದು ವಿಕಾಸಸೌಧ ದಲ್ಲಿ ಮುಖ್ಯ ಕಾರ್ಯದರ್ಶಿಗಳ ಆಹ್ವಾನದ ಮೇರೆಗೆ ಸರ್ಕಾರದ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿ ಗಳೊಂದಿಗೆ ಕೆಡಿಪಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅಧಿಕಾರಿಗಳಿಗೆ ನೀಡಿದ ಸೂಚನೆ.

-ಹಿರಿಯ ಅಧಿಕಾರಿಗಳ ಈ ಕ್ರಮದಿಂದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತವೆ. ಜನರು ಅಭಿವೃದ್ಧಿ ಸುತ್ತ ಸುತ್ತುವುದಲ್ಲ, ಅಭಿವೃದ್ಧಿ ಜನರಿದ್ದ ಕಡೆ ಆಗಬೇಕು. ಆದ್ದರಿಂದ ಇಲಾಖೆ ಮುಖ್ಯಸ್ಥರು ಜಿಲ್ಲಾ ಮತ್ತು ತಾಲ್ಲೂಕುಗಳಿಗೆ ಭೇಟಿ ನೀಡಬೇಕು ಎಂದರು.‌

-ಆಡಳಿತದಲ್ಲಿ ಪಾರದರ್ಶಕತೆ ಇರಬೇಕು. ಇಲಾಖೆಗಳಲ್ಲಿ ಭ್ರಷ್ಟಾಚಾರ ನಿಯಂತ್ರಿಸಿ, ಕಡತ ವಿಲೇವಾರಿಯನ್ನು ವಿಳಂಬ ಮಾಡಬೇಡಿ. ಜನಸಾಮಾನ್ಯರ ಕೆಲಸಗಳಲ್ಲಿ ವಿಳಂಬ ಮಾಡಬಾರದು. ಅವರು ಕಚೇರಿಗಳಿಗೆ ಭೇಟಿ ನೀಡಿದಾಗ ಗೌರವ, ಸೌಜನ್ಯದಿಂದ ನಡೆಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ನುಡಿದರು.

-ಈ ಜಡತ್ವ ಒಂದೇ ದಿನದಲ್ಲಿ ಬದಲಾಗಲು ಸಾಧ್ಯವಿಲ್ಲ. ಆದರೆ ಈ ಬದಲಾವಣೆ ತರುವಲ್ಲಿ ನಿಮ್ಮ ಪಾತ್ರ ಬಹುಮುಖ್ಯವಾದುದು. ನಾವೆಲ್ಲರೂ ಸೇರಿ ಮಾಡೋಣ. ಧೈರ್ಯವಾಗಿ ಜನಪರ ಕೆಲಸ ಮಾಡಬೇಕು.ಆಡಳಿತದಲ್ಲಿ ಬದಲಾವಣೆ ಬಂದರೆ, ಜನರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯ. ಸಕಾರಾತ್ಮಕ ಚಿಂತನೆಯೊಂದಿಗೆ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

-ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳಲ್ಲಿ ಆಡಳಿತಾತ್ಮಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಿಶೀಲಿಸಲು ಸಲಹಾ ಸಮಿತಿಯನ್ನು ರಚಿಸಲಾಗುತ್ತಿದ್ದು, ನವೆಂಬರ್ 1 ರಿಂದ ಹಲವು ಆಡಳಿತ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಅವರು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.

-ಸ್ವಚ್ಛ ಭಾರತ ಯೋಜನೆ ಬಹಳ ಮಹತ್ವದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ. ಹೀಗಾಗಿ ಯೋಜನೆಯ‌ ಅನುಷ್ಠಾನದಲ್ಲಿ ನಾವು ಹಿಂದೆ ಬಿಡಬಾರದು. ಕೇಂದ್ರ ಸರ್ಕಾರದ ಯೋಜನೆಗಳು ಪರಿಣಾಮವಾಗಿ ಕಾರಿಯಾಗಿ ಅನುಷ್ಠಾನಗಳ್ಳುವಂತೆ ನೋಡಿಕೊಳ್ಳಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

-ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಮಕ್ಕಳು, ಹೆಣ್ಣುಮಕ್ಕಳ ಅಪೌಷ್ಟಿಕತೆ ನಿವಾರಣೆ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಇತರ ಜಿಲ್ಲೆಗಳಿಗೆ ಸಮಾನವಾಗಿಸಲು ಮತ್ತು ರಾಷ್ಟ್ರೀಯ ಸರಾಸರಿಯ ಮಟ್ಟಕ್ಕೆ ತರಲು, ವಿಶೇಷ ಯೋಜನೆ ರೂಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

-ಅವರು ವಿಕಾಸಸೌಧದಲ್ಲಿ ಮುಖ್ಯ ಕಾರ್ಯದರ್ಶಿಗಳ ಆಹ್ವಾನದ ಮೇರೆಗೆ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಕೆಡಿಪಿ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

-ಮಹಿಳಾ ಮತ್ತು ಮಕ್ಕಳ ವಿಚಾರದಲ್ಲಿ ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದು ಹಾಗೂ ಶಿಕ್ಷಣದಲ್ಲಿಯೂ ಹಿಂದುಳಿದಿದ್ದಾರೆ. ಈ ಮೂರು ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಹೆಣ್ಣುಮಕ್ಕಳು ಮತ್ತು ಮಕ್ಕಳ ಆರೋಗ್ಯ ಮತ್ತು ಶಿಕ್ಷಣದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಮಟ್ಟಕ್ಕೆ ಒಯ್ಯಲು ವಿಶೇಷ ಯೋಜನೆ ರೂಪಿಸಲಾಗುವುದು.

-ಇಂದಿನ ಸಭೆಯಲ್ಲಿ ಹಲವಾರು ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಗಿದೆ. ಎರಡನೇ ತ್ರೈಮಾಸಿಕ ಅಂತ್ಯವಾಗುತ್ತಿದೆ. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಬಿಡುಗಡೆಯಾದ ಅನುದಾನಕ್ಕೆ ಎದುರು ಆಗಿರುವ ವೆಚ್ಚಗಳ ಬಗ್ಗೆ ಪರಿಶೀಲಿಸಲಾಯಿತು. ಮುಂದಿನ ತ್ರೈಮಾಸಿಕದ ಒಳಗೆ, ನೀಡಲಾದ ಗುರಿ ಸಾಧನೆಯಾಗಬೇಕು ಎಂದು ಸೂಚಿಸಲಾಗಿದೆ.

-ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರದ ಪಾಲು ಬಿಡುಗಡೆಯಾದ ಕೂಡಲೇ ರಾಜ್ಯದ ಪಾಲನ್ನೂ ಬಿಡುಗಡೆ ಮಾಡಿ, ಜನರಿಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಕೇಂದ್ರ ಅನುದಾನ ಸದ್ಬಳಕೆಗೆ ಹೆಚ್ಚಿನ ಒತ್ತು ಕೊಡಬೇಕೆಂದು ಸೂಚಿಸಲಾಯಿತು ಎಂದು ತಿಳಿಸಿದರು.

-ಅನುದಾನ ಬಿಡುಗಡೆಯಾಗಿದ್ದಲ್ಲಿ ಅಭಿವೃದ್ಧಿ ಮತ್ತು ಇತರ ವೆಚ್ಚಗಳಿಗೆ ಬಳಕೆಯಾಗುವ ಮೊತ್ತದ ವಿವರ ಮುಂದಿನ ಸಭೆಯಲ್ಲಿ ಒದಗಿಸುವಂತೆ ಸೂಚಿಸಲಾಗಿದೆ. ಕಡತಗಳು ನಗರಾಭಿವೃದ್ಧಿ, ಕಂದಾಯ, ಶಿಕ್ಷಣ ಮೊದಲಾದ ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಲೇವಾರಿಗೆ ಬಾಕಿ ಇದ್ದು, ಇವುಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ ಎಂದರು.

-ನ್ಯಾಯಾಲಯ ಪ್ರಕರಣಗಳು ಹೆಚ್ಚಿರುವ ಇಲಾಖೆಗಳಲ್ಲಿ ಇಲಾಖೆಯ ಉಪ ಕಾರ್ಯದರ್ಶಿ ಅಥವಾ ಅಧೀನ ಕಾರ್ಯದರ್ಶಿಯವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿ, ಕಾನೂನು ಇಲಾಖೆ ಮತ್ತು ವಕೀಲರ ತಂಡದೊಂದಿಗೆ ಸಮನ್ವಯ ವಹಿಸಿ, ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

*************