ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ರೈತರು ಮತ್ತು ಬಡವರಿಗೆ ಸ್ಪಂದನವೇ ಸರ್ಕಾರದ ಗುರಿ, ಉದ್ಯೋಗ ಸೃಜನೆಗೆ ಆದ್ಯತೆ - ಮುಖ್ಯಮಂತ್ರಿ

know_the_cm

(ಹಾವೇರಿ), ಆಗಸ್ಟ್ 28, 2021

-ರೈತರು, ಬಡವರು,ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸ್ಪಂದಿಸುವುದೇ ಸರ್ಕಾರದ ಧ್ಯೇಯವಾಗಿದೆ.

ಹಾವೇರಿಯಲ್ಲಿ ಅಭಿವೃದ್ಧಿ ಪರ್ವ:

-ಹಾವೇರಿ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ.ಶಿಗ್ಗಾಂವಿಯಲ್ಲಿ ಮೆಗಾ ಜವಳಿ ಪಾರ್ಕ್, ಹಾವೇರಿಯಲ್ಲಿ ಒಂದು ಸಾವಿರ ಎಕರೆಯ ಕೈಗಾರಿಕಾ ಟೌನ್‌ಶಿಪ್ ಸ್ಥಾಪಿಸಿ ಉದ್ಯೋಗ ಸೃಜನೆಗೆ ಒತ್ತು ನೀಡಲಾಗುವುದು.ಶಹರದ ಕೊಳಚೆ ಪ್ರದೇಶಗಳಲ್ಲಿ ಕೊವಿಡ್ ಲಸಿಕಾಕರಣಕ್ಕೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

-ಜಂಗಮನಕೊಪ್ಪದ ಕೆಎಂಎಫ್ ಘಟಕದಲ್ಲಿ ನೂತನ ಡೇರಿ ಹಾಗೂ ಯು‌ಹೆಚ್‌ಟಿ ಹಾಲು ಪ್ಯಾಕಿಂಗ್ ಘಟಕದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.

-ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದೂವರೆ ಗಂಟೆಗಳ ಅವಧಿಯಲ್ಲಿ ರೈತರ ಮಕ್ಕಳಿಗೆ ಶಿಷ್ಯವೇತನ ಘೋಷಿಸಿದೆ.ಸೆ.5 ರಂದು ಕೇಂದ್ರ ಕೃಷಿ ಸಚಿವರು ಮಹತ್ವಾಕಾಂಕ್ಷೆಯ ಈ ಯೋಜನೆಗೆ ಚಾಲನೆ ನೀಡುವರುಇದಕ್ಕಾಗಿ ಒಂದು ಸಾವಿರ ಕೋಟಿ ರೂ.ಮೀಸಲಿಡಲಾಗಿದೆ.20 ಲಕ್ಷ ಮಕ್ಕಳಿಗೆ ಪ್ರಯೋಜನವಾಗಲಿದೆ.ಗ್ರಾಮೀಣ ಪ್ರದೇಶದಲ್ಲಿ ಶೇ.90 ರಿಂದ 95 ರಷ್ಟು ಜನರ ಹಂಚಿನ ಮನೆಗಳಿದ್ದರೆ,ಮನೆಯಲ್ಲಿ ಯಾರಾದರೊಬ್ಬವರು ವಿದ್ಯಾವಂತರಿದ್ದು ಕೃಷಿಯ ಜೊತೆಗೆ ಪೂರಕ ಉದ್ಯೋಗ,ನೌಕರಿಗಳನ್ನು ಮಾಡುವವರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿರುವುದನ್ನು ಗಮನಿಸಿ ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.

-ಶಿಕ್ಷಣ,ನೈತಿಕ ಮೌಲ್ಯಗಳು ಹಾಗೂ ಕೌಶಲ್ಯಕ್ಕೆ ಆದ್ಯತೆ ನೀಡಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿಯೇ ಮೊಟ್ಟಮೊದಲು ಜಾರಿಗೊಳಿಸಿದ ಶ್ರೇಯಸ್ಸು ಕರ್ನಾಟಕ ರಾಜ್ಯದ್ದಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ಸಲುವಾಗಿ ದೆಹಲಿಯಲ್ಲಿ ಉನ್ನತಮಟ್ಟದ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುತ್ತಿದೆ.ದೆಹಲಿಯ ಮೆಗಾ ಟೆಕ್ಸ್‌ಟೈಲ್ ಪಾರ್ಕಿಗೆ ಭೇಟಿ ನೀಡಲಾಗಿದೆ.ಅದೇ ಮಾದರಿಯಲ್ಲಿ ಉದ್ಯೋಗ ಸೃಜನೆಯ ಕ್ರಮವಾಗಿ ಶಿಗ್ಗಾಂವಿಯಲ್ಲಿ ಜವಳಿ ಪಾರ್ಕ್ ,ಹಾವೇರಿಯಲ್ಲಿ ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್‌ಶಿಪ್ ನಿರ್ಮಿಸಲು ಕ್ರಮವಹಿಸಲಾಗಿದೆ.ರಾಜ್ಯವನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲು ಚಿಂತನೆ ನಡೆದಿದೆ.ಎಲ್ಲಾ ಹಳ್ಳಿಗಳಿಗೂ ಉತ್ತಮ ಗುಣಮಟ್ಟದ ಇಂಟರ್‌ನೆಟ್,ಬ್ರಾಡ್‌ಬ್ಯಾಂಡ್ ಸೌಲಭ್ಯ ಒದಗಿಸಿದರೆ ಆಡಳಿತ,ಸರಕಾರದ ಸೌಲಭ್ಯಗಳ ವಿತರಣೆ,ರೈತರ ಚಟುವಟಿಕೆಗಳಿಗೂ ಅನುಕೂಲವಾಗಲಿದೆ ಎಂದರು.

-ಕೋವಿಡ್ ನಿರ್ವಹಣೆಯಲ್ಲಿ ಬಿಗಿಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ಮುಂದಿನ ತಿಂಗಳು ರಾಜ್ಯಕ್ಕೆ ಸುಮಾರು ಒಂದು ಕೋಟಿ ಡೋಸ್ ಲಸಿಕೆ ನಿರೀಕ್ಷಿಸಲಾಗುತ್ತಿದೆ.ಈಗಾಗಲೇ 80 ಲಕ್ಷ ಲಸಿಕೆ ನೀಡಲಾಗಿದೆ.ರಾಜ್ಯದಲ್ಲಿ ಪ್ರತಿದಿನ 5 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.ಅಕ್ಟೋಬರ್ ಹೊತ್ತಿಗೆ ರಾಜ್ಯದ ಪ್ರತಿಯೊಬ್ಬರಿಗೂ ಮೊದಲ ಡೋಸ್ ಲಸಿಕೆ ಪೂರ್ಣಗೊಳಿಸುವ ಗುರಿ ಇದೆ.ಕೋವಿಡ್ ಸಂಭಾವ್ಯ ಮೂರನೇ ಅಲೆ ತಡೆಗೆ ಲಸಿಕಾಕರಣವೇ ಮುಖ್ಯವಾಗಿದೆ.ನಗರದ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಲಸಿಕೆ ನೀಡಲು ವಿಶೇಷ ಕಾರ್ಯಾಚರಣೆ ಹಾಕಿಕೊಳ್ಳಲಾಗುವುದು.

-ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜಾರಿಗೆ ಬಂದ ಪ್ರತಿ ಕ್ಷೇತ್ರದ ಕೆರೆಗಳನ್ನು ತುಂಬಿಸುವ ಯೋಜನೆಯು ಅನುಷ್ಠಾನಗೊಳ್ಳುತ್ತಿದೆ.ಹಿರೇಕೆರೂರು ತಾಲೂಕಿನಲ್ಲಿ ಈಗಾಗಲೇ ಕೆರೆ ತುಂಬಿಸಿ ಲೋಕಾರ್ಪಣೆ ಮಾಡಲಾಗಿದೆ.ಬ್ಯಾಡಗಿ,ಹಾನಗಲ್ ತಾಲೂಕುಗಳಲ್ಲಿ ತಲಾ ಎರಡು ಕೆರೆಗಳನ್ನು ತುಂಬಿಸುವ ಕಾರ್ಯ ಮುಂದಿನ 6-7 ತಿಂಗಳಲ್ಲಿ ಪೂರ್ಣವಾಗಲಿದೆ.ಶಿಗ್ಗಾಂವ ಸವಣೂರು ತಾಲೂಕುಗಳಲ್ಲಿ ಬರುವ ಅಕ್ಟೋಬರ್‌ನಲ್ಲಿ ಲೋಕಾರ್ಪಣೆ ಮಾಡಲಾಗುವುದು.

-ತುಂಗಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಯಲ್ಲಿ ಬರುವ ಎಲ್ಲಾ ಅಚ್ಚುಕಟ್ಟು ಪ್ರದೇಶದ ಕಾಮಗಾರಿಗಳನ್ನು ಮುಂದಿನ ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು.

-ಎಲ್ಲಾ ತಾಲೂಕುಗಳಲ್ಲಿ ಕೇಂದ್ರ ಸರ್ಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಲ್ಲಿ ಆಯ್ಕೆಯಾದ ಜಿಲ್ಲೆಯ ಮೆಣಸಿನಕಾಯಿ ಹಾಗೂ ಮಾವು ಬೆಳೆಯ ಉತ್ಪಾದನೆ ಹೆಚ್ಚಳ ಹಾಗೂ ಸಂಸ್ಕರಣ ಚಟುವಟಿಕೆಗಳಿಗೆ ನಬಾರ್ಡ್‌ನಿಂದ ಹಣಕಾಸಿನ ನೆರವು ನೀಡಲಾಗುವುದು. ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಮಗಾರಿ ನಡೆದಿದ್ದು ಮುಂಬರುವ 18 ತಿಂಗಳಲ್ಲಿ ಆಡಳಿತ ಮತ್ತು ಬೋಧನಾ ವಿಭಾಗ ಪೂರ್ಣಗೊಳಿಸಿ ಎಂಬಿಬಿಎಸ್ ಪ್ರವೇಶ ಪ್ರಾರಂಭಿಸಲಾಗುವುದು.ಜಂಗಮನಕೊಪ್ಪದ ಮೆಗಾ ಡೇರಿಯೂ ಕೂಡ ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ.ಜನತೆಯ ಆಶೋತ್ತರಗಳ ಈಡೇರಿಕೆಗೆ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸಲಿದೆ.ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದು ಶೀಘ್ರವೇ ಆಯುಕ್ತರನ್ನು ನೇಮಿಸಿ, ಅನುದಾನ ಒದಗಿಸಲಾಗುವುದು.

-ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ,ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ,ಕೃಷಿ ಸಚಿವ ಬಿ.ಸಿ.ಪಾಟೀಲ ,ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಶಾಸಕ ನೆಹರು ಓಲೇಕಾರ,ಧಾರವಾಡ,ಹಾವೇರಿ,ಗದಗ ಹಾಗೂ ಉತ್ತರ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಹಾಗೂ ಇತರರು ಉಪಸ್ಥಿತರಿದ್ದರು.

*************